ADVERTISEMENT

ಮ್ಯಾಚ್ ರೆಫರಿ ಕ್ಷಮೆಯಾಚನೆ:ಬಹಿಷ್ಕಾರ ನಿರ್ಧಾರ ಬದಲಿಸಿದ್ದಕ್ಕೆ ಪಿಸಿಬಿ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2025, 2:57 IST
Last Updated 18 ಸೆಪ್ಟೆಂಬರ್ 2025, 2:57 IST
<div class="paragraphs"><p>ಸಲ್ಮಾನ್ ಅಲಿ ಆಘಾ,&nbsp;ಆ್ಯಂಡಿ ಪೈಕ್ರಾಫ್ಟ್‌</p></div>

ಸಲ್ಮಾನ್ ಅಲಿ ಆಘಾ, ಆ್ಯಂಡಿ ಪೈಕ್ರಾಫ್ಟ್‌

   

(ಪಿಟಿಐ ಚಿತ್ರ)

ದುಬೈ: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಬದಲಿಸಿತು. ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಕ್ಷಮೆಯಾಚಿಸಿದ್ದ ಕಾರಣ ಏಷ್ಯಾ ಕಪ್‌ನಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಆಡಲು ನಿರ್ಧರಿಸಲಾಯಿತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಪಷ್ಟನೆ ನೀಡಿದೆ.

ADVERTISEMENT

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಹಸ್ತಲಾಘವ ಮಾಡದಂತೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರಿಗೆ ಮ್ಯಾಚ್‌ ರೆಫರಿಯಾಗಿದ್ದ ಪೈಕ್ರಾಫ್ಟ್‌ ಅವರು ಸೂಚಿಸಿದ್ದರು ಎಂದು ಪಿಸಿಬಿ ದೂರು ನೀಡಿತ್ತು.

ತಮ್ಮ ನಡವಳಿಕೆಗಾಗಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಕ್ಷಮೆಯಾಚಿಸಿದ್ದಾರೆ ಎಂದು ಪಿಸಿಬಿ ಪ್ರಕಟಣೆ ಹೇಳಿದೆ. ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ನಿಯಮಗಳ ಉಲ್ಲಂಘನೆಯ ಸಂಬಂಧ ಐಸಿಸಿ ಸಹ ತನಿಖೆ ನಡೆಸಲಿದೆ ಎಂದೂ ಹೇಳಿದೆ.

ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿರುವ 69 ವರ್ಷದ ಆ್ಯಂಡಿ ಪೈಕ್ರಾಫ್ಟ್‌ 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಭಾರತೀಯ ಆಟಗಾರರು ಹಸ್ತಲಾಘವ ಮಾಡದೇ ಇರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಅವರನ್ನು ವಜಾಗೊಳಿಸುವಂತೆ ಪಾಕಿಸ್ತಾನ ಪಟ್ಟು ಹಿಡಿದಿತ್ತು. ಈ ಸಂಬಂಧ ಐಸಿಸಿಗೆ ಎರಡೆರಡು ಸಲ ದೂರು ಸಲ್ಲಿಸಲಾಗಿತ್ತು. ಆದರೆ ಪಿಸಿಬಿಯ ಮನವಿಯನ್ನು ಐಸಿಸಿ ತಳ್ಳಿ ಹಾಕಿತ್ತು.

ಇದರಿಂದಾಗಿ ಏಷ್ಯಾ ಕಪ್ ಬಹಿಷ್ಕರಿಸುವುದಾಗಿ ಬೆದರಿಕೆ ಒಡ್ಡಿತ್ತು. ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಅವರು ತಂಡವನ್ನು ಹೋಟೆಲ್‌ನಲ್ಲಿಯೇ ಇರುವಂತೆ ಸೂಚಿಸಿದ್ದರು. ಅವರು ಲಾಹೋರ್‌ನಲ್ಲಿ ಪಾಕ್‌ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷರಾದ ನಜಾಮ್ ಸೇಥಿ ಮತ್ತು ರಮೀಜ್ ರಾಜಾ ಅವರೊಂದಿಗೆ ಚರ್ಚೆ ನಡೆಸಿದರು.

ಸತತ ಚರ್ಚೆಗಳ ಬಳಿಕ ಯುಎಇ ವಿರುದ್ಧದ ಪಂದ್ಯವನ್ನು ಆಡಲು ಪಾಕಿಸ್ತಾನ ನಿರ್ಧರಿಸಿತು. ಆದರೂ ಕ್ರೀಡಾಂಗಣಕ್ಕೆ ತಡವಾಗಿ ಬಂದಿಳಿಯಿತು. ಇದರಿಂದಾಗಿ ಪಂದ್ಯ ವಿಳಂಬವಾಗಿ ಆರಂಭವಾಯಿತು. ಮ್ಯಾಚ್ ರೆಫರಿ ಮ್ಯಾಚ್ ಆ್ಯಂಡಿ ಪೈಕ್ರಾಫ್ಟ್‌ ಅವರೇ ಕರ್ತವ್ಯವನ್ನು ನಿರ್ವಹಿಸಿದರು.

ಒಂದು ವೇಳೆ ಯುಎಇ ವಿರುದ್ಧದ ಪಂದ್ಯ ಬಹಿಷ್ಕರಿಸಿದ್ದರೆ ಟೂರ್ನಿಯಿಂದ ಪಾಕಿಸ್ತಾನ ಹೊರಬೀಳುತ್ತಿತ್ತು. ಅಲ್ಲದೆ ಭಾರಿ ದಂಡವನ್ನೇ ತೆರಬೇಕಾಗಿತ್ತು. ಇದು ಆಗಲೇ ಸಂಕಷ್ಟದಲ್ಲಿರುವ ಪಾಕ್ ಕ್ರಿಕೆಟ್‌ಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿತ್ತು.

ಇದೀಗ ಸೂಪರ್ ಫೋರ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹಣಾಹಣಿಗೆ ಮತ್ತೆ ವೇದಿಕೆ ಸಜ್ಜುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.