ಶಿವಂ ದುಬೆ, ಸೂರ್ಯಕುಮಾರ್ ಯಾದವ್
(ರಾಯಿಟರ್ಸ್ ಚಿತ್ರ)
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಹಸ್ತಲಾಘವ ಮಾಡಲು ನಿರಾಕರಿಸಿರುವ ಭಾರತ ಕ್ರಿಕೆಟ್ ತಂಡದ ವಿರುದ್ಧ ಪಾಕಿಸ್ತಾನ ಅಧಿಕೃತವಾಗಿ ಪ್ರತಿಭಟನೆ ದಾಖಲಿಸಿದೆ.
ಈ ಕುರಿತು ಏಷ್ಯಾ ಕ್ರಿಕೆಟ್ ಮಂಡಳಿಗೆ (ಎಸಿಸಿ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರತಿಭಟನೆ ದಾಖಲಿಸಿದ್ದು, ಭಾರತ ಕ್ರಿಕೆಟ್ ತಂಡವು ಕ್ರೀಡಾಸ್ಫೂರ್ತಿಯನ್ನು ಮೆರೆದಿಲ್ಲ ಮತ್ತು ಎರಡೂ ದೇಶಗಳ ನಡುವಣ ಉದ್ವಿಗ್ನತೆಯನ್ನು ಹೆಚ್ಚಿಸಲು ಯತ್ನಿಸಿದೆ ಎಂದು ದೂರಿದೆ.
ದುಬೈಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಏಳು ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ಆದರೆ ಪಂದ್ಯದ ಆರಂಭದಲ್ಲಿ ಟಾಸ್ ಮತ್ತು ಪಂದ್ಯದ ಬಳಿಕ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು.
ಭಾರತೀಯ ಆಟಗಾರರು ಕೈ ಕುಲುಕದೇ ಇರುವ ವರ್ತನೆಯ ವಿರುದ್ಧ ಮ್ಯಾಚ್ ರೆಫರಿಗೆ ಪಾಕ್ ತಂಡದ ವ್ಯವಸ್ಥಾಪಕ ನವೀದ್ ಚೀಮಾ ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಂಡದ ನಾಯಕರನ್ನು ಪ್ರಶಸ್ತಿ ಸಮಾರಂಭಕ್ಕೆ ಕಳುಹಿಸಿರಲಿಲ್ಲ ಎಂದು ಪಿಸಿಬಿ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಏಷ್ಯಾ ಕಪ್‌ನಲ್ಲಿ ಇನ್ನೆರಡು ಸಹ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಈ ಮಧ್ಯೆ ಹಸ್ತಲಾಘವ ಮಾಡದಿರುವ ತಂಡದ ನಿರ್ಧಾರವನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಮರ್ಥಿಸಿಕೊಂಡಿದ್ದಾರೆ.
'ಇದು ತಂಡದ ಒಮ್ಮತದ ನಿರ್ಧಾರವಾಗಿತ್ತು. ನಾವಿಲ್ಲಿ ಆಡಲು ಮಾತ್ರ ಬಂದಿದ್ದೇವೆ. ನಾವು ಅವರಿಗೆ ಉತ್ತರವನ್ನು ನೀಡಿದ್ದೇವೆ. ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾಗಿದೆ. ನಾವು ನಮ್ಮ ಗೆಲವುನ್ನು 'ಆಪರೇಷನ್ ಸಿಂಧೂರ'ದಲ್ಲಿ ಭಾಗಿಯಾದ ಸೇನಾ ಪಡೆಗಳಿಗೆ ಹಾಗೂ ಪಹಲ್ಗಾಮ್ ಉಗ್ರದಾಳಿಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಅರ್ಪಿಸುತ್ತೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.