ADVERTISEMENT

ಬ್ಯಾಂಡೇಜ್ ಕಟ್ಟಿಕೊಂಡೇ ಕ್ರೀಸ್‌ಗಿಳಿದ ವೋಕ್ಸ್: ನಾಯಕ ಸ್ಟೋಕ್ಸ್ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 16:08 IST
Last Updated 4 ಆಗಸ್ಟ್ 2025, 16:08 IST
<div class="paragraphs"><p>ರನ್‌ಗಾಗಿ ಓಡುತ್ತಿರುವ ಕ್ರಿಸ್‌ ವೋಕ್ಸ್‌</p></div>

ರನ್‌ಗಾಗಿ ಓಡುತ್ತಿರುವ ಕ್ರಿಸ್‌ ವೋಕ್ಸ್‌

   

ಕೃಪೆ: ರಾಯಿಟರ್ಸ್‌

ಲಂಡನ್‌: ಛಲ ಬಿಡದೆ ಹೋರಾಡಿದ ಭಾರತ ತಂಡ, ಇಂಗ್ಲೆಂಡ್‌ ಕಡೆಗೆ ವಾಲಿದ್ದ ಟೆಸ್ಟ್‌ ಪಂದ್ಯವನ್ನು ಕೊನೇ ಕ್ಷಣದಲ್ಲಿ ಗೆದ್ದುಕೊಂಡಿತು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.

ADVERTISEMENT

ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಆತಿಥೇಯರಿಗೆ 374 ರನ್‌ಗಳ ಸವಾಲಿನ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಂಗ್ಲರು, 357 ರನ್ ಗಳಿಸುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿದ್ದರು. ಭುಜದ ಗಾಯಕ್ಕೆ ತುತ್ತಾಗಿ ಮೊದಲ ದಿನವೇ ಪಂದ್ಯದಿಂದ ಹೊರಗುಳಿದಿದ್ದ ಕ್ರಿಸ್‌ವೋಕ್ಸ್‌ ಅವರು ಬ್ಯಾಟಿಂಗ್‌ ಬರೆಲೇಬೇಕಾಯಿತು.

ಬ್ಯಾಂಡೆಜ್‌ ಸುತ್ತಿದ್ದ ಎಡಗೈ ಅನ್ನು ಜೆರ್ಸಿಯೊಳಗೆ ಸೇರಿಸಿಕೊಂಡು ಕ್ರೀಸ್‌ಗಿಳಿದ ಅವರು ಬ್ಯಾಟಿಂಗ್‌ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ, ನಾನ್‌ಸ್ಟ್ರೈಕ್‌ನಲ್ಲಿ ನಿಂತು ಗಸ್‌ ಅಟ್ಕಿನ್‌ಸನ್‌ಗೆ ಸಾಥ್‌ ಕೊಡಲು ಬಂದಿದ್ದರು. ಆದರೂ, ಇಂಗ್ಲೆಂಡ್‌ಗೆ ಜಯ ಸಿಗಲಿಲ್ಲ.

ವೇಗಿ ಮೊಹಮ್ಮದ್‌ ಸಿರಾಜ್‌ ಅವರು ಇನಿಂಗ್ಸ್‌ನ 86ನೇ ಓವರ್‌ನ ಮೊದಲ ಎಸೆತದಲ್ಲಿ ಹಾಕಿದ ಯಾರ್ಕರ್‌ಗೆ ಅಟ್ಕಿನ್‌ಸನ್‌ ಕ್ಲೀನ್‌ ಬೌಲ್ಡ್‌ ಆದರು. ಇದರೊಂದಿಗೆ, 367 ರನ್‌ಗೆ ಆಂಗ್ಲರ ಇನಿಂಗ್ಸ್‌ ಮುಗಿಯಿತು. ಭಾರತಕ್ಕೆ, 6 ರನ್‌ ಅಂತರದ ಜಯ ಒಲಿಯಿತು.

ಅಪಾರ ನೋವಿದ್ದರೂ ಒಂದೇ ಕೈಯಲ್ಲಿ ಬ್ಯಾಟ್‌ ಹಿಡಿದು, ತಂಡಕ್ಕಾಗಿ ಕ್ರೀಸ್‌ಗಿಳಿದ ವೋಕ್ಸ್‌ ಅವರನ್ನು ಕ್ರೀಡಾಭಿಮಾನಿಗಳು ಶ್ಲಾಘಿಸಿದ್ದಾರೆ. ಎದುರಾಳಿ ತಂಡದ ಆಟಗಾರರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿರುವ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌ ಅವರು ಪಂದ್ಯದ ಮೊದಲ ದಿನವೇ ಗಾಯಗೊಂಡಿದ್ದು ನಮ್ಮ ಗೆಲುವಿನ ಸಾಧ್ಯತೆ ಕಡಿಮೆಯಾಗುವಂತೆ ಮಾಡಿತು. ಅದೇನೇ ಇರಲಿ, ಅವರು ತುಂಬಾ ನೋವಿನಲ್ಲಿದ್ದರೂ ಬ್ಯಾಟಿಂಗ್‌ಗೆ ಇಳಿದರು. ಮುಖವನ್ನು ಗಮನಿಸಿದರೆ ಅವರೆಷ್ಟು ನೋವು ಅನುಭವಿಸುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅವರು ಅಂತಹ ಸ್ಥಿತಿಯಲ್ಲಿಯೂ ಬ್ಯಾಟಿಂಗ್‌ಗೆ ಇಳಿದದ್ದು ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ.

ಎಕ್ಸ್‌/ಟ್ವಿಟರ್‌ನಲ್ಲಿ ವೋಕ್ಸ್‌ ಅವರ ಚಿತ್ರ ಹಂಚಿಕೊಂಡಿರುವ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ), 'ಸಾಟಿಯಿಲ್ಲದ ಸ್ಫೂರ್ತಿ' ಎಂದು ಬರೆದುಕೊಂಡಿದೆ.

104 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ ಟೀಂ ಇಂಡಿಯಾದ ಮೊಹಮ್ಮದ್‌ ಸಿರಾಜ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್‌
ಭಾರತ
: 224 ರನ್‌ | ಇಂಗ್ಲೆಂಡ್‌: 247  ರನ್‌

ಎರಡನೇ ಇನಿಂಗ್ಸ್‌
ಭಾರತ
: 396 ರನ್‌ | ಇಂಗ್ಲೆಂಡ್‌: 367 ರನ್‌

ಪಂದ್ಯ ಶ್ರೇಷ್ಠ: ಮೊಹಮ್ಮದ್‌ ಸಿರಾಜ್‌ (9 ವಿಕೆಟ್‌)

ಸರಣಿ ಶ್ರೇಷ್ಠ: ಶುಭಮನ್ ಗಿಲ್‌ (754 ರನ್‌), ಹ್ಯಾರಿ ಬ್ರೂಕ್‌ (481 ರನ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.