ADVERTISEMENT

‘ಟೀಂ ಇಂಡಿಯಾ’ ಕೋಚ್‌ ಹುದ್ದೆಗೆ ಅರ್ಜಿ ಕರೆದ ಬಿಸಿಸಿಐ

ತಂಡದ ಈಗಿನ ಮುಖ್ಯ ತರಬೇತುದಾರ ರವಿಶಾಸ್ತ್ರಿ ಹಾಗೂ ಇತರ ನೆರವು ಸಿಬ್ಬಂದಿಗೆ ನೇರ ಅರ್ಹತೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 11:02 IST
Last Updated 16 ಜುಲೈ 2019, 11:02 IST
ಭಾರತ ತಂಡದ (ಎಡದಿಂದ) ಮುಖ್ಯ ಕೋಚ್‌ ರವಿಶಾಸ್ತ್ರಿ, ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮತ್ತು ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ –ರಾಯಿಟರ್ಸ್‌ ಚಿತ್ರ
ಭಾರತ ತಂಡದ (ಎಡದಿಂದ) ಮುಖ್ಯ ಕೋಚ್‌ ರವಿಶಾಸ್ತ್ರಿ, ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಮತ್ತು ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ –ರಾಯಿಟರ್ಸ್‌ ಚಿತ್ರ   

ನವದೆಹಲಿ (ಪಿಟಿಐ/ರಾಯಿಟರ್ಸ್‌): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೀನಿಯರ್‌ ಪುರುಷರ ತಂಡದ ನೆರವು ಸಿಬ್ಬಂದಿಯ ನೇಮಕಕ್ಕೆ ಮಂಗಳವಾರ ಹೊಸದಾಗಿ ಅರ್ಜಿಗಳನ್ನು ಕರೆದಿದೆ.

ಮುಂದಿನ ತಿಂಗಳು ವೆಸ್ಟ್ ಇಂಡೀಸ್‌ ವಿರುದ್ಧ ನಡೆಯಲಿರುವ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ.

ರವಿಶಾಸ್ತ್ರಿ, ಬೌಲಿಂಗ್ ಕೋಚ್‌ ಭರತ್ ಅರುಣ್‌, ಬ್ಯಾಟಿಂಗ್ ಕೋಚ್ ಸಂಜಯ್‌ ಬಂಗಾರ್‌ ಮತ್ತು ಫೀಲ್ಡಿಂಗ್ ಕೋಚ್‌ ಆರ್.ಶ್ರೀಧರ್ ಅವರ ಅವಧಿಯನ್ನು ವಿಶ್ವಕಪ್ ಹಿನ್ನೆಲೆಯಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿತ್ತು. ಆಗಸ್ಟ್ 3ರಿಂದ ಸೆಪ್ಟೆಂಬರ್ 3ರವರೆಗೆ ಕೆರಿಬಿಯನ್ನರ ನಾಡಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್‌ ಎದುರಿನ ಏಕದಿನ (ಮೂರು ಪಂದ್ಯ), ಟ್ವೆಂಟಿ–20 (ಮೂರು ಪಂದ್ಯ) ಮತ್ತು ಟೆಸ್ಟ್‌ (ಎರಡು ಪಂದ್ಯ) ಸರಣಿಗಳು ಇವರ ಪಾಲಿಗೆ ಕೊನೆಯದ್ದಾಗಲಿವೆ.

ADVERTISEMENT

ಕೋಚ್‌ಗಳ ನೇಮಕಕ್ಕೆ ಬಿಸಿಸಿಐ ಈ ಸಲ ಮೂರು ಅಂಶಗಳ ಮಾನದಂಡ ಅನುಸರಿಸಲು ನಿರ್ಧರಿಸಿದೆ. ಇದರ ಅನ್ವಯ ಹುದ್ದೆಗೆ ಅರ್ಜಿ ಹಾಕುವವರು 60 ವರ್ಷದೊಳಗಿನವರಾಗಿರಬೇಕು. ಜೊತೆಗೆ ಟೆಸ್ಟ್‌ ಮಾನ್ಯತೆ ಹೊಂದಿರುವ ಯಾವುದೇ ರಾಷ್ಟ್ರೀಯ ತಂಡಕ್ಕೆ ಕನಿಷ್ಠ ಎರಡು ವರ್ಷ ತರಬೇತಿ ನೀಡಿದ ಅನುಭವ ಹೊಂದಿರಬೇಕು.

ಮುಖ್ಯ ಕೋಚ್‌, ಬ್ಯಾಟಿಂಗ್‌ ಕೋಚ್‌, ಬೌಲಿಂಗ್‌ ಕೋಚ್‌, ಫೀಲ್ಡಿಂಗ್‌ ಕೋಚ್‌, ಫಿಸಿಯೊ, ಸ್ಟ್ರೆಂಥ್‌ ಆ್ಯಂಡ್‌ ಕಂಡಿಷನಿಂಗ್‌ ಕೋಚ್‌ ಮತ್ತು ಅಡ್ಮಿನಿಸ್ಟ್ರೇಟಿವ್‌ ಮ್ಯಾನೇಜರ್‌ ಹುದ್ದೆಗಳಿಗೆ ಜುಲೈ 30ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಭಾರತ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಲ್ಲೇ ಹೊರಬಿದ್ದ ನಂತರ ಟ್ರೇನರ್ ಶಂಕರ್‌ ಬಸು ಮತ್ತು ಫಿಸಿಯೊ ಪ್ಯಾಟ್ರಿಕ್ ಫರ್ಹಾತ್‌ ಅವರು ಹುದ್ದೆ ತೊರೆದಿದ್ದರು.

ಕೋಚ್‌ ಶಾಸ್ತ್ರಿ ಹಾಗೂ ಈಗ ತಂಡದ ನೆರವು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ನೇರ ಅರ್ಹತೆ ನೀಡಲಾಗಿದೆ. ಇವರು ಹೊಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಈ ವಿಷಯವನ್ನು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಖ್ಯ ಕೋಚ್‌ ಸ್ಥಾನಕ್ಕೆ ಅರ್ಜಿ ಹಾಕುವವರು 30 ಟೆಸ್ಟ್‌ ಮತ್ತು 50 ಏಕದಿನ ಪಂದ್ಯಗಳನ್ನು ಆಡಿರಬೇಕು. ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಹುದ್ದೆ ಬಯಸಿ ಅರ್ಜಿ ಸಲ್ಲಿಸುವವರು ಕನಿಷ್ಠ 10 ಟೆಸ್ಟ್‌ ಮತ್ತು 25 ಏಕದಿನ ಪಂದ್ಯಗಳನ್ನು ಅಡಿರಬೇಕು.

ವಿಂಡೀಸ್‌ ಪ್ರವಾಸದ ನಂತರ ಭಾರತ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಸರಣಿ ಆಡಲಿದೆ. ಇದು ಸೆಪ್ಟೆಂಬರ್‌ 15ರಿಂದ ಆರಂಭವಾಗಲಿದೆ.

57ರ ಹರೆಯದ ಶಾಸ್ತ್ರಿ, 2017ರಲ್ಲಿ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಜೊತೆಗೆ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದಿತ್ತು. ಈಗಲೂ ಅಗ್ರಪಟ್ಟ ಕಾಪಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.