ಆರ್‌ಸಿಬಿ ವಿಜಯದ ಸಂಭ್ರಮಾಚರಣೆಗೆ ಸೇರಿದ್ದ ಜನ
ಪಿಟಿಐ ಚಿತ್ರ
ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಘಟನೆ ನಿಜಕ್ಕೂ ದುರಂತ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ನಿಜಕ್ಕೂ ಘೋರ ದುರಂತವಾಗಿದೆ. ಮೃತರಾದವರ ಪ್ರತಿಯೊಂದು ಕುಟುಂಬವನ್ನು ನೆನಪಿಸಿಕೊಂಡರೆ ನನ್ನ ಹೃದಯ ನೋವಿನಿಂದ ತುಂಬುತ್ತದೆ. ಅವರಿಗೆ ನನ್ನ ಸಂತಾಪಗಳು, ಆ ಕುಟುಂಬಗಳಿಗೆ ನೋವು ತಡೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಆರ್‌ಸಿಬಿಯ ಮಾಜಿ ಆಟಗಾರ ಎ.ಬಿ.ಡಿವಿಲಿಯರ್ಸ್ ಸಂತಾಪ ಸೂಚಿಸಿ, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಿಂದ ಬಾಧಿತರಾದವರಿಗೆ ನನ್ನ ಸಂತಾಪ’ ಎಂದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಬೆಂಗಳೂರು ಮೂಲದ ಅನಿಲ್ ಕುಂಬ್ಳೆ, ‘ಕ್ರಿಕೆಟ್ ಜಗತ್ತಿಗೆ ದುಃಖದ ದಿನ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ, ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ದುಃಖ ಹಂಚಿಕೊಂಡಿದ್ದು, ‘ಸಂಭ್ರಮಾಚರಣೆ ಊಹಿಸಲಾಗದ ದುರಂತವಾಗಿ ಮಾರ್ಪಟ್ಟಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.