ADVERTISEMENT

AUS vs IND: 500ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2025, 7:54 IST
Last Updated 19 ಅಕ್ಟೋಬರ್ 2025, 7:54 IST
<div class="paragraphs"><p>ರೋಹಿತ್‌ ಶರ್ಮಾ (ಸಂಗ್ರಹ ಚಿತ್ರ)</p></div>

ರೋಹಿತ್‌ ಶರ್ಮಾ (ಸಂಗ್ರಹ ಚಿತ್ರ)

   

ಕೃಪೆ: ಪಿಟಿಐ

ಪರ್ತ್‌: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ಬರೋಬ್ಬರಿ ಏಳು ತಿಂಗಳ ನಂತರ ಏಕದಿನ ಮಾದರಿಗೆ ಮರಳಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾ ಪರ 500ನೇ ಪಂದ್ಯವಾಡಿದ ಸಾಧನೆ ಮಾಡಿದ್ದಾರೆ. ಅದರೊಂದಿಗೆ, ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ, ರಾಹುಲ್ ದ್ರಾವಿಡ್‌ ಅವರಂತಹ ದಿಗ್ಗಜರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ಟೆಸ್ಟ್‌ ಹಾಗೂ ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್‌, ಇದೇ ವರ್ಷ ಫೆಬ್ರುವರಿ – ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಡಿದ್ದರು. ಅದಾದ ಬಳಿಕ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ.

ಬ್ಯಾಟಿಂಗ್‌ ವೈಫಲ್ಯ
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಯೋಜನೆಯಲ್ಲಿರುವ ರೋಹಿತ್‌ ಶರ್ಮಾ, ಪರ್ತ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. 14 ಎಸೆತಗಳನ್ನು ಎದುರಿಸಿದ ಅವರು ಕೇವಲ 8 ರನ್‌ ಗಳಿಸಿ ಔಟಾಗಿದ್ದಾರೆ. ರೋಹಿತ್‌ಗೆ 2027ರ ವಿಶ್ವಕಪ್‌ನಲ್ಲಿ ಸ್ಥಾನ ಸಿಗುವುದೇ ಎಂಬುದನ್ನು ಈ ಟೂರ್ನಿಯಲ್ಲಿ ಅವರ ಪ್ರದರ್ಶನವೇ ನಿರ್ಧರಿಸಲಿದೆ.

ಮಳೆಯಿಂದಾಗಿ 35 ಓವರ್‌ಗಳಿಗೆ ಕಡಿತಗೊಂಡಿರುವ ಪಂದ್ಯದಲ್ಲಿ ರೋಹಿತ್‌ ಮಾತ್ರವಲ್ಲದೆ, ಅನುಭವಿ ವಿರಾಟ್‌ ಕೊಹ್ಲಿ (0), ಯುವ ನಾಯಕ ಶುಭಮನ್‌ ಗಿಲ್‌ (10), ಉಪ ನಾಯಕ ಶ್ರೇಯಸ್‌ ಅಯ್ಯರ್‌ (11) ಅವರೂ ವೈಫಲ್ಯ ಅನುಭವಿಸಿದ್ದಾರೆ.

ಸದ್ಯ 16.4 ಓವರ್‌ಗಳು ಮುಗಿದಿದ್ದು, ಮಳೆಯಿಂದಾಗಿ ಆಟ ನಿಂತಿದೆ. ತಂಡದ ಮೊತ್ತ 4 ವಿಕೆಟ್‌ಗೆ 52 ರನ್‌ ಆಗಿದೆ.

ಅಕ್ಷರ್‌ ಪಟೇಲ್‌ (14) ಹಾಗೂ ಕೆ.ಎಲ್‌.ರಾಹುಲ್ (3) ಕ್ರೀಸ್‌ನಲ್ಲಿದ್ದಾರೆ.

ಭಾರತದ ಪರ ಅತಿಹೆಚ್ಚು ಪಂದ್ಯ ಆಡಿದವರು

  • ಸಚಿನ್‌ ತೆಂಡೂಲ್ಕರ್‌: 664 ಪಂದ್ಯ

  • ವಿರಾಟ್‌ ಕೊಹ್ಲಿ: 551 ಪಂದ್ಯ

  • ಎಂ.ಎಸ್‌. ಧೋನಿ: 535 ಪಂದ್ಯ

  • ರಾಹುಲ್‌ ದ್ರಾವಿಡ್‌: 504 ಪಂದ್ಯ

  • ರೋಹಿತ್‌ ಶರ್ಮಾ: 500 ಪಂದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.