ADVERTISEMENT

IND vs PAK: ಹೂಡಾ, ಬಿಷ್ಣೋಯಿ ಇನ್; ಭಾರತ ವಿರುದ್ಧ ಟಾಸ್ ಗೆದ್ದ ಪಾಕ್ ಫೀಲ್ಡಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2022, 13:46 IST
Last Updated 4 ಸೆಪ್ಟೆಂಬರ್ 2022, 13:46 IST
ಬಾಬರ್ ಆಜಂ ಹಾಗೂ ರೋಹಿತ್ ಶರ್ಮಾ
ಬಾಬರ್ ಆಜಂ ಹಾಗೂ ರೋಹಿತ್ ಶರ್ಮಾ   

ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 'ಸೂಪರ್ 4' ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಟಾಸ್ ಗೆದ್ದಿರುವ ಪಾಕಿಸ್ತಾನದ ನಾಯಕ ಬಾಬರ್ ಆಜಂ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದೆ.

ಹೂಡಾ, ಬಿಷ್ಠೋಯಿ ಇನ್...
ಗಾಯಾಳು ರವೀಂದ್ರ ಜಡೇಜ ಈಗಾಗಲೇ ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ಸಂಯೋಜನೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ.

ADVERTISEMENT

ಪ್ಲೇಯಿಂಗ್ ಇಲೆವೆನ್‌ನಲ್ಲಿ ರವಿ ಬಿಷ್ಣೋಯಿ ಹಾಗೂ ದೀಪಕ್ ಹೂಡಾ ಕಾಣಿಸಿಕೊಂಡಿದ್ದಾರೆ. ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ. ಇದರಿಂದಾಗಿ ಅನುಭವಿ ದಿನೇಶ್ ಕಾರ್ತಿಕ್ ಅವಕಾಶ ವಂಚಿತರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಆವೇಶ್ ಖಾನ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹಾಗೆಯೇ ಕಳೆದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಪುನರಾಗಮನ ಮಾಡಿಕೊಂಡಿದ್ದಾರೆ.

ಅತ್ತ ಪಾಕಿಸ್ತಾನ ತಂಡದಲ್ಲೂ ಒಂದು ಬದಲಾವಣೆ ತರಲಾಗಿದ್ದು, ಮೊಹಮ್ಮದ್ ಹಸ್ನೈನ್ ಸ್ಥಾನ ಪಡೆದಿದ್ದಾರೆ.

ಪ್ಲೇಯಿಂಗ್ ಇಲೆವೆನ್ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯಿ, ಯಜುವೇಂದ್ರ ಚಾಹಲ್ ಮತ್ತು ಆರ್ಷದೀಪ್ ಸಿಂಗ್.

ಕಳೆದ ಭಾನುವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.