ADVERTISEMENT

Asia Cup 2025 | ಭಾರತ ತಂಡ ಪ್ರಕಟ: ಸೂರ್ಯಕುಮಾರ್ ನಾಯಕ, ಗಿಲ್ ಉಪನಾಯಕ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 10:26 IST
Last Updated 19 ಆಗಸ್ಟ್ 2025, 10:26 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

ಮುಂಬೈ: ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ 15 ಮಂದಿ ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಮುಂಬೈಯಲ್ಲಿ ಇಂದು (ಮಂಗಳವಾರ) ನಡೆದ ಆಯ್ಕೆ ಮಂಡಳಿ ಸಭೆಯಲ್ಲಿ ಅಜಿತ್‌ ಅಗರಕರ್‌ ಅವರು ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಈಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಅವರು ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅಗರಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಟೆಸ್ಟ್ ಸರಣಿಗೆ ಬೂಮ್ರಾ ಲಭ್ಯತೆಯ ಬಗ್ಗೆ ಅನುಮಾನಗಳಿದ್ದವು. ಆದರೆ, ಆಯ್ಕೆದಾರರು ಬೂಮ್ರಾಗೆ ಮಣೆ ಹಾಕಿದ್ದಾರೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಸಹ ಆಯ್ಕೆ ಮಾಡಲಾಗಿದೆ.

ಸೂರ್ಯಕುಮಾರ್ ಯಾದವ್‌ ನೇತೃತ್ವದ ಟಿ20 ತಂಡ ಶೇ 85ರಷ್ಟು ಯಶಸ್ಸಿನ ದಾಖಲೆ ಹೊಂದಿದೆ. ಆಡಿದ ಕೊನೆಯ 20 ಪಂದ್ಯಗಳಲ್ಲಿ 17ರಲ್ಲಿ ಗೆಲುವಿನ ಸವಿಯುಂಡಿದೆ. ಈ ತಂಡದಲ್ಲಿ ಗಿಲ್ ಅಥವಾ ಜೈಸ್ವಾಲ್‌ ಇರಲಿಲ್ಲ.

ಆದರೆ ಟೆಸ್ಟ್‌ ತಂಡದಲ್ಲಿ ಕಾಯಂ ಆಗುವ ಮೊದಲು ಗಿಲ್ ಮತ್ತು ಜೈಸ್ವಾಲ್ ಅವರು ಟಿ20 ತಂಡದಲ್ಲೂ ಇದ್ದರು. ಐಪಿಎಲ್‌ನಲ್ಲೂ ತಾಕತ್ತು ಪ್ರದರ್ಶಿಸಿದ್ದರು. ಗಿಲ್‌ ಅವರು ಹಿಂದೊಮ್ಮೆ ಟಿ20 ತಂಡದ ಉಪನಾಯಕರೂ ಆಗಿದ್ದರು.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕನ್ನಡಿಗ ಕೆ.ಎಲ್‌.ರಾಹುಲ್, ಪ್ರಸಿದ್ಧ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಭಾರತ ತಂಡ ಇಂತಿದೆ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ, ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.