ಮೊಹಮ್ಮದ್ ಕೈಫ್
ಪಿಟಿಐ ಚಿತ್ರ
ನವದೆಹಲಿ: ಭಾರತದ ಪ್ರಮುಖ ಕ್ರಿಕೆಟಿಗರಾರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಡಿಢೀರ್ ವಿದಾಯ ಹೇಳಿದ್ದಾರೆ. ಅಭಿಮಾನಿಗಳು ಆ ಅಚ್ಚರಿಯ ಆಘಾತದಿಂದ ಹೊರಬರುವ ಮುನ್ನವೇ 'ಮತ್ತೊಂದು ವಿಕೆಟ್ ಉರುಳಲಿದೆ' ಎಂದು ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ವಿರಾಟ್ ಹಾಗೂ ರೋಹಿತ್ ಟಿ20, ಟೆಸ್ಟ್ ಮಾದರಿಯಿಂದ ನಿವೃತ್ತರಾಗಿದ್ದರೆ, ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಹೊರನಡೆದಿದ್ದಾರೆ. ಈ ಮೂವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವನ್ನು ಯುವ ನಾಯಕ ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1–2 ಅಂತರದ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ, ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 669 ರನ್ ಕಲೆಹಾಕಿ 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಗಿಲ್ ಪಡೆ, 2 ವಿಕೆಟ್‌ಗೆ 174 ರನ್ ಗಳಿಸಿದೆ. ಅನುಭವಿ ಕೆ.ಎಲ್.ರಾಹುಲ್ (87 ರನ್) ಮತ್ತು ಗಿಲ್ (78) ಕ್ರೀಸ್‌ನಲ್ಲಿದ್ದಾರೆ. ಆಂಗ್ಲರ ಲೆಕ್ಕ ಚುಕ್ತಾ ಮಾಡಲು ಇನ್ನೂ 137 ರನ್ ಗಳಿಸಬೇಕಿದೆ. ಇಂದು ಅಂತಿಮ ದಿನವಾಗಿರುವುದರಿಂದ ಪಂದ್ಯ ಕುತೂಹಲ ಕೆರಳಿಸಿದೆ.
ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾಗೆ ಸಾಧ್ಯವಾಗಿರಲಿಲ್ಲ. ಅವರು 33 ಓವರ್‌ಗಳಲ್ಲಿ 112 ರನ್ ಬಿಟ್ಟುಕೊಟ್ಟು ಕೇವಲ 2 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಅವರಿಗೆ ಮೊದಲ ವಿಕೆಟ್ ದಕ್ಕಿದ್ದು 24ನೇ ಓವರ್‌ನಲ್ಲಿ.
'ಬೂಮ್ರಾ ನಿವೃತ್ತಿ ಸಾಧ್ಯತೆ'
ಬೂಮ್ರಾ ನಿವೃತ್ತಿ ಕುರಿತು ಮಾತನಾಡಿರುವ ಕೈಫ್, 'ನನ್ನ ಪ್ರಕಾರ, ಮುಂಬರುವ ಟೆಸ್ಟ್ ಸರಣಿಗಳಲ್ಲಿ ಜಸ್‌ಪ್ರೀತ್ ಬುಮ್ರಾ ಆಟವನ್ನು ನೋಡಲು ಸಾಧ್ಯವಾಗದೇ ಇರಬಹುದು. ಅವರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ' ಎಂದಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, 'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೊರನಡೆದಿದ್ದಾರೆ. ಅಶ್ವಿನ್ ಕೂಡ ನಿವೃತ್ತರಾಗಿದ್ದಾರೆ. ಇದೀಗ, ಬೂಮ್ರಾ ಸರದಿ ಎನ್ನುವಂತೆ ಕಾಣುತ್ತಿದೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು' ಎಂದು ಹೇಳಿದ್ದಾರೆ.
'ಪಂದ್ಯಗಳನ್ನು ನೋಡಿರುವುದರಿಂದ, ಬೂಮ್ರಾ ಆಟವನ್ನು ಆನಂದಿಸುತ್ತಿಲ್ಲ ಎನಿಸುತ್ತಿದೆ. ಅವರು ತಮ್ಮ ದೇಹದೊಂದಿಗಿನ ಸೆಣಸಾಟದಲ್ಲಿ ಸೋತಿದ್ದಾರೆ. ಉತ್ಸಾಹ ಹಾಗೆಯೇ ಇದೆಯಾದರೂ, ದೇಹದಲ್ಲಿ ಅದು ಕಾಣುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಏನು ಮಾಡಲು ಸಾಧ್ಯ' ಎಂದು ಪ್ರಶ್ನಿಸಿದ್ದಾರೆ.
ಪ್ರಸ್ತುತ ಟೂರ್ನಿಯಲ್ಲಿ ಆಡೋದು ಮೂರೇ ಪಂದ್ಯ!
ರೋಹಿತ್ ವಿದಾಯದ ಬಳಿಕ ಭಾರತ ತಂಡದ ಟೆಸ್ಟ್ ನಾಯಕತ್ವವನ್ನು ಬೂಮ್ರಾ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಕಾರ್ಯಭಾರ ಒತ್ತಡ ನಿರ್ವಹಣೆ ಕಾರಣಕ್ಖಾಗಿ ಅವರು ಅದನ್ನು ನಿರಾಕರಿಸಿದ್ದರು.
ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಸರಣಿಯಲ್ಲಿ ಬೂಮ್ರಾ ಆಡುವುದು ಮೂರೇ ಪಂದ್ಯಗಳಲ್ಲಿ ಎನ್ನಲಾಗಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯ ಬಳಿಕ ಅವರು ಬರ್ಮಿಂಗ್‌ಹ್ಯಾಮ್ (2ನೇ) ಟೆಸ್ಟ್‌ನಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದರು.
2ನೇ ಟೆಸ್ಟ್‌ಗೂ ಮುನ್ನ ಮಾತನಾಡಿದ್ದ ಕೋಚ್ ಗೌತಮ್ ಗಂಭೀರ್, 'ಬೂಮ್ರಾ ಅವರ ಕೆಲಸದ ಹೊರೆ ನಿರ್ವಹಿಸುವುದು ಅತಿಮುಖ್ಯ. ಇನ್ನೂ ಸಾಕಷ್ಟು ಆಟ ಆಡುವುದಿದೆ. ಅವರು ಎಂತಹ ಫಲಿತಾಂಶಗಳನ್ನು ತಂದುಕೊಡಬಲ್ಲರು ಎಂಬುದು ಗೊತ್ತಿದೆ' ಎಂದಿದ್ದರು. ಹಾಗೆಯೇ, 'ಅವರು ಮೂರು ಟೆಸ್ಟ್‌ಗಳನ್ನಷ್ಟೇ ಆಡಲಿದ್ದಾರೆ ಎಂಬುದು ಈ ಸರಣಿಗೂ ಮೊದಲೇ ನಿರ್ಧಾರವಾಗಿತ್ತು. ಆದರೆ, ಅವರ ದೇಹ ಹೇಗೆ ಸಹಕರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ' ಎಂದು ಹೇಳಿದ್ದರು.
ಹೀಗಾಗಿ, ಲಂಡನ್‌ನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಅವರು ಆಡುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತ ಪರ ಟೆಸ್ಟ್ ಮಾದರಿಯಲ್ಲಿ ಈವರೆಗೆ 48 ಪಂದ್ಯಗಳ 91 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಬೂಮ್ರಾ, 219 ವಿಕೆಟ್ ಪಡೆದಿದ್ದಾರೆ. 15 ಬಾರಿ ಐದು ವಿಕೆಟ್ ಗೊಂಚಲು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.