
ಪಿವಿ ವೈಬ್ಸ್
ಜೀವನದಲ್ಲಿ ತಪ್ಪುಗಳಿಂದ ಪಾಠ ಕಲಿಯಬೇಕೆಂಬುದು ಸಾರ್ವತ್ರಿಕ ಸತ್ಯ. ಆದರೆ ಯಾರ ತಪ್ಪಿನಿಂದ ಎಂಬುದು ಪ್ರಶ್ನೆ. ಜಗತ್ತು ಹೇಗಿದೆ ಎಂದರೆವ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ತಪ್ಪು ನಮಗೆ ತಪ್ಪು ಎಂದು ಅನ್ನಿಸುವುದೇ ಇಲ್ಲ. ಆದರೆ, ಬೇರೆಯವರ ತಪ್ಪನ್ನು ನಾವು ಬಹುಬೇಗ ಗುರುತಿಸಬಲ್ಲೆವು. ಇರಲಿಬಿಡಿ, ಬೇರೆಯವರ ತಪ್ಪನ್ನು ನಾವು ಗುರುತಿಸಿ ಮಾಡುತ್ತಿರುವುದಾದರೂ ಏನನ್ನು? ಆ ಬಗ್ಗೆ ಒಂದಷ್ಟು ವ್ಯಂಗ್ಯ, ಒಂದಷ್ಟು ಕುಹಕ, ಬೇರೆ ಯಾರದ್ದೂ ಮುಂದೆ ಆಡಿಕೊಂಡು ನಗುವ ಸರಕನ್ನಾಗಿ ಬೇರೆಯವರ ತಪ್ಪನ್ನು ಬಳಸಿಕೊಳ್ಳುತ್ತಿದ್ದೇವೆ. ಆದರೆ ನಿಜವಾಗಿ ನಾವು ಹಾಗೆ ಗುರುತಿಸಿದ ತಪ್ಪನ್ನು ಆದರಿಸಿ ಏನು ಮಾಡಬಹುದಿತ್ತು? ಅದನ್ನು ಆಮೇಲೆ ಯೋಚಿಸೋಣ.
ಮತ್ತೆ ನಮ್ಮ ತಪ್ಪುಗಳ ವಿಚಾರಕ್ಕೇ ಬರುವುದಾದರೆ, ಒಮ್ಮೆ ಬದುಕಿನಲ್ಲಿ ತಪ್ಪು ಮಾಡಿದ ಬಳಿಕ ಅದು ತಪ್ಪು ಎಂಬುದು ಅರಿವಾಗಲು ಕೆಲವೊಮ್ಮೆ ಸ್ವಲ್ಪ ಸಮಯ ಬೇಕಾಗಬಹುದು. ಏಕೆಂದರೆ ಎಲ್ಲ ಸಂದರ್ಭದಲ್ಲಿ ನಾವು ಮಾಡಿದ ಕೆಲಸದ, ಆಡಿದ ಮಾತಿನ ಪರಿಣಾಮ ತಕ್ಷಣವೇ ಗೊತ್ತಾಗುವುದಿಲ್ಲ. ಕೆಲವು ಸಂದರ್ಭದಲ್ಲಿ ಅದು ತಪ್ಪೆಂಬುದು ತಕ್ಷಣವೇ ಗೊತ್ತಾಗಲೂಬಹುದು ಬಿಡಿ. ಹೇಗೇ ಇದ್ದರೂ ಒಮ್ಮೆ ತಪ್ಪು ಮಾಡಿದ ಬಳಿಕ ಎರಡನೇ ಬಾರಿಗೆ ಅದನ್ನು ತಿದ್ದಿಕೊಂಡು ಅಂಥ ತಪ್ಪು ಮತ್ತೊಂದು ಬಾರಿಗೆ ಮರುಕಳಿಸದಂತೆ ಎಚ್ಚರ ವಹಿಸುವುದು ಸಹಜವಾಗಿ ಬುದ್ಧಿವಂತರ ಲಕ್ಷಣ. ಇದು ನಾವೇ ಮಾಡುವ ತಪ್ಪುಗಳ ವಿಚಾರ ಆಯಿತು. ಆದರೆ ಜ್ಞಾನಿಯಾದವ, ಸೂಕ್ಷ್ಮಮತಿಯಾದವ ಹಾಗೂ ಜೀವನದಲ್ಲಿ ಯಶಸ್ಸಿನ ಗುರಿ ಬೆಂಬತ್ತಿ ಹೊರಟವ ಪಾಠ ಕಲಿಯಲು ತನ್ನ ತಪ್ಪಿಗಾಗಿಯೇ ಕಾಯುತ್ತ ಕುಳಿತಿರುವುದೇ ಇಲ್ಲ. ಎಡದ ಎತ್ತಿಗೆ ಹೊಡೆದರೆ ಬಲದ ಎತ್ತಿಗೂ ತಾಗುತ್ತದೆ ಎಂಬ ಮಾತನ್ನೂ ಮೀರಿ ಆತ ತನ್ನ ಯಶಸ್ಸಿನ ಪಯಣವನ್ನು ಯೋಜಿಸಿಕೊಳ್ಳುತ್ತಾನೆ. ಅವನ ಪಾಲಿಗೆ ತನ್ನ ಪಯಣದಲ್ಲಿ ಸಿಗುವ ಪ್ರತಿಯೊಂದು ವಿಷಯ, ವಸ್ತು, ಘಟನೆಗಳೂ ಪಾಠವೇ.
ರೇಸಿಗೆ ಬಿದ್ದು ಓಡುತ್ತಿರುವ ಈ ದಿನಗಳಲ್ಲಿ ಮುಂದಿನ ಹಾದಿ ಹೇಗಿದೆ ಎಂಬುದನ್ನು ಪರಿಶೀಲಿಸಿಕೊಂಡು ಓಟಕ್ಕಿಳಿಯುವಷ್ಟು ತಾಳ್ಮೆ ಮತ್ತು ಸಮಯ ಎರಡೂ ಇರುವುದಿಲ್ಲ. ಹಾಗೆ ಕೂತರೆ ನಮ್ಮ ಪಕ್ಕದಲ್ಲೇ ಇನ್ನೊಬ್ಬರು ಓಡಿ ಮುಂದಕ್ಕೆ ಸಾಗಿಬಿಟ್ಟಿರುತ್ತಾರೆ. ಹಾದಿ ಎಂಥದ್ದೇ ಇರಲಿ ಓಡುವುದು ನಿರಂತರವಾಗಿರಬೇಕು. ನಮ್ಮೊಂದಿಗೆ ಓಡುತ್ತಿರುವವನು ಒಮ್ಮೆ ಕಲ್ಲಿಗೆ ಸಿಕ್ಕು ಎಡವಿದಾಕ್ಷಣವೇ ನಾವು ಎಚ್ಚೆತ್ತುಕೊಳ್ಳಬೇಕು. ಈ ಹಾದಿಯಲ್ಲಿ ಎಲ್ಲವೂ ಸರಿಯಾಗಿಲ್ಲ, ಮುಂದೆ ನಮ್ಮ ಕಾಲಿಗೂ ಕಲ್ಲು ಎಡವಬಹುದು ಎಂಬುದನ್ನು ಗ್ರಹಿಸಿ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇನ್ನೊಬ್ಬ ಹಳ್ಳದಲ್ಲಿ ಮುಗ್ಗರಿಸಿದ ತಕ್ಷಣವೇ ನಮಗೆ ಎದುರಾಗಬಹುದಾದ ಹಳ್ಳದ ಬಗ್ಗೆ ಜಾಗೃತೆವಹಿಸಬೇಕು. ಮಗದೊಬ್ಬ ದಿಣ್ಣೆಯನ್ನು ಏರಲಾಗದೇ ಏದುರಿಸು ಬಿಡುತ್ತಿರುವುದನ್ನು ಗಮನಿಸಿ, ಬದುಕಿನ ಮ್ಯಾರಾಥಾನ್‌ನಲ್ಲಿ ನಾವು ಏರಬೇಕಿರುವ ದಿಣ್ಣೆಯನ್ನು ಊಹಿಸಿ ಶಕ್ತಿನ್ನು ಒಗ್ಗೂಡಿಸಿಕೊಳ್ಳಬೇಕು.
ನಮ್ಮ ಗುರಿ ಮುಟ್ಟಲು ನಾವು ಏಕಾಗ್ರತೆಯನ್ನು ಸಾಧಿಸುವ ಸಂದರ್ಭದಲ್ಲೇ ಸುತ್ತಮುತ್ತಲಿನ ಪ್ರತಿಯೊಂದು ಅಗುಹೋಗುಗಳನ್ನೂ ಅವಲೋಕಿಸುವ ಸೂಕ್ಷ್ಮತೆಯನ್ನೂ ಮೈಗೂಡಿಸಿಕೊಳ್ಳಬೇಕು. ನಮ್ಮ ಪಕ್ಕದಲ್ಲಿರುವ ತಪ್ಪುಗಳೂ ನಮಗೆ ಪಾಠವಾಗಬೇಕು. ಅದು ನಮ್ಮನ್ನು ವೈಫಲ್ಯದಿಂದ ದೂರವಿಡುವ ಸಾಧನವಾಗಬೇಕು. ಜೀವನದಲ್ಲಿ ಎಲ್ಲವೂ ನಮ್ಮದೇ ಅನುಭವವಾಗಬೇಕೆಂದೇನೂ ಇಲ್ಲ. ಅಂಥ ಅಗತ್ಯವೂ ಇರುವುದಿಲ್ಲ. ಸೋಲಿನಿಂದ ದೂರವಿರಲು ಇದು ಯುಕ್ತ ಮಾರ್ಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.