ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳಿಗೆ ಅಪಾರ ಕ್ರೇಜ್ ಹೆಚ್ಚಲು ಕೆಲವು ಕಾಣದ ಕೈಗಳ ಕೈವಾಡವೂ ಇರುವುದನ್ನು ಅಲ್ಲಗಳೆಯಲಾಗದು. ಅದರಲ್ಲಿ ಪ್ರಮುಖವಾಗಿ ಅಕ್ರಮ ಬೆಟ್ಟಿಂಗ್ ಜಾಲದ್ದು ಎಂಬುದು ಗುಟ್ಟೇನಲ್ಲ. ಪೊಲೀಸ್ ಇಲಾಖೆಯಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳೇ ಇದಕ್ಕೆ ಸಾಕ್ಷಿ.
ಪ್ರತಿವರ್ಷವೂ ಈ ಜಾಲವನ್ನು ಮಟ್ಟ ಹಾಕಲು ಮಾಡುವ ಪ್ರಯತ್ನಗಳು ಪೂರ್ಣಫಲ ಕೊಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಕ್ರಮ ಬೆಟ್ಟಿಂಗ್‌ನಲ್ಲಿ ಹೂಡುವ ಹಣದ ಪ್ರಮಾಣವೂ ಗಣನೀಯವಾಗಿ ಏರುತ್ತಿದೆ. ಇತ್ತೀಚೆಗೆ ಡಿಜಿಟಲ್ ಇಂಡಿಯಾ ಫೌಂಡೇಷನ್ ನಡೆಸಿದ್ದ ಸಮೀಕ್ಷೆಯ ಪ್ರಕಾರ, ಐಪಿಎಲ್ ನಡೆಯುವ ಎರಡು ಅಥವಾ ಎರಡೂವರೆ ತಿಂಗಳಲ್ಲಿ ಬೆಟ್ಟಿಂಗ್ ತಾರಕಕ್ಕೇರುತ್ತದೆ. ಅಂದಾಜು ₹7 ಲಕ್ಷ ಕೋಟಿ ಹಣ ತೊಡಗಿರುತ್ತದೆ. ಈ ವರದಿಯನ್ನು ಈಚೆಗೆ ಸಿಎನ್‌ಬಿಸಿ ಟಿವಿ18 ವೆಬ್‌ಸೈಟ್ ಪ್ರಕಟಿಸಿತ್ತು. ಸ್ಮಾರ್ಟ್‌ಫೋನ್ ಕ್ರಾಂತಿಯಿಂದಾಗಿ ಇವತ್ತು ಹಳ್ಳಿಯಲ್ಲಿಯೂ ಬೆಟ್ಟಿಂಗ್ ಜಾಲ ಬೆಳೆದಿದೆ.
ಇವತ್ತು ಬೆಟ್ಟಿಂಗ್ ಕೇವಲ ಪಂದ್ಯದ ಸೋಲು ಅಥವಾ ಗೆಲುವಿಗಾಗಿಯಷ್ಟೇ ನಡೆಯುವುದಿಲ್ಲ. ಟಾಸ್, ಪ್ಲೇಯಿಂಗ್ ಇಲೆವನ್, ಇಂಪ್ಯಾಕ್ಟ್ ಪ್ಲೆಯರ್ ಆಯ್ಕೆ, ವಿಕೆಟ್ ಪತನ, ಬಾಲ್ ಟು ಬಾಲ್, ನೋಬಾಲ್, ಕ್ಯಾಚ್ ಡ್ರಾಪ್, ಬೌಂಡರಿ, ಸಿಕ್ಸರ್ ಇತ್ಯಾದಿಗಳಿಗೆ ಬೆಟ್ಟಿಂಗ್ ಕಟ್ಟುತ್ತಾರೆ. ಅದರಲ್ಲೂ ಇನಿಂಗ್ಸ್‌ನ ಅಥವಾ ಪಂದ್ಯದ ಕೊನೆಯ ಓವರ್‌ಗಳಲ್ಲಿ ಬೆಟ್ಟಿಂಗ್ ಪ್ರಮಾಣ ತಾರಕಕ್ಕೇರಿರುತ್ತದೆ. ಇದಲ್ಲದೇ ಯಾವ ಬ್ಯಾಟರ್ ಎಷ್ಟು ರನ್ ಗಳಿಸಬಹುದು ಅಥವಾ ಬೌಲರ್ ವಿಕೆಟ್ ಪಡೆಯಬಹುದು ಎಂಬ ಊಹೆಗಳ ಸುತ್ತಲೂ ಬಾಜಿ ನಡೆಯುತ್ತದೆ. ಅಷ್ಟೇ ಅಲ್ಲ. ಕಳೆದ ಎರಡ್ಮೂರು ವರ್ಷಗಳಿಂದ ಡಾಟ್‌ಬಾಲ್‌ಗಳ ಮೇಲೂ ಹಣ ಹೂಡುತ್ತಾರಂತೆ!
ಇದಕ್ಕೆಲ್ಲ ಮೂಲ ಕಾರಣ ಪಂದ್ಯಗಳ ನೇರಪ್ರಸಾರದಲ್ಲಿ ಬಾಜಿ ಕುಳಗಳು ಕಂಡುಕೊಂಡಿರುವ ಒಂದು ಸೂಕ್ಷ್ಮ ಸಂಗತಿ. ಅದೆಂದರೆ ಮೈದಾನದಲ್ಲಿ ಪ್ರಯೋಗವಾಗುವ ಪ್ರತಿಯೊಂದು ಎಸೆತವು ಏಳು ಸೆಕೆಂಡುಗಳ ನಂತರ ಟಿ.ವಿ. ಪರದೆಯ ಮೇಲೆ ಮೂಡುತ್ತದೆ. ಇಷ್ಟು ಸಣ್ಣ ಅಂತರವೇ ಬೆಟ್ಟಿಂಗ್ ಲೋಕಕ್ಕೆ ಬಂಡವಾಳ.ಕ್ರೀಡಾಂಗಣದೊಳಗೇ ಪ್ರೇಕ್ಷಕರ ನಡುವೆ ಇರುವ ಮಾಫಿಯಾ ಏಜೆಂಟ್‌ಗಳು, ಜಾಮರ್ ಇದ್ದರೂ ಕೆಲಸ ಮಾಡುವ ಅತ್ಯಾಧುನಿಕ ತ್ರೀಡಿ ತಂತ್ರಾಶದ ಫೋನ್‌ಗಳ ಮುಖಾಂತರ ತಮ್ಮ ಧಣಿಗಳಿಗೆ ಸಂದೇಶ ಮುಟ್ಟಿಸುತ್ತಾರೆ. ಅಲ್ಲಿಯವರು ಸ್ಪಾಟ್ ಬೆಟ್ಟಿಂಗ್ ಮಾಡುತ್ತಾರೆ. ಈಗ ತಂತ್ರ ಜ್ಞಾನ ಮುಂದುವರಿದಿರುವುದರಿಂದ ತಮಗೆ ಬೇಕಾದ ಹಾಗೆ ಆ್ಯಪ್‌ಗಳನ್ನು ಮಾಡಿಸಿಕೊಳ್ಳುತ್ತಾರೆ.
ಕೆಲವು ವರ್ಷಗಳ ಹಿಂದೆ ಇಂತಹದೇ ಆ್ಯಪ್ ನಲ್ಲಿ ನಡೆಯುತ್ತಿದ್ದ ದಂಧೆಯನ್ನು ಬೆಂಗಳೂರು ಪೊಲೀಸರು ಪತ್ತೆ ಹೆಚ್ಚಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯವೊಂದರಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.
ಬೆಟ್ಟಿಂಗ್‌ನಲ್ಲಿ ಇನ್ನೊಂದು ಬಗೆ ಇದೆ. ಅದು ಪಂದ್ಯ ಫಲಿತಾಂಶದ ಮೇಲೆ ಕಟ್ಟುವುದು. ಪಂದ್ಯದಲ್ಲಿ ಕಠಿಣ ಪೈಪೋಟಿ ಶುರುವಾದಂತೆ, ರೋಚಕ ಫಲಿತಾಂಶ ಹೊರಹೊಮ್ಮುವಂತಹ ಪಂದ್ಯಗಳಲ್ಲಿ ಬಾಜಿ ಕಟ್ಟಿದವರ ಮನಸ್ಸೂ ಅತ್ತಿತ್ತ ಹೊಯ್ದಾಡುತ್ತಾ, ಹೂಡುವ ದುಡ್ಡು ಹೆಚ್ಚುತ್ತದೆ. ಇದರಲ್ಲಿ ಬುಕ್ಕಿಗಳು ಯಥೇಚ್ಛ ಲಾಭ ಗಳಿಸುತ್ತಾರೆ.
ಮುಂಬೈ, ದೆಹಲಿ ಹರಿಯಾಣ, ರಾಜಸ್ಥಾನ, ಮಾಲ್ಡಿವ್ಸ್, ಶ್ರೀಲಂಕಾ ಮತ್ತಿತರ ಪ್ರದೇಶಗಳಿಂದ ಬಾಜಿಯನ್ನು ನಿಯಂತ್ರಿಸುತ್ತಾರೆ. ಪ್ರತಿ ಊರಿನಲ್ಲಿಯೂ ಇವರಿಗೆ ಏಜೆಂಟರು ಇದ್ದಾರೆ. ಇಲ್ಲವೇ ಆನ್‌ಲೈನ್ ಆ್ಯಪ್‌ಗಳ ಮೂಲಕ ವ್ಯವಹಾರ ಕುದುರಿಸುತ್ತಾರೆ. ಹಣ ವಸೂಲಿ ಮಾಡಲು ಕಲೆಕ್ಷನ್ ಏಜೆಂಟರೂ ಇರುತ್ತಾರೆ.
ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳು ಈಗ ಅಪಾರ ಸಂಖ್ಯೆಯಲ್ಲಿ ಲಭ್ಯ ಇವೆ. ಕೋವಿಡ್ ಕಾಲಘಟ್ಟದಲ್ಲಿ ಮಕ್ಕಳಿಗೆ ಆನ್‌ಲೈನ್ ಮೂಲಕವೇ ಶಾಲೆ ತರಗತಿಗಳು ನಡೆದವು. ಇದರಿಂದಾಗಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಾಯಿತು. ಅದರೊಂದಿಗೆ ಗೇಮಿಂಗ್ ಆ್ಯಪ್‌ಗಳ ಭರಾಟೆಯೂ ಹೆಚ್ಚಾಯಿತು.
ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕ್ರಿಕೆಟ್‌ಗೆ ಸಂಬಂಧಿತ ಫ್ಯಾಂಟಸಿ ಆ್ಯಪ್‌ಗಳೇ ಹೆಚ್ಚಾಗಿವೆ. ಅಲ್ಲೆಲ್ಲೋ ಪಂದ್ಯ ನಡೆಯುತ್ತಿದ್ದರೆ, ಆ ತಂಡಗಳ ಹನ್ನೊಂದರ ಬಳಗವನ್ನು ಇಲ್ಲಿ ಕುಳಿತವರು ತಮ್ಮ ಮೊಬೈಲ್‌ಗಳಲ್ಲಿ ರಚಿಸಿಕೊಳ್ಳುತ್ತಾರೆ. ಇವರ ಫ್ಯಾಂಟಸಿ ತಂಡದಲ್ಲಿರುವ ಆಟಗಾರರು ಕ್ರೀಡಾಂಗಣದಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಪಾಯಿಂಟ್ಸ್ ಅಥವಾ ಹಣ ಗಳಿಕೆಯಾಗುತ್ತದೆ. ಇಲ್ಲಿ 30–40 ರೂಪಾಯಿ ಕಟ್ಟಿ ಆಡಲು ಆರಂಭಿಸಬಹುದು. ಆದರೆ ಇದು ದಿನಗಳೆದಂತೆ ಚಟವಾಗಿಬಿಡುವ ಅಪಾಯವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.