ADVERTISEMENT

Champions Trophy: ಗತವೈಭವಕ್ಕೆ ಮರಳಿದ ವಿರಾಟ್ ಕೊಹ್ಲಿ; ಪಾಕಿಸ್ತಾನಕ್ಕೆ ಆಘಾತ

ತೀವ್ರ ಕುತೂಹಲ ಮೂಡಿಸಿದ್ದ ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ತಾನ್ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು.

ಆರ್.ಕೌಶಿಕ್
Published 23 ಫೆಬ್ರುವರಿ 2025, 16:20 IST
Last Updated 23 ಫೆಬ್ರುವರಿ 2025, 16:20 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಪಿಟಿಐ ಚಿತ್ರ

ದುಬೈ: ವಿರಾಟ್ ಕೊಹ್ಲಿ ಅವರಿಗೆ 2014 ರಿಂದ 2019ರವರೆಗಿನ ಐದು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳನ್ನು ಗಳಿಸುವುದು ಕರಗತವಾಗಿತ್ತು. ಆಗ ಅವರಿಗೆ ತಡೆಯೊಡ್ಡುವುದು ಕಷ್ಟಸಾಧ್ಯವೇ ಆಗಿತ್ತು. ಅದರಲ್ಲೂ ಚೇಸಿಂಗ್‌ನಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು. 

ADVERTISEMENT

ಭಾರತ ತಂಡದ ಮಾಜಿ ನಾಯಕ ವಿರಾಟ್, ಭಾನುವಾರ ರಾತ್ರಿ ದುಬೈ ಅಂತರ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮತ್ತೆ ತಮ್ಮ ಹಳೆಯ ವೈಭವಕ್ಕೆ ಮರಳಿದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಳೆಯ ಎದುರಾಳಿಯೇ ಆಗಿರುವ ಪಾಕಿಸ್ತಾನ ಈ ಹಿಂದೆಯೂ ವಿರಾಟ್ ಪ್ರತಾಪದ ಬಿಸಿ ಅನುಭವಿಸಿತ್ತು. ಇಲ್ಲಿ ದಾಖಲಿಸಿದ ಕೊಹ್ಲಿ (ಅಜೇಯ 100) ಆಟಕ್ಕೆ ಮೊಹಮ್ಮದ್ ರಿಜ್ವಾನ್ ಬಳಗವು ಶರಣಾಯಿತು. ವಿರಾಟ್ 51ನೇ ಶತಕ ದಾಖಲಿಸಿದರು.  2023ರ ನವೆಂಬರ್‌ನಲ್ಲಿ ವಿಶ್ವಕಪ್ ಪಂದ್ಯದಲ್ಲಿ ಶತಕ ಹೊಡೆದಿದ್ದರು. ಅದರ ನಂತರ ಈಗಲೇ ಮತ್ತೆ ಮೂರಂಕಿ ಗಳಿಸಿದರು.

ಕ್ರೀಸ್‌ಗೆ ಬಂದ ಕೊಹ್ಲಿ ನಸೀಮ್ ಶಾ ಹಾಕಿದ ಎಸೆತವನ್ನು ಎದುರಿಸಿದಾಗಲೇ ಅವರ ಆತ್ಮವಿಶ್ವಾಸದ ಹಾವಭಾವ ಗಮನ ಸೆಳೆದಿತ್ತು. ಎರಡನೇ ವಿಕೆಟ್‌ ಜೊತೆಯಾಟ ದಲ್ಲಿ ಶುಭಮನ್ ಗಿಲ್ ಅವರೊಂದಿಗೆ 69 ರನ್ ಮತ್ತು 3ನೇ ವಿಕೆಟ್ ಜೊತೆಯಾಟದಲ್ಲಿ ಶ್ರೇಯಸ್ ಅಯ್ಯರ್ ಜೊತೆಗೆ 114 ರನ್‌ ಸೇರಿಸಿದರು.  ಇದರಿಂದಾಗಿ ಭಾರತ 6 ವಿಕೆಟ್‌ಗಳ ಜಯ ಸಾಧಿಸಿತು. ವಿರಾಟ್ ಹೊಡೆದ 7ನೇ ಬೌಂಡರಿಯು ತಂಡಕ್ಕೆ ವಿಜಯದ ರನ್ ಒದಗಿಸಿತು. ಜೊತೆಗೆ ಶತಕವೂ ಪೂರ್ಣಗೊಂಡಿತು.ವಿಕೆಟ್ ನಡುವೆ ಚುರುಕಾದ ಓಟ ಮತ್ತು ಎಸೆತಗಳ ನಿಖರವಾದ ಪ್ಲೇಸ್‌ಮೆಂಟ್ ಅವರ ಆಟವನ್ನು ಉತ್ಕೃಷ್ಟಗೊಳಿಸಿದವು.

ಭಾರತವು, ಏಕದಿನ ಕ್ರಿಕೆಟ್‌ನಲ್ಲಿ ಸತತ 13ನೇ ಬಾರಿ ಟಾಸ್ ಸೋತಿತು. ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಾಬರ್ ಆಜಂ ಮತ್ತು ಇಮಾಮ್ ಉಲ್ ಹಕ್ ಮೊದಲ ವಿಕೆಟ್‌ಗೆ 41 ರನ್ ಸೇರಿಸಿದರು. ಅದು ಬಿಟ್ಟರೆ 3ನೇ ವಿಕೆಟ್ ಜೊತೆಯಾಟದಲ್ಲಿ ಸೌದ್ ಶಕೀಲ್ ಮತ್ತು ನಾಯಕ ರಿಜ್ವಾನ್ ಅವರು ಸೇರಿಸಿದ 104 ರನ್‌ಗಳು ತಂಡವು 241 ರನ್‌ಗಳನ್ನು ಗಳಿಸಲು ನೆರವಾದವು.  

ಪಾಕಿಸ್ತಾನ ತಂಡದಲ್ಲಿ ಸ್ಲೋ ಬೌಲಿಂಗ್ ಆಯ್ಕೆಗಳು ಹೆಚ್ಚು ಇರಲಿಲ್ಲ. ಅಬ್ರಾರ್ ಅಹಮದ್ ಒಬ್ಬರೇ ಆ ಕಾರ್ಯಕ್ಕೆ ಸೂಕ್ತವಾದವರು. ಉಳಿದಂತೆ ವೇಗಿ ಶಾಹೀನ್ ಶಾ ಆಫ್ರಿದಿ, ನಸೀಂ ಮತ್ತು ಹ್ಯಾರಿಸ್ ರವೂಫ್ ಅವರನ್ನೇ ಪಾಕ್ ನೆಚ್ಚಿಕೊಂಡಿತ್ತು. ಆಫ್ರಿದಿ ತಮ್ಮ ಪರಿಣಾಮಕಾರಿಯಾದ ಇನ್‌ಸ್ವಿಂಗಿಂಗ್ ಯಾರ್ಕರ್ ಮೂಲಕ ರೋಹಿತ್ ವಿಕೆಟ್ ಹಾರಿಸಿದರು. ಅದಕ್ಕೂ ಮುನ್ನ ರೋಹಿತ್ ಕೆಲವು ಚೆಂದದ ಬೌಂಡರಿಗಳನ್ನು ಹೊಡೆದು ಇನಿಂಗ್ಸ್‌ಗೆ ಆರಂಭ ನೀಡಿದ್ದರು.  ಅದೇ ಆಫ್ರಿದಿಯನ್ನು ಗಿಲ್ ದಂಡಿಸಿದರು. ಡ್ರೈವ್‌ಗಳ ಮೂಲಕ ಬೌಂಡರಿಗಳನ್ನು ಬಾರಿಸಿದರು.  ಇನ್ನೊಂದೆಡೆ ಕೊಹ್ಲಿ  ಫೀಲ್ಡರ್‌ಗಳ ನಡುವಿನ ಗ್ಯಾಪ್‌ಗಳನ್ನು ಗುರುತಿಸಿ ಚೆಂಡಿಗೆ ದಾರಿ ತೋರಿಸಿದರು. ಹ್ಯಾರಿಸ್ ರವೂಫ್ ಎಸೆತವನ್ನು ಮಿಡ್‌ ಆಫ್‌ ದಾಟಿಸಿ ಮೊದಲ ಬೌಂಡರಿ ಗಳಿಸಿದರು.  ಅವರು 14 ಸಾವಿರ ರನ್‌ಗಳ ಮೈಲಿಗಲ್ಲು ದಾಟಿದರು. 

ಅಬ್ರಾರ್ ಹಾಕಿದ ಕೇರಂ ಬಾಲ್‌ನಲ್ಲಿ ಗಿಲ್ ವಿಕೆಟ್ ಉರುಳಿತು. ಕ್ರೀಸ್‌ಗೆ ಬಂದ ಶ್ರೇಯಸ್ ಅಯ್ಯರ್ ಅವರು ಕೊಹ್ಲಿಯೊಂದಿಗೆ ಜೊತೆಗೂಡಿದರು. ಅಯ್ಯರ್ ಆರಂಭದಲ್ಲಿ ಸ್ವಲ್ಪ ನಿಧಾನವಾಗಿ ಆಡಿದರು. ನಂತರ ವೇಗ ಹೆಚ್ಚಿಸಿದರು. ಕೊಹ್ಲಿ ಅವರು ಇನಿಂಗ್ಸ್‌ ಕೊನೆಯವರೆಗೆ ಆಡುವ ಇರಾದೆಯಿಂದಲೇ ಬ್ಯಾಟಿಂಗ್ ಮಾಡಿದರು. ಯಶಸ್ವಿಯೂ ಆದರು.  ಭಾರತದ ಬೌಲಿಂಗ್ ಪೂರ್ಣ ಪ್ರಮಾಣದಲ್ಲಿ ಶಿಸ್ತುಬದ್ಧವಾಗಿರಲಿಲ್ಲ. ಮೊಹಮ್ಮದ್ ಶಮಿ ಅವರು ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ 5 ವೈಡ್ ಹಾಕಿದರು. ನಂತರದಲ್ಲಿ ತಮ್ಮ ಸ್ವಿಂಗ್ ಕೌಶಲಗಳನ್ನು ತೋರಿದರು. ಆದರೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮವಾಗಿ ಬೌಲಿಂಗ್ ಮಾಡಿದರು. 3 ವಿಕೆಟ್ ಗಳಿಸಿದರು. 

ಶಕೀಲ್ ಮತ್ತು ರಿಜ್ವಾನ್ ಅವರ ಬ್ಯಾಟಿಂಗ್‌ನಿಂದಾಗಿ ಪಾಕ್ ತಂಡವು 34 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 151 ರನ್ ಗಳಿಸಿತ್ತು. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವ ಭರವಸೆ ಇತ್ತು. ಆದರೆ ಹಾರ್ದಿಕ್ ಮತ್ತು ಅಕ್ಷರ್ ಅವರ ದಾಳಿಯಿಂದ ಇದು ಸಾಧ್ಯವಾಗಲಿಲ್ಲ. 10 ಎಸೆತಗಳ ಅಂತರದಲ್ಲಿ ಇಬ್ಬರ ವಿಕೆಟ್‌ಗಳೂ ಪತನವಾದವು. ಅಲ್ಲಿಂದ ಬ್ಯಾಟಿಂಗ್ ಪಡೆಯ ಕುಸಿತ ಆರಂಭವಾಯಿತು. 

2017ರ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಭಾರತ ಇಲ್ಲಿ ಮುಯ್ಯಿ ತೀರಿಸಿಕೊಂಡಿತು.

  • 51: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ದಾಖಲೆಯ ಶತಕಗಳು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49) ನಂತರದ ಸ್ಥಾನದಲ್ಲಿದ್ದಾರೆ

  • 158: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆದ ಒಟ್ಟು ಕ್ಯಾಚ್‌ಗಳು. ಈ ಮೂಲಕ ಭಾರತದ ಮೊಹಮ್ಮದ್‌ ಅಜರುದ್ದೀನ್‌ (156) ದಾಖಲೆಯನ್ನು ಮೀರಿ ನಿಂತರು. ಶ್ರೀಲಂಕಾದ ಮಹೇಲ ಜಯವರ್ಧನೆ (218) ಮತ್ತು ರಿಕಿ ಪಾಟಿಂಗ್‌ (160) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದಾರೆ.

  • 5: ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಪಡೆದ ‘ಪಂದ್ಯದ ಆಟಗಾರ’ ಗೌರವ. ಯಾವುದೇ ದೇಶದ ಆಟಗಾರ ಒಂದೇ ತಂಡದ ವಿರುದ್ಧ ಮೂರಕ್ಕಿಂತ ಅಧಿಕ ಬಾರಿ ಈ ಗೌರವ ಗಳಿಸಿಲ್ಲ.

  • 11: ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಗರಿಷ್ಠ ಎಸೆತ ಬೌಲಿಂಗ್‌ ಮಾಡಿದ ದಾಖಲೆಯನ್ನು ಮೊಹಮ್ಮದ್‌ ಶಮಿ ಅವರು ಇರ್ಫಾನ್‌ ಪಠಾಣ್‌ (2006) ಮತ್ತು ಜಹೀರ್‌ ಖಾನ್‌ (2003) ಅವರೊಂದಿಗೆ ಹಂಚಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.