
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಕೃಪೆ: ಪಿಟಿಐ
ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವತ್ತ ಮುನ್ನುಗ್ಗುತ್ತಿದ್ದಾರೆ.
ಸದ್ಯ ಟೀಂ ಇಂಡಿಯಾದ ಅನುಭವಿ ಬ್ಯಾಟರ್ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ 783 ರೇಟಿಂಗ್ ಪಾಯಿಂಟ್‌ಗಳಿದ್ದು, ಕೊಹ್ಲಿ ಖಾತೆಯಲ್ಲಿ 751 ರೇಟಿಂಗ್ ಪಾಯಿಂಟ್ ಇವೆ.
ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚಿಗೆ ಮುಕ್ತಾಯವಾದ ಮೂರು ಪಂದ್ಯಗಳ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಕೊಹ್ಲಿ, ಎರಡು ಶತಕ, ಒಂದು ಅರ್ಧಶತಕ ಸಹಿತ 303 ರನ್ ಬಾರಿಸಿ ಮಿಂಚಿದ್ದರು. ರೋಹಿತ್, ಎರಡು ಅರ್ಧಶತಕ ಸಹಿತ 146 ರನ್ ಗಳಿಸಿದ್ದರು.
ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದ ಕೊಹ್ಲಿ, ಒಂದು ಸ್ಥಾನ ಮೇಲೇರಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ.
ಮೊದಲ ಸ್ಥಾನಕ್ಕಾಗಿ ಪೈಪೋಟಿ
ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಶತಕ (135) ಸಿಡಿಸಿದರೆ, ರೋಹಿತ್ (57) ಅರ್ಧಶತಕ ಬಾರಿಸಿದ್ದರು. ಎರಡನೇ ಪಂದ್ಯದಲ್ಲೂ ಕೊಹ್ಲಿ ಮೂರಂಕಿ ದಾಟಿದ್ದರು. ರೋಹಿತ್ ಕೇವಲ 14 ರನ್‌ಗೆ ವಿಕೆಟ್ ಒಪ್ಪಿಸಿದ್ದರು.
ಹೀಗಾಗಿ, ಕೊಹ್ಲಿ ಮೊದಲ ಸ್ಥಾನಕ್ಕೇರಲು ರೋಹಿತ್‌ಗಿಂತ 50 ರನ್ ಹೆಚ್ಚಾಗಿ ಗಳಿಸಬೇಕಾದ ಸ್ಥಿತಿ ಮೂರನೇ ಪಂದ್ಯಕ್ಕೂ ಮುನ್ನ ಇತ್ತು. ಆದರೆ, ಅಂತಿಮ ಹಣಾಹಣಿಯಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ರೋಹಿತ್ (75) ಮತ್ತೊಮ್ಮೆ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಸಹ ಅಜೇಯ ಅರ್ಧಶತಕ (65) ಸಿಡಿಸಿದ್ದರು.
ಹೀಗಾಗಿ, ರೋಹಿತ್ ಅವರೇ ಅಗ್ರಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಆದಾಗ್ಯೂ, ಕೊಹ್ಲಿ ಅವರು ನಾಲ್ಕನೇ ಸ್ಥಾನದಿಂದ ಜಿಗಿದು ಎರಡಕ್ಕೇರಲಿದ್ದಾರೆ. ಸದ್ಯ ಕ್ರಮವಾಗಿ ಎರಡು, ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಡೆರಿಲ್ ಮಿಚೇಲ್ ಮತ್ತು ಅಫ್ಗಾನಿಸ್ತಾನದ ಇಬ್ರಾಹಿಂ ಜದ್ರಾನ್ ಅವರನ್ನು ಹಿಂದಿಕ್ಕಲಿದ್ದಾರೆ ಎನ್ನಲಾಗಿದೆ.
ಐಸಿಸಿಯ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯು ಡಿಸೆಂಬರ್ 10ರಂದು ಬಿಡುಗಡೆಯಾಗಲಿದ್ದು, ಏನಾಗಲಿದೆ ಎಂಬುದನ್ನು ಕಾದುನೋಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.