ADVERTISEMENT

ಕೃಷಿ ಸಿಂಚಾಯಿ: ಹನಿ ನೀರಾವರಿ ಅಳವಡಿಸಿಕೊಂಡ ರೈತರಿಗೆ ಸಿಗಲಿದೆ ಸರ್ಕಾರದ ಸಹಾಯಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2025, 5:14 IST
Last Updated 20 ಸೆಪ್ಟೆಂಬರ್ 2025, 5:14 IST
   

ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಬಹುತೇಕ ರೈತರು ಕೃಷಿ ಚಟುವಟಿಕೆಗಳಿಗೆ ಕೃತಕ ನೀರಿನ ಮೂಲಗಳನ್ನು ಬಳಸುತ್ತಾರೆ. ಪ್ರತಿ ಹನಿಗೂ ಹೆಚ್ಚಿನ ಬೆಳೆ’ ಎಂಬ ಪರಿಕಲ್ಪನೆಯ ಭಾಗವಾಗಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಕೃಷಿ ಭೂಮಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಮಾಡಲು ಸಹಾಯಧವನ್ನು ಈ ಯೋಜನೆಯ ಮೂಲಕ ನೀಡಲಾಗುತ್ತದೆ. 

ಈ ಯೋಜನೆಯನ್ನು 2015ರ ಜುಲೈ 1ರಂದು ಜಾರಿಗೆ ತರಲಾಯಿತು. ಈ ಯೋಜನೆಯು ಮುಖ್ಯವಾಗಿ ಸೂಕ್ಷ್ಮ ನೀರಾವರಿ (ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ) ಮೂಲಕ ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಕೃಷಿಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಯಾವುವು? ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ..  

ಯೋಜನೆಯ ಉದ್ದೇಶವೇನು? 

ADVERTISEMENT
  • ನೀರಿನ ಸೂಕ್ತ ನಿರ್ವಹಣೆಯ ಮೂಲಕ ಬೆಳೆಗಳ ಉತ್ಪಾದಕತೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುವುದು.

  • ಕಬ್ಬು, ಬಾಳೆ, ಹತ್ತಿ ಮುಂತಾದ ಹೆಚ್ಚು ನೀರು ಬೇಕಾಗುವ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ತಂತ್ರಜ್ಞಾನ ಅಳವಡಿಸುವುದನ್ನು ಉತ್ತೇಜಿಸುವುದು. 

  • ನೀರಿನ ಕೊರತೆಯಿರುವ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ದಿ ಮತ್ತು ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಬಳಸುವಂತೆ ರೈತರನ್ನು ಉತ್ತೇಜಿಸುವುದು.

  • ಕೃಷಿಯಲ್ಲಿ ಸೌರಶಕ್ತಿಯ ಬಳಕೆ ಮಾಡುವುದು.

  • ರೈತರಲ್ಲಿ ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು.

ಯೋಜನೆಗೆ ಯಾರು ಅರ್ಹರು?

  • ಕರ್ನಾಟಕದ ಎಲ್ಲಾ ರೈತರು ಅರ್ಹರಾಗಿರುತ್ತಾರೆ. 

  • ಈ ಯೋಜನೆಯನ್ನು ಪಡೆಯಲು ಯಾವುದೇ ಜಾತಿ/ಸಮುದಾಯದ ನಿರ್ಬಂಧವಿರುವುದಿಲ್ಲ. ಎಲ್ಲಾ ವರ್ಗಕ್ಕೆ ಸೇರಿದ ರೈತರು ಯೋಜನೆಯನ್ನು ಪಡೆಯಬಹುದು. 

  • ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರೈತರು ಅರ್ಹರಾಗಿರುತ್ತಾರೆ. 

  • 5 ಹೆಕ್ಟೇರ್ ಮಾತ್ರ ಸಹಾಯಧನವನ್ನು ಪಡೆಯಬಹುದು.


ಯೋಜನೆಯ ಪ್ರಯೋಜನಗಳೇನು? 

  • ಸೂಕ್ಷ್ಮ ನೀರಾವರಿ ಯೋಜನೆಯಡಿ ನೀರಾವರಿ ಘಟಕಗಳನ್ನು ಅಳವಡಿಸಲು ರೈತರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. 

  • ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆಯ ಅಳವಡಿಕೆಯನ್ನು ರೈತರು ಸ್ವತಃ ಮಾಡಿಕೊಳ್ಳಬಹುದು ಅಥವಾ ಅನುಮೋದಿತ ಸೂಕ್ಷ್ಮ ನೀರಾವರಿ ಕಂಪನಿಯ ಮೂಲಕ ಮಾಡಿಸಬಹುದು. 

  • ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಶೇ 55ರಷ್ಟು ಹಾಗೂ ಇತರ ರೈತರಿಗೆ ಶೇ 45ರಷ್ಟು ಸಹಾಯಧನ ನೀಡಲಾಗುತ್ತದೆ.     

  • ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಿಗೆ ವಿಷೇಶವಾಗಿ ಶೇ 100ರಷ್ಟು ಸಹಾಯಧನ ನೀಡಲಾಗುತ್ತದೆ.

  • ಉಳಿದ ಎಲ್ಲಾ ರಾಜ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 60:40 ಅನುಪಾತದಲ್ಲಿ ಸಹಾಯಧನ ನೀಡಲಿದೆ.

  • ರೈತರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

  • ರೈತರು ಈ ಯೋಜನೆಯ ಜೊತೆಗೆ ಮಳೆ ನೀರು ಕೊಯ್ಲು, ನೀರು ಪಂಪ್‌ ಮಾಡುವ ಸಾಧನಗಳು ಮತ್ತು ಕೃಷಿ ಹೊಂಡವನ್ನು ತೆಗೆಯುವ ಪ್ರಯೋಜನಗಳನ್ನು ಪಡೆಯಬಹುದು.

ಅಗತ್ಯವಿರುವ ದಾಖಲೆಗಳು

  • ಆಧಾರ್‌ ಕಾರ್ಡ್

  • ಬ್ಯಾಂಕ್ ಖಾತೆ ವಿವರಗಳು

  • ವಿಳಾಸ ಪುರಾವೆಗಳು

  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

  • ಜಾತಿ ಪ್ರಮಾಣಪತ್ರ 

  • ಕೃಷಿ ಭೂಮಿ ಹೊಂದಿರುವ ದಾಖಲೆಗಳು

  • ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ವಾಸಿಸುವ ಪ್ರಮಾಣಪತ್ರ

ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ? 

ಮೊದಲಿಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರದ ಅಧಿಕೃತ ಅಂರ್ತಜಾಲ ತಾಣ https://kkisan.karnataka.gov.in/Home.aspx ಗೆ ಭೇಟಿ ನೀಡಿ. 

ತೆರೆದ ಮುಖಪುಟದಲ್ಲಿ ’Micro Irrigation Application Registration’ ಎಂಬದನ್ನು ಕ್ಲಿಕ್‌ ಮಾಡಿ. (1) 

ಬಳಿಕ ’ಸೂಕ್ಷ್ಮ ನೀರಾವರಿ ಅರ್ಜಿ ನಮೂದು‌‌‌‌‌‌‌‘ ಎಂಬ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್‌ ಸಂಖ್ಯೆಯನ್ನು ನಮೂದಿಸಿ ’Get Details‘ ಕ್ಲಿಕ್‌ ಮಾಡಿ. (2) 

ಆಧಾರ್‌ಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಬಂದಿರುವ ಓಟಿಪಿಯನ್ನು ನಮೂದಿಸಿ ’Verify and Continue’ ಅನ್ನು ಕ್ಲಿಕ್‌ ಮಾಡಿ. (3) 

ತರೆದುಕೊಂಡ ಪುಟದಲ್ಲಿ ರೈತನ ಬಗ್ಗೆ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ 'Next' ಅನ್ನು ಕ್ಲಿಕ್‌ ಮಾಡಿ.(4) 

ಬಳಿಕ ಯೋಜನೆಗೆ ಅರ್ಜಿಸಲ್ಲಿಸುವ ಪುಟ ತೆರೆಯುತ್ತದೆ. ಅಲ್ಲಿ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ ’Submit’ ಮಾಡಿ (5)  

ಕೊನೆಯದಾಗಿ (ಸೂಕ್ಷ್ಮ ನೀರಾವರಿ ಸ್ವೀಕೃತಿ ಪತ್ರ)  ’MICRO IRRIGATION - ACKNOWLEDGEMENT RECIEPT’ ಪಡೆಯುವಿರಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.