ಭಾರತ vs ಪಾಕಿಸ್ತಾನ
(ಚಿತ್ರ ಕೃಪೆ: X/ACCMedia1)
ದುಬೈ: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ತಡವಾಗಿ ನಡೆದ ಏಷ್ಯಾ ಕಪ್ 'ಎ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 41 ರನ್ ಅಂತರದಿಂದ ಗೆದ್ದಿರುವ ಪಾಕಿಸ್ತಾನ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿತು.
ಇದರೊಂದಿಗೆ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.
'ಎ' ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತೇರ್ಗಡೆ ಹೊಂದಿತು. ಮತ್ತೊಂದೆಡೆ ಯುಎಇ ಹಾಗೂ ಒಮಾನ್ ಟೂರ್ನಿಯಿಂದ ನಿರ್ಗಮಿಸಿತು.
ಸೂಪರ್ ಫೋರ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಸೆಪ್ಟೆಂಬರ್ 21, ಭಾನುವಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಯುಎಇ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಒಂದು ಹಂತದಲ್ಲಿ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು.
ಆದರೆ ಕೊನೆಯ ಓವರ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶಾಹೀನ್ ಅಫ್ರಿದಿ ತಂಡದ ಮೊತ್ತವನ್ನು 146ಕ್ಕೆ ತಲುಪಿಸಿದರು. ಶಾಹೀನ್ 14 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿಗಳಿಂದ ಅಜೇಯ 29 ರನ್ ಗಳಿಸಿದರು.
ಈ ಮೊದಲು ಫಖರ್ ಜಮಾನ್ 36 ಎಸೆತಗಳಲ್ಲಿ ಅರ್ಧಶತಕ (3 ಸಿಕ್ಸರ್, 2 ಬೌಂಡರಿ) ಗಳಿಸಿದರು. ಯುಎಇ ಪರ ಜುನೈದಿ ಸಿದ್ಧಿಕಿ ನಾಲ್ಕು ಹಾಗೂ ಸಿಮ್ರನ್‌ಜೀತ್ ಸಿಂಗ್ ಮೂರು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಯುಎಇ 17.4 ಓವರ್‌ಗಳಲ್ಲಿ 105 ರನ್ನಿಗೆ ತನ್ನೆಲ್ಲ ವಿಕೆಟ್‌ಗಳು ಕಳೆದುಕೊಂಡಿತು.
ಪಾಕಿಸ್ತಾನ ತಂಡದ ಹೈಡ್ರಾಮಾ...
ಭಾರತೀಯ ಆಟಗಾರರು ಹಸ್ತಲಾಘವ ಮಾಡದೇ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿದ್ದ ಪಾಕಿಸ್ತಾನ, ಕೊನೆಯ ಕ್ಷಣದಲ್ಲಿ ತನ್ನ ಪಟ್ಟು ಸಡಿಲಿಸಿತು.
ಒಂದು ವೇಳೆ ಪಂದ್ಯ ಬಹಿಷ್ಕರಿಸಿದ್ದರೆ ಟೂರ್ನಿಯಿಂದ ಪಾಕಿಸ್ತಾನ ಹೊರಬೀಳುತ್ತಿತ್ತು. ಅಲ್ಲದೆ ಭಾರಿ ದಂಡವನ್ನೇ ತೆರಬೇಕಾಗಿತ್ತು. ಇದು ಆಗಲೇ ಸಂಕಷ್ಟದಲ್ಲಿರುವ ಪಾಕ್ ಕ್ರಿಕೆಟ್‌ಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿತ್ತು.
ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಅವರು ತಂಡವನ್ನು ಹೋಟೆಲ್‌ನಲ್ಲಿಯೇ ಇರುವಂತೆ ಸೂಚಿಸಿದ್ದರು. ಸತತ ಚರ್ಚೆಗಳ ಬಳಿಕ ಕೊನೆಯ ಕ್ಷಣದಲ್ಲಿ ನಿರ್ಧಾರವನ್ನು ಬದಲಾಯಿಸಿದರು. ಅಂತಿಮವಾಗಿ ರೆಫರಿ ಪೈಕ್ರಾಫ್ಟ್ ಅವರೇ ಕರ್ತವ್ಯವನ್ನು ನಿಭಾಯಿಸಿದರು.
ಬಳಿಕ ಪ್ರಕಟಣೆ ಹೊರಡಿಸಿದ ಪಿಸಿಬಿ, ರೆಫರಿ ಪೈಕ್ರಾಫ್ಟ್ ತಮ್ಮ ನಡವಳಿಕೆಗಾಗಿ ಕ್ಷಮೆಯಾಚಿಸಿದ್ದರು ಎಂದು ಹೇಳಿದೆ.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಹಸ್ತಲಾಘವ ಮಾಡದಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಮ್ಯಾಚ್ ರೆಫ್ರಿಯಾಗಿದ್ದ ಪೈಕ್ರಾಫ್ಟ್ ಅವರು ಸೂಚಿಸಿದ್ದರು ಎಂದು ಪಿಸಿಬಿ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.