ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ
ಚಿತ್ರ: X / @BCCI
ಅಡಿಲೇಡ್: ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಷೇನ್ ಅವರಿಗೆ, ಭಾರತದ ವಿರಾಟ್ ಕೊಹ್ಲಿಯನ್ನು ಅನುಸರಿಸುವಂತೆ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ. ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಉಳಿದ ನಾಲ್ಕು ಪಂದ್ಯಗಳಲ್ಲಿ ನಿಮ್ಮ ಅದೃಷ್ಟ ಬದಲಾಗಬೇಕಿದ್ದರೆ, ಕೊಹ್ಲಿಯಂತೆ ನಿಮ್ಮ ಆಟದ ಮೇಲೆ ನಂಬಿಕೆ ಇಡಿ ಎಂದು ಕಿವಿಮಾತು ಹೇಳಿದ್ದಾರೆ.
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಮಿತ್ ಹಾಗೂ ಮಾರ್ನಸ್, ನೀರಸ ಪ್ರದರ್ಶನ ನೀಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 52 ಎಸೆತಗಳನ್ನು ಎದುರಿಸಿದ್ದ ಮಾರ್ನಸ್ ಗಳಿಸಿದ್ದು ಕೇವಲ 2 ರನ್. ಎರಡನೇ ಇನಿಂಗ್ಸ್‌ನಲ್ಲೂ ಅವರ ಬ್ಯಾಟ್ ಸದ್ದು ಮಾಡಿರಲಿಲ್ಲ. ಹಾಗಾಗಿ, ಮೂರು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
ಸ್ಮಿತ್ ಆಟ ಸಹ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಖಾತೆಯನ್ನೇ ತೆರೆಯದ ಅವರು, ನಂತರದ ಇನಿಂಗ್ಸ್‌ನಲ್ಲಿ 17 ರನ್ ಗಳಿಸಿದ್ದರಷ್ಟೇ.
ಈ ಪಂದ್ಯವನ್ನು ಆತಿಥೇಯರು ಬರೋಬ್ಬರಿ 295 ರನ್ ಅಂತರದಿಂದ ಸೋತಿದ್ದರು.
ಇದೀಗ, ಸ್ಮಿತ್ ಹಾಗೂ ಮಾರ್ನಸ್ ಬ್ಯಾಟಿಂಗ್ ಕುರಿತು ಐಸಿಸಿ ವಿಶ್ಲೇಷಣೆಯಲ್ಲಿ ಪಾಂಟಿಂಗ್ ಮಾತನಾಡಿದ್ದಾರೆ.
'ಪರ್ತ್‌ನಲ್ಲಿ ಆಡಿದ ಎಲ್ಲ ಬ್ಯಾಟರ್‌ಗಳಿಗಿಂತ ಮಾರ್ನಸ್ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಿತ್ತು. ಅತ್ಯಂತ ಕಠಿಣವಾದ ಪಿಚ್ ಹಾಗೂ ಅತ್ಯುತ್ತಮ ಬೌಲಿಂಗ್ ಎದುರು ಆಡಬೇಕಿತ್ತು ಹೌದು. ಆದರೆ, ಅದನ್ನು ಮೀರಿ ನಿಲ್ಲುವ ಹಾದಿಯನ್ನು ಕಂಡುಕೊಳ್ಳಬೇಕಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯು ವೈಫಲ್ಯದ ಸಂಕೋಲೆಯನ್ನು ಪರ್ತ್‌ನಲ್ಲಿ ಕಳಚಿಕೊಂಡ ಬಗ್ಗೆ ಉಲ್ಲೇಖಿಸಿರುವ ಪಾಂಟಿಂಗ್, 'ವಿರಾಟ್ ತಮ್ಮ ಆಟದ ಮೇಲೆ ನಂಬಿಕೆ ಇಟ್ಟು ಕ್ರೀಡಾಂಗಣಕ್ಕೆ ಮರಳಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಮುಗ್ಗರಿಸಿದ್ದ ಅವರು, ಎರಡನೇ ಇನಿಂಗ್ಸ್ ಹೊತ್ತಿಗೆ ವಿಭಿನ್ನ ಆಟಗಾರನಾಗಿ ಕಾಣಿಸಿಕೊಂಡರು' ಎಂದಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ ಕೇವಲ 5 ರನ್ ಗಳಿಸಿ ಔಟಾಗಿದ್ದ ಕೊಹ್ಲಿ, ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದರು. ಆ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ದಾಖಲಿಸಿದರು. ಅವರ ಆಟದ ಬಲದಿಂದ ಭಾರತ ತಂಡ, ಆತಿಥೇಯರಿಗೆ 534 ರನ್‌ಗಳ ಸವಾಲಿನ ಗುರಿ ಒಡ್ಡಿತ್ತು.
'ಅವರು (ಕೊಹ್ಲಿ) ಎದುರಾಳಿಯ ವಿರುದ್ಧ ಹೋರಾಡಲು ಪ್ರಯತ್ನಿಸುವುದನ್ನು ಬಿಟ್ಟು, ತಮ್ಮ ಸಾಮರ್ಥ್ಯದ ಮೇಲೆ ಗಮನ ಕೇಂದ್ರೀಕರಿಸಿದರು. ಮಾರ್ನಸ್ ಮತ್ತು ಸ್ಮಿತ್ ಮಾಡಬೇಕಿರುವುದು ಅದನ್ನೇ. ತಮ್ಮದೇ ಮಾರ್ಗ ಕಂಡುಕೊಳ್ಳಬೇಕು. ಶ್ರೇಷ್ಠ ಆಟವಾಡಬೇಕು' ಎಂದು ಹೇಳಿದ್ದಾರೆ.
ಸ್ಟೀವ್ ಸ್ಮಿತ್, ರಿಕಿ ಪಾಂಟಿಂಗ್ ಮತ್ತು ಮಾರ್ನಸ್ ಲ್ಯಾಬುಷೇನ್
ಆತಿಥೇಯ ಬ್ಯಾಟರ್‌ಗಳು ನಿರ್ಭೀತಿಯಿಂದ ಬ್ಯಾಟ್ ಬೀಸಬೇಕು ಎಂದಿರುವ ಅವರು, ಭಾರತದ ಬೌಲರ್‌ಗಳು ಹಾಕುವ ಸವಾಲನ್ನು ಸಮರ್ಥವಾಗಿ ಎದುರಿಸಬೇಕು. ಅವರ ಮೇಲೆ ಒತ್ತಡ ಹೇರಬೇಕು ಎಂದಿದ್ದಾರೆ. ಹಾಗೆಯೇ, ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದೂ ತಮ್ಮ ತಂಡಕ್ಕೆ ಸೂಚಿಸಿದ್ದಾರೆ.
'ತಂಡದಲ್ಲಿ ಸಾಕಷ್ಟು ಮಂದಿ ಚಾಂಪಿಯನ್ ಆಟಗಾರರಿದ್ದಾರೆ. ಅವರೆಲ್ಲರೂ ದೊಡ್ಡ ವೇದಿಕೆಯಲ್ಲಿ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಅವರ ಮೇಲೆ ವಿಶ್ವಾಸವಿರಿಸಿ, ಮುಂದಿನ ಪಂದ್ಯಗಳಿಗೂ ಅದೇ ತಂಡವನ್ನು ಆಡಿಸಬೇಕು' ಎಂದು ತಿಳಿಸಿದ್ದಾರೆ.
ಸರಣಿಯ ಎರಡನೇ ಪಂದ್ಯವು ಅಡಿಲೇಡ್‌ನಲ್ಲಿ ಡಿಸೆಂಬರ್ 6ರಂದು ಆರಂಭವಾಗಲಿದೆ. ಆಸಿಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಗಾಯಾಳಾಗಿದ್ದು, ಹಗಲು–ರಾತ್ರಿ ನಡೆಯುವ ಆ (ಪಿಂಕ್ ಟೆಸ್ಟ್) ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಾಗೆಯೇ, ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಗಾಯದ ಸಮಸ್ಯೆಗೆ ತುತ್ತಾಗಿದ್ದ ಶುಭಮನ್ ಗಿಲ್ ಟೀಂ ಇಂಡಿಯಾಗೆ ಮರಳಲಿದ್ದಾರೆ.
ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕ ಹಾಗೂ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬ ಶ್ರೇಯ ಹೊಂದಿರುವ ಪಾಂಟಿಂಗ್, ಆಸ್ಟ್ರೇಲಿಯಾ ಪರ 168 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 41 ಶತಕ ಸಹಿತ 13,378 ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.