ಆಸ್ಟ್ರೇಲಿಯಾ ತಂಡ
ಬ್ರಿಸ್ಬೇನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡ ಅಪರೂಪದ ದಾಖಲೆ ಬರೆದಿದೆ.
ಬ್ರಿಸ್ಬೇನ್‌ನ 'ದಿ ಗಬ್ಬಾ' ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸ್ವೀವ್ ಸ್ಮಿತ್ ಬಳಗದ ಎಲ್ಲ ಬ್ಯಾಟರ್‌ಗಳೂ ಎರಡಂಕಿ ದಾಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 'ಹಗಲು ರಾತ್ರಿ' ಪಂದ್ಯದಲ್ಲಿ ಈ ರೀತಿ ದಾಖಲೆ ನಿರ್ಮಾಣವಾಗಿರುವುದು ಇದೇ ಮೊದಲು. ಹಾಗೆಯೇ, ಆಸಿಸ್ ಪಡೆ, ಆ್ಯಷಸ್ ಸರಣಿಯಲ್ಲಿ ಈ ರೀತಿಯ ಮೈಲಿಗಲ್ಲು ನಿರ್ಮಿಸಿರುವುದು ಪ್ರಥಮ ಬಾರಿಯಷ್ಟೇ.
ಡಿಸೆಂಬರ್ 4ರಂದು ಆರಂಭವಾಗಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪ್ರವಾಸಿ ಇಂಗ್ಲೆಂಡ್ ತಂಡ, ಆರಂಭಿಕ ಇನಿಂಗ್ಸ್‌ನಲ್ಲಿ 334 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಕಾಂಗರೂ ಪಡೆ, 511 ರನ್ ಕಲೆಹಾಕಿದೆ.
ಜೇಕ್ ವೆದರ್‌ಲ್ಯಾಂಡ್ (72), ಮಾರ್ನಸ್ ಲಾಬುಷೇನ್ (65), ಸ್ಟೀವ್ ಸ್ಮಿತ್ (61), ಅಲೆಕ್ಸ್ ಕಾರಿ (63) ಹಾಗೂ ಮಿಚೇಲ್ ಸ್ಟಾರ್ಕ್ (77) ಅರ್ಧಶತಕ ಗಳಿಸಿದರೆ, ಉಳಿದವರೂ ಉತ್ತಮ ಕೊಡುಗೆ ನೀಡಿದ ಫಲವಾಗಿ ಒಟ್ಟು ಆರು ಅರ್ಧಶತಕದ ಜೊತೆಯಾಟ ಮೂಡಿಬಂದವು.
177 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್ ಸ್ಟೋಕ್ಸ್ ಬಳಗ, ಮತ್ತೆ ಮುಗ್ಗರಿಸಿದೆ. 241 ರನ್ ಗಳಿಸಿ ಆಲೌಟ್ ಆಗುವ ಮೂಲಕ 65 ರನ್‌ಗಳ ಅಲ್ಪ ಗುರಿ ನೀಡಿದೆ.
ಮೂರನೇ ಸಲ ಡಬಲ್ ಡಿಜಿಟ್
ಆಸ್ಟ್ರೇಲಿಯಾ ಪಡೆಯ ಎಲ್ಲ ಬ್ಯಾಟರ್‌ಗಳು ಎರಡಂಕಿ ಮೊತ್ತ ಗಳಿಸಿರುವುದು ಆ್ಯಷಸ್‌ನಲ್ಲಿ ಇದೇ ಮೊದಲಾದರೂ, ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ರೀತಿಯ ಆಟವಾಡಿರುವುದು ಮೂರನೇ ಸಲ. 1948ರಲ್ಲಿ ಭಾರತದ ಎದುರು ಹಾಗೂ 1992ರಲ್ಲಿ ಶ್ರೀಲಂಕಾ ವಿರುದ್ಧ ಇದೇ ರೀತಿ ರನ್ ಗಳಿಸಿದ್ದರು.
ಇಂಗ್ಲೆಂಡ್ ತಂಡ ಎರಡು ಸಲ (1894 ಹಾಗೂ 1928ರಲ್ಲಿ) ಈ ಸಾಧನೆ ಮಾಡಿದೆ. ಅದೂ ಆ್ಯಷಸ್ ಸರಣಿಯಲ್ಲೇ ಎಂಬುದು ವಿಶೇಷ.
ಶತಕವಿಲ್ಲದೆ 500+ ರನ್
ತಂಡದ ಯಾವೊಬ್ಬ ಬ್ಯಾಟರ್ ಕೂಡ ಶತಕ ಗಳಿಸದಿದ್ದರೂ, ಆಸ್ಟ್ರೇಲಿಯಾ 500ಕ್ಕಿಂತ ರನ್ ಗಳಿಸುವಲ್ಲಿ ಸಫಲವಾಯಿತು. ಆಸಿಸ್ ಪರ ಈ ರೀತಿ ಒಂದೂ ಶತಕವಿಲ್ಲದೆ, ತಂಡದ ಮೊತ್ತ 500ಕ್ಕಿಂತ ಹೆಚ್ಚು ದಾಖಲಾದದ್ದು ಇದು ಎರಡನೇ ಬಾರಿ.
2009ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2009ರಲ್ಲಿ 520 ರನ್ ಗಳಿಸಿತ್ತು.
ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಶತಕವಿಲ್ಲದೆ, ಅತಿಹೆಚ್ಚು ಮೊತ್ತ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಶ್ರೀಲಂಕಾ ಹಾಗೂ ಭಾರತ ಮೊದಲೆರಡು ಸ್ಥಾನಗಳಲ್ಲಿವೆ. ಲಂಕಾ ಪಡೆ 2024ರಲ್ಲಿ ಬಾಂಗ್ಲಾದೇಶ ವಿರುದ್ಧ 531 ರನ್ ಗಳಿಸಿತ್ತು. ಭಾರತ, 1976ರಲ್ಲಿ ನ್ಯೂಜಿಲೆಂಡ್ ಎದುರು 524 ರನ್ ಕಲೆಹಾಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.