ADVERTISEMENT

Champions Trophy: ಐಸಿಸಿ ಟೂರ್ನಿಗಳಲ್ಲಿ ಮತ್ತೆ ಕೊಹ್ಲಿ vs ವಿಲಿಯಮ್ಸನ್ ಫೈನಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2025, 10:52 IST
Last Updated 8 ಮಾರ್ಚ್ 2025, 10:52 IST
<div class="paragraphs"><p>ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್</p></div>

ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್

   

(ರಾಯಿಟರ್ಸ್ ಚಿತ್ರ)

ದುಬೈ: ಐಸಿಸಿ ಟೂರ್ನಿಗಳಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ನಡುವಣ ಫೈನಲ್ ಆಟಕ್ಕೆ ವೇದಿಕೆ ಸಿದ್ಧಗೊಂಡಿದೆ.

ADVERTISEMENT

ವೃತ್ತಿ ಜೀವನದ ಉತ್ತಂಗುದಲ್ಲಿರುವ ಕೊಹ್ಲಿ ಹಾಗೂ ವಿಲಿಯಮ್ಸನ್, ತಮ್ಮ ತಮ್ಮ ತಂಡಗಳ ಯಶಸ್ಸಿನಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

17 ವರ್ಷಗಳ ಹಿಂದೆ 2008ರ ಅಂಡರ್-19 ವಿಶ್ವಕಪ್‌ನಲ್ಲಿ ಕೊಹ್ಲಿ ಹಾಗೂ ವಿಲಿಯಮ್ಸನ್ ನಾಯಕರಾಗಿ ಮೊದಲ ಬಾರಿ ಮುನ್ನಡೆಸಿದ್ದರು. ಅಂದು ಕೊಹ್ಲಿ ನೇತೃತ್ವದ ಭಾರತ ಚಾಂಪಿಯನ್ ಆಗಿತ್ತು.

ಆದರೆ 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಕೊಹ್ಲಿಗೆ ನಿರಾಸೆ ಕಾದಿತ್ತು. ವಿಲಿಯಮ್ಸನ್ ಮುಂದಾಳತ್ವದ ನ್ಯೂಜಿಲೆಂಡ್ ಮೊದಲ ಬಾರಿಗೆ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದರೊಂದಿಗೆ ಭಾರತದ ಚೊಚ್ಚಲ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ಈಗ ಮಗದೊಂದು ಸಲ ಫೈನಲ್‌ನಲ್ಲಿ ಕೊಹ್ಲಿ ಹಾಗೂ ವಿಲಿಯಮ್ಸನ್ ತಮ್ಮ ತಮ್ಮ ತಂಡಗಳನ್ನು ಯಶಸ್ಸಿನತ್ತ ಮುನ್ನಡೆಸುವ ತವಕದಲ್ಲಿದ್ದಾರೆ. ಈ ಸಲ ನಾಯಕತ್ವದ ಜವಾಬ್ದಾರಿ ಇಲ್ಲದಿದ್ದರೂ ಇಬ್ಬರೂ ಇತ್ತಂಡಗಳ ಅವಿಭಾಜ್ಯ ಅಂಗವಾಗಿದ್ದಾರೆ.

ಮೈದಾನದ ಹೊರಗೂ ಕೊಹ್ಲಿ ಹಾಗೂ ಕೇನ್ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರ ಬಗ್ಗೆ ಅಪಾರ ಗೌರವವನ್ನು ಕಾಪಾಡಿಕೊಂಡಿದ್ದಾರೆ. ಕ್ರಿಕೆಟ್ ಬಗ್ಗೆ ಅನುಭವ ಹಂಚಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಮೈದಾನದಲ್ಲಿ ಕೊಹ್ಲಿ ಆಕ್ರಮಣಕಾರಿ ಹಾಗೂ ಕೇನ್ ಸೌಮ್ಯ ಸ್ವಭಾವವನ್ನು ಮೈಗೂಡಿಸಿದ್ದಾರೆ. ಆದರೆ ಎಂತಹ ಒತ್ತಡದ ಸನ್ನಿವೇಶದಲ್ಲೂ ತಮ್ಮ ಶ್ರೇಷ್ಠ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಕೊಹ್ಲಿ 36ರ ಹರೆಯದಲ್ಲೂ ಗರಿಷ್ಠ ಮಟ್ಟದ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ 34ರ ಹರೆಯದಲ್ಲೂ ಕೇನ್ ವಿಲಿಯಮ್ಸನ್ ಕಿವೀಸ್ ಪಾಲಿಗೆ ನಿರ್ಣಾಯಕವೆನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.