ADVERTISEMENT

Steve Smith: ಏಕದಿನ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಿವೃತ್ತಿ

ಏಜೆನ್ಸೀಸ್
Published 5 ಮಾರ್ಚ್ 2025, 7:17 IST
Last Updated 5 ಮಾರ್ಚ್ 2025, 7:17 IST
<div class="paragraphs"><p>ಸ್ಟೀವ್ ಸ್ಮಿತ್ </p></div>

ಸ್ಟೀವ್ ಸ್ಮಿತ್

   

- ರಾಯಿಟರ್ಸ್ ಚಿತ್ರ

ಸಿಡ್ನಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಪರಾಭವಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ಪ್ರಭಾರ ನಾಯಕ, ಅನುಭವಿ ಬ್ಯಾಟರ್‌ ಸ್ಟೀವ್‌ ಸ್ಮಿತ್ ಅವರು ಏಕದಿನ ಕ್ರಿಕೆಟ್‌ಗೆ ಬುಧವಾರ ವಿದಾಯ ಘೋಷಿಸಿದ್ದಾರೆ.

ADVERTISEMENT

35 ವರ್ಷ ವಯಸ್ಸಿನ ಸ್ಮಿತ್‌, ವೇಗಿ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆದ್ದರು. ಅವರು ಟೆಸ್ಟ್ ಹಾಗೂ ಟಿ20 ಮಾದರಿಗಳಲ್ಲಿ ಮುಂದುವರಿಯುವರು.

ದುಬೈನಲ್ಲಿ ಮಂಗಳವಾರ ನಡೆದ ‍ಪಂದ್ಯದಲ್ಲಿ ಸ್ಮಿತ್‌ 96 ಎಸೆತಗಳಲ್ಲಿ 73 ರನ್‌ ಗಳಿಸಿದ್ದರು. ಪಂದ್ಯ ಸೋತ ಬೆನ್ನಲ್ಲೇ ತಮ್ಮ ನಿವೃತ್ತಿ ನಿರ್ಧಾರವನ್ನು ಸಹ ಆಟಗಾರರರೊಂದಿಗೆ ಹಂಚಿಕೊಂಡಿದ್ದಾರೆ.

‘ಏಕದಿನ ಕ್ರಿಕೆಟ್‌ನ ಅದ್ಭುತ ಪ್ರಯಾಣದಲ್ಲಿ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದ್ದೇನೆ’ ಎಂದು ಸ್ಮಿತ್ ಹೇಳಿದ್ದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

2010ರಲ್ಲಿ ಲೆಗ್‌ ಸ್ಪಿನ್ ಆಲ್‌ರೌಂಡರ್ ಆಗಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಈತನಕ 170 ಪಂದ್ಯಗಳಲ್ಲಿ 43.28 ಸರಾಸರಿಯಲ್ಲಿ 5,800 ರನ್ ಗಳಿಸಿದ್ದಾರೆ. ಅದರಲ್ಲಿ 12 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ. 2015 ಹಾಗೂ 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಅವರು ಆಡಿದ್ದರು.

34.67ರ ಸರಾಸರಿಯಲ್ಲಿ 28 ವಿಕೆಟ್‌ ಪಡೆದಿರುವ ಅವರು, 2015 ಮತ್ತು 2021ರಲ್ಲಿ ಆಸ್ಟ್ರೇಲಿಯಾದ ‘ವರ್ಷದ ಏಕದಿನ ಆಟಗಾರ’ ಗೌರವಕ್ಕೆ ಪಾತ್ರವಾಗಿದ್ದರು. 

‘ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆಯಾಗಿರಲಿದ್ದು, ಜೂನ್‌ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಷಿಪ್‌, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದೇನೆ’ ಎಂದು ಸ್ಮಿತ್ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಸ್ಟೀವ್‌ ಸ್ಮಿತ್‌ ಸಾಧನೆ

ಪಂದ್ಯ;ಇನಿಂಗ್ಸ್‌;ರನ್‌;ಗರಿಷ್ಠ ರನ್‌;ಸರಾಸರಿ;ಶತಕ;ಅರ್ಧಶತಕ;ವಿಕೆಟ್‌;ಉತ್ತಮ ಬೌಲಿಂಗ್‌

170;154;5800;164;43.28;12;35;28;16ಕ್ಕೆ3

 ‘ಈ ಪ್ರಯಾಣದಲ್ಲಿ ಅವಿಸ್ಮರಣೀಯ ಕ್ಷಣಗಳು ಹಾಗೂ ಅದ್ಭುತ ನೆನಪುಗಳು ಇದ್ದವು. 2 ವಿಶ್ವಕಪ್ ಗೆದ್ದಿರುವುದು, ಅನೇಕ ಉತ್ತಮ ತಂಡದ ಸದಸ್ಯರೊಂದಿಗೆ ಭಾಗವಾಗಿದ್ದು ಪ್ರಮುಖ ನೆನಪುಗಳು. 2027 ವಿಶ್ವಕಪ್‌ಗೆ ತಯಾರಾಗ ಬಯಸುವವರಿಗೆ ಇದು ಉತ್ತಮ ಅವಕಾಶ. ಅವರಿಗೆ ದಾರಿ ಮಾಡಿಕೊಡಲು ಇದು ಸರಿಯಾದ ಸಮಯ’ ಎಂದು ಅವರು ಹೇಳಿದ್ದಾರೆ.‘ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆಯಾಗಿರಲಿದ್ದು, ಜೂನ್‌ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್‌, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದನಿಸುತ್ತಿದೆ’ ಎಂದು ಸ್ಮಿತ್ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.