ADVERTISEMENT

ಸಂಗತ | ಗ್ರಾಮೀಣ ಮಕ್ಕಳಿಗೆ ‘ಕಲೆ’ ಬೇಡವೆ?

ರಾಜಕುಮಾರ ಕುಲಕರ್ಣಿ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
   
ಮಕ್ಕಳ ಸಂಖ್ಯೆ ಕಡಿಮೆ ಎನ್ನುವ ಕಾರಣದಿಂದಾಗಿ ‘ವಿಶೇಷ ಶಿಕ್ಷಕ’ರ ವರ್ಗಾವಣೆ ಸರಿಯಲ್ಲ. ಇದರಿಂದ ಗ್ರಾಮೀಣ ಶಾಲೆಗಳ ಮಕ್ಕಳ ಕಲಾಸಕ್ತಿಯನ್ನು ಚಿವುಟಿದಂತಾಗುತ್ತದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರನ್ನು 240ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಸಾಮೂಹಿಕವಾಗಿ ವರ್ಗಾವಣೆ ಮಾಡಲು ಮುಂದಾಗಿರುವ ವಿಷಯ ಓದಿ ಖೇದವೆನಿಸಿತು (ಪ್ರ.ವಾ., ಜುಲೈ 12). ಚಿತ್ರಕಲೆ, ಸಂಗೀತ, ನಾಟಕ ಮತ್ತು ನೃತ್ಯದಂತಹ ಸೃಜನಶೀಲ ಕಲೆಗಳ ಕುರಿತು ಸಮಾಜದಲ್ಲಿ ಅವಗಣನೆ ಇರುವ ಸನ್ನಿವೇಶದಲ್ಲಿ, ವಿಶೇಷ ಶಿಕ್ಷಕರ ಸಾಮೂಹಿಕ ವರ್ಗಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಂಗೀತ, ನಾಟಕ, ನೃತ್ಯ ಮತ್ತು ಚಿತ್ರಕಲೆ ಬಗ್ಗೆ ಬೋಧಿಸುವವರನ್ನು ವಿಶೇಷ ಶಿಕ್ಷಕರೆಂದು ಕರೆಯಲಾಗುತ್ತದೆ. ಪ್ರಸ್ತುತ, 240ಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ ಶಿಕ್ಷಕ’ರ ಪಟ್ಟಿಗೆ ಸೇರಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅವರ ವರ್ಗಾವಣೆಗೆ ಮುಂದಾಗಿದೆ.

ಗ್ರಾಮೀಣ ಪ್ರದೇಶಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಗುಣಾತ್ಮಕ ಶಿಕ್ಷಣದ ಹಂಬಲದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ವಾಸ್ತವ ಹೀಗಿರುವಾಗ, ಗ್ರಾಮೀಣ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯನ್ನು ನಿರೀಕ್ಷಿಸುವುದು ಸರಿಯಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎನ್ನುವ ಕಾರಣದಿಂದ, ಅಲ್ಲಿನ ವಿಶೇಷ ಶಿಕ್ಷಕರನ್ನು ವರ್ಗಾವಣೆ ಮಾಡುವುದೂ ಸರಿಯಾದ ಕ್ರಮವಲ್ಲ. ಚಿತ್ರಕಲೆ, ಸಂಗೀತ, ನಾಟಕದಂತಹ ಕಲೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವುದು ಯಾವ ನ್ಯಾಯ? ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವಲ್ಲಿ ಪ್ರತಿಭೆಗೆ ಬರ ಎನ್ನುವ ಅತಾರ್ಕಿಕ ನಿಲುವು ತಳೆಯುವುದಾದರೂ ಹೇಗೆ ಸಾಧ್ಯ?

ADVERTISEMENT

ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಗಣಿತ, ವಿಜ್ಞಾನದಂತಹ ಜ್ಞಾನಶಿಸ್ತುಗಳ ಜೊತೆಗೆ ಭಾಷೆ, ಚಿತ್ರಕಲೆ, ನಾಟಕ, ನೃತ್ಯ, ಸಂಗೀತ ಮತ್ತು ಸಾಹಿತ್ಯಕ್ಕೆ ಮುಖ್ಯವಾದ ಸ್ಥಾನವಿದೆ. ಕೆಲವು ವಿದ್ಯಾರ್ಥಿಗಳು ಭಾಷೆ ಮತ್ತು ಇತರ ಜ್ಞಾನಶಿಸ್ತುಗಳ ವಿಷಯಗಳ ಕಲಿಕೆಯಲ್ಲಿ ಹಿಂದಿದ್ದರೂ, ಚಿತ್ರಕಲೆ, ನಾಟಕ ಮತ್ತು ಸಂಗೀತದ ಕಲಿಕೆಯಲ್ಲಿ ಹೆಚ್ಚಿನ ಪ್ರತಿಭೆ ಉಳ್ಳವರಾಗಿರಬಹುದು. ವಿಶೇಷ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ವರ್ಗಾವಣೆ ಮಾಡುವುದರಿಂದ ವಿವಿಧ ಕಲೆಗಳಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ.

ವಿಶೇಷ ಶಿಕ್ಷಕರ ವರ್ಗಾವಣೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ವಿಷಯದಲ್ಲಿ ಸರ್ಕಾರವೇ ತಾರತಮ್ಯ ಮಾಡಿದಂತಾ ಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಮಾನದಂಡ ಆಗಿಟ್ಟುಕೊಂಡರೆ, ಆಗ ವಿಶೇಷ ಶಿಕ್ಷಕರು ಗ್ರಾಮೀಣ ಶಾಲೆಗಳಿಂದ ನಗರ ಶಾಲೆಗಳಿಗೆ ವರ್ಗಾವಣೆಗೊಳ್ಳುವರು. ಹೀಗಾದಾಗ, ಗ್ರಾಮೀಣ ಶಾಲೆಗಳಲ್ಲಿ ಓದುತ್ತಿರುವ ಚಿತ್ರಕಲೆ ಮತ್ತು ಸಂಗೀತದಲ್ಲಿ ಆಸಕ್ತಿಯುಳ್ಳ ಮಕ್ಕಳು ಸೃಜನಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರವೇ ಗ್ರಾಮೀಣ ಮಕ್ಕಳ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ. ಪರೀಕ್ಷೆ, ಅಂಕಗಳಿಕೆ, ಸಿಇಟಿ– ನೀಟ್‌ಗೆ ಆದ್ಯತೆ ನೀಡುತ್ತ, ಮಕ್ಕಳನ್ನು ಯಂತ್ರಗಳಂತೆ ರೂಪಿಸಲಾಗುತ್ತಿದೆ; ಅವರನ್ನು ಕಲಾಪ್ರಕಾರಗಳಿಂದ ದೂರವಾಗಿಸಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಗಣಿತ, ವಿಜ್ಞಾನದಂತಹ ವಿಷಯಗಳಿಗೆ ಹೆಚ್ಚು ಮಹತ್ವ ನೀಡಿ, ಭಾಷೆ ಮತ್ತಿತರ ವಿಷಯಗಳನ್ನು ಕಾಟಾಚಾರಕ್ಕೆನ್ನುವಂತೆ ಕಲಿಸಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿನ ವಿಶೇಷ ಶಿಕ್ಷಕರ ಪ್ರತಿಭೆ ವರ್ಷದ ಕೊನೆಗೆ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗುತ್ತಿದೆ. ಶಾಲೆಯ ಮಧ್ಯಂತರ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ದೈಹಿಕ ಕಸರತ್ತಿಗೆ ಒಳಪಡಿಸುವ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ಇಲ್ಲದಂತಾಗಿದೆ. ಈ ಎಲ್ಲದಕ್ಕೂ ಪಾಲಕರ ಒತ್ತಾಸೆ ಇರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತ ಗಳಲ್ಲೊಂದು. ಸರ್ಕಾರಿ ಶಾಲೆಗಳಲ್ಲಾದರೂ ಚಿತ್ರಕಲೆ ಮತ್ತು ಸಂಗೀತದಂತಹ ಕಲೆಗಳ ಅಧ್ಯಯನಕ್ಕೆ ಆದ್ಯತೆ ನೀಡಲಾಗುತ್ತಿದೆ ಎನ್ನುವ ಭರವಸೆ ಇತ್ತು. ಶಿಕ್ಷಣ ಇಲಾಖೆಯ ಧೋರಣೆಯಿಂದಾಗಿ ಈಗ ಆ ಭರವಸೆಯೂ ಇಲ್ಲವಾಗಿದೆ.

ವಿಶೇಷ ಶಿಕ್ಷಕರು ಶಾಲೆಗಳಲ್ಲಿ ಚಿತ್ರಕಲೆ, ಸಂಗೀತ, ನಾಟಕ, ನೃತ್ಯದ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕಲಾತ್ಮಕ ಕೌಶಲ ಮತ್ತು ಜೀವನ ಕೌಶಲಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುವರು. ಈ ಪ್ರಕಾರದ ಶಿಕ್ಷಣ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ, ಅವರ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೃಜನಶೀಲ ಕಲೆಗಳು ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ, ಸಹಕಾರ ಮತ್ತು ಸ್ವಯಂ ಅಭಿವ್ಯಕ್ತಿಯ ಕೌಶಲಗಳನ್ನು ಕಲಿಸುತ್ತವೆ. ಚಿತ್ರಕಲೆ, ಸಂಗೀತ, ನೃತ್ಯದಲ್ಲಿ ಪರಿಣತಿ ಹೊಂದಿದವರು ಸರ್ಕಾರಿ ಉದ್ಯೋಗವನ್ನು ಅವಲಂಬಿಸದೆ, ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಬಹುದು.

ವಿಶೇಷ ಶಿಕ್ಷಕರನ್ನು ವರ್ಗಾಯಿಸುವ ಕುರಿತು ಶಿಕ್ಷಣ ತಜ್ಞರು, ಪ್ರಜ್ಞಾವಂತರು ಧ್ವನಿ ಎತ್ತಬೇಕು. ಶಿಕ್ಷಣ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿದು ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಸೃಜನಶೀಲ ಶಿಕ್ಷಣ ದೊರೆಯುವಂತಾಗಬೇಕು. ಆ ಮೂಲಕ, ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಎನ್ನುವ ಹೇಳಿಕೆ ಕಾರ್ಯರೂಪಕ್ಕೆ ಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.