ADVERTISEMENT

ಕೊಹ್ಲಿ to ಪೂಜಾರ: 2025ರಲ್ಲಿ ನಿವೃತ್ತಿ ಘೋಷಿಸಿದ ಕ್ರಿಕೆಟಿಗರ ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2025, 6:02 IST
Last Updated 25 ಆಗಸ್ಟ್ 2025, 6:02 IST
<div class="paragraphs"><p>ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ</p></div>

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ

   

ಕೃಪೆ: ಪಿಟಿಐ

ಭಾರತ ಕ್ರಿಕೆಟ್‌ ಲೋಕದ 'ಟೆಸ್ಟ್‌ ಪರಿಣತ' ಬ್ಯಾಟರ್‌ ಎನಿಸಿದ್ದ ಚೇತೇಶ್ವರ ಪೂಜಾರ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅವರೂ ಇದೇ ವರ್ಷದ ಮೇ ತಿಂಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ಹೊರ ನಡೆದಿದ್ದಾರೆ. ಹೀಗಾಗಿ, ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯುವ ಆಟಗಾರರನ್ನು ನೆಚ್ಚಿಕೊಳ್ಳುವಂತಾಗಿದೆ.

ADVERTISEMENT

ವೆಸ್ಟ್‌ ಇಂಡೀಸ್‌ನ 29 ವರ್ಷದ ಆಟಗಾರ ನಿಕೋಲಸ್‌ ಪೂರನ್‌ ಹಾಗೂ ದಕ್ಷಿಣ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್‌ (34) ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾಗಲೇ ಅಚ್ಚರಿ ಎಂಬಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ಇದೇ ವರ್ಷ ವಿದಾಯ ಹೇಳಿದ್ದಾರೆ.

ಇವರಷ್ಟೇ ಅಲ್ಲ. 2025ರಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ ವಿವಿಧ ದೇಶಗಳ ಪ್ರಮುಖ ಆಟಗಾರರ ಮಾಹಿತಿ ಇಲ್ಲಿದೆ

2025ರಲ್ಲಿ ಎಲ್ಲ ಮಾದರಿಗೆ ವಿದಾಯ ಹೇಳಿದವರು
ಮಾರ್ಟಿನ್‌ ಗುಪ್ಟಿಲ್‌
ನ್ಯೂಜಿಲೆಂಡ್‌ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಮಾರ್ಟಿನ್‌ ಗುಪ್ಟಿಲ್‌ ಅವರು ಜನವರಿ 8ರಂದು ನಿವೃತ್ತಿ ಘೋಷಿಸಿದರು. ಕಿವೀಸ್‌ ಪರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ (237 ರನ್‌) ಬಾರಿಸಿದ ಏಕೈಕ ಬ್ಯಾಟರ್‌ ಎಂಬ ಶ್ರೇಯ ಅವರದ್ದು.

ವರುಣ್‌ ಆ್ಯರನ್‌
ಭಾರತದ ಅತಿ ವೇಗದ ಬೌಲರ್‌ ಎನಿಸಿದ್ದ ವರುಣ್‌ ಆ್ಯರನ್‌ ಜನವರಿ 10ರಂದು ವಿದಾಯ ಹೇಳಿದರು. ಗಾಯದ ಸಮಸ್ಯೆ ಅವರ ವೃತ್ತಿ ಜೀವನಕ್ಕೆ ಹಿನ್ನಡೆಯನ್ನುಂಟು ಮಾಡಿತು.

ತಮಿಮ್‌ ಇಕ್ಬಾಲ್‌
ಬಾಂಗ್ಲಾದೇಶ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು (15,192) ರನ್ ಗಳಿಸಿದ ಆಟಗಾರ ಎನಿಸಿದ್ದ ತಮಿಮ್‌ ಇಕ್ಬಾಲ್‌ ಜನವರಿ 10ರಂದು ನಿವೃತ್ತಿ ಹೊಂದಿದರು.

ಶಪೂರ್‌ ಜರ್ದಾನ್‌
ಅಫ್ಗಾನಿಸ್ತಾನದ ಎಡಗೈ ವೇಗದ ಬೌಲರ್‌ ಜರ್ದಾನ್‌ ಅವರು ಇದೇ ವರ್ಷ ವಿದಾಯ ಹೇಳಿದರು. ಅವರು 36 ಟೆಸ್ಟ್‌ ಹಾಗೂ 44 ಏಕದಿನ ಪಂದ್ಯಗಳಲ್ಲಿ ಒಟ್ಟು 80 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ದಿಮುತ್‌ ಕರುಣಾರತ್ನೆ
ಶ್ರೀಲಂಕಾ ಪರ ನೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ 7ನೇ ಆಟಗಾರ ಎನಿಸಿದ್ದ ಕರುಣಾರತ್ನೆ ಫೆಬ್ರುವರಿಯಲ್ಲಿ ವಿದಾಯ ಹೇಳಿದರು.

ಮಹಮದ್ದುಲ್ಲಾ
ಬಾಂಗ್ಲಾದೇಶ ತಂಡದ ಭರವಸೆಯ ಬ್ಯಾಟರ್‌ ಎನಿಸಿದ್ದ ಮಹಮದುಲ್ಲಾ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಹೆನ್ರಿಚ್‌ ಕ್ಲಾಸೆನ್‌
ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕ್ಲಾಸೆನ್‌ ಅವರು ತಮ್ಮ 33ನೇ ವಯಸ್ಸಿನಲ್ಲೇ ಅಚ್ಚರಿ ಎಂಬಂತೆ ಜೂನ್‌ ತಿಂಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ನಿರ್ಧಾರ ಮಾಡಿದರು.

ನಿಕೋಲಸ್‌ ಪೂರನ್‌
ವೆಸ್ಟ್ ಇಂಡೀಸ್‌ ಪರ ಹೆಚ್ಚು ಟಿ20 ಪಂದ್ಯಗಳಲ್ಲಿ ಆಡಿದ ಬ್ಯಾಟರ್‌ ಎನಿಸಿಕೊಂಡಿರುವ ನಿಕೋಲರ್‌ ಪೂರನ್‌ ಅವರೂ ಜೂನ್‌ನಲ್ಲಿ ವಿದಾಯ ಸಾರಿದರು.

ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದವರು

ಮಾರ್ಕಸ್‌ ಸ್ಟೋಯಿನಸ್‌
ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಸ್‌ ಅವರು ಈ ವರ್ಷ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೂ ಮುನ್ನ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು. ಈ ಮಾದರಿಯಲ್ಲಿ 71 ಪಂದ್ಯಗಳಲ್ಲಿ ಆಡಿರುವ ಅವರು 6 ಅರ್ಧಶತಕ ಹಾಗೂ 1 ಶತಕ ಸಹಿತ 1,495 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಕೊಡುಗೆ ನೀಡಿರುವ ಅವರು 48 ವಿಕೆಟ್‌ ಸಹ ಪಡೆದಿದ್ದಾರೆ.

ಸ್ಟೀವ್‌ ಸ್ಮಿತ್‌
ಆಸ್ಟ್ರೇಲಿಯಾದ 'ಟೆಸ್ಟ್‌ ತಂತ್ರಜ್ಞ' ಬ್ಯಾಟರ್‌ ಸ್ಟೀವ್ ಸ್ಮಿತ್ ಅವರು ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಬಳಿಕ ಈ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರು. 2023 ಹಾಗೂ 2015ರಲ್ಲಿ ಏಕದಿನ ವಿಶ್ವಕಪ್‌ ಗೆದ್ದ ತಂಡದಲ್ಲಿ ಆಡಿದ್ದರು.

170 ಏಕದಿನ ಪಂದ್ಯ ಆಡಿರುವ ಅವರು 43.28ರ ಸರಾಸರಿಯಲ್ಲಿ 5,800 ರನ್ ಗಳಿಸಿದ್ದಾರೆ. 35 ಅರ್ಧಶತಕ ಮತ್ತು 12 ಶತಕಗಳನ್ನು ಸಿಡಿಸಿದ್ದಾರೆ.

ಮುಷ್ಫಿಕುರ್‌ ರಹೀಂ
2022ರಲ್ಲೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರಹೀಂ, ಮಾರ್ಚ್‌ನಲ್ಲಿ ಏಕದಿನ ಮಾದರಿಯಿಂದಲೂ ಹೊರ ನಡೆದರು. 274 ಏಕದಿನ ಪಂದ್ಯಗಳನ್ನು ಆಡಿದ್ದು, 36.42 ಸರಾಸರಿಯಲ್ಲಿ 7795 ರನ್ ಗಳಿಸಿದ್ದಾರೆ. ಬಾಂಗ್ಲಾ ಪರ ತಮೀಮ್ ಇಕ್ಬಾಲ್ (8357) ಮಾತ್ರ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

49 ಅರ್ಧಶತಕ, 9 ಶತಕ ಗಳಿಸಿದ್ದಾರೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌
ಆಸ್ಟ್ರೇಲಿಯಾ ತಂಡ 2023ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೂನ್‌ನಲ್ಲಿ ಈ ಮಾದರಿಗೆ ವಿದಾಯ ಹೇಳಿದ್ದಾರೆ.

ಆಸಿಸ್‌ ಪರ 149 ಪಂದ್ಯ ಆಡಿರುವ ಮ್ಯಾಕ್ಸಿ, 3,990 ರನ್ ಗಳಿಸಿದ್ದಾರೆ. ಅದರಲ್ಲಿ 23 ಅರ್ಧಶತಕ ಮತ್ತು 4 ಶತಕ ಸೇರಿವೆ. 2023ರ ವಿಶ್ವಕಪ್‌ ವೇಳೆ ಅಫ್ಗಾನಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಮೋಘ ದ್ವಿಶತಕ (201 ರನ್‌) ಬಾರಿಸಿದ್ದರು. ಅದು, ಏಕದಿನ ಕ್ರಿಕೆಟ್‌ನ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದೆನಿಸಿದೆ.

ಬೌಲಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡಿರುವ ಅವರು, 77 ವಿಕೆಟ್‌ಗಳನ್ನೂ ಜೇಬಿಗಿಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದವರು
ಟಿ20 ಮಾದರಿಗೆ ಕಳೆದ ವರ್ಷವೇ ವಿದಾಯ ಹೇಳಿರುವ ರೋಹಿತ್ ಶರ್ಮಾ, ಮೇ ತಿಂಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಮೊದಲೆರಡು ಆವೃತ್ತಿಯಲ್ಲಿ ಫೈನಲ್‌ ತಲುಪಿದ್ದ ಭಾರತ, ರೋಹಿತ್‌ ನಾಯಕತ್ವದಲ್ಲಿ 2025ರಲ್ಲಿ ಅಂತಿಮ ಹಂತಕ್ಕೇರಲು ವಿಫಲವಾಗಿತ್ತು. ಹೀಗಾಗಿ, ಅವರು ದೀರ್ಘ ಮಾದರಿಯಿಂದ ಹೊರ ನಡೆಯುವ ನಿರ್ಧಾರ ಮಾಡಿದರು.

ಒಟ್ಟು 67 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ರೋಹಿತ್, 40.58ರ ಸರಾಸರಿಯಲ್ಲಿ 4,301 ರನ್ ಗಳಿಸಿದ್ದಾರೆ. 18 ಅರ್ಧಶತಕ, 12 ಶತಕ ಮತ್ತು 1 ದ್ವಿಶತಕ ಅವರ ಬ್ಯಾಟ್‌ನಿಂದ ಬಂದಿವೆ.

24 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಅವರು 12ರಲ್ಲಿ ಜಯ ತಂದುಕೊಟ್ಟಿದ್ದರು.

ವಿರಾಟ್‌ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ 2024ರಲ್ಲಿ ಚುಟುಕು ಕ್ರಿಕೆಟ್‌ ವಿಶ್ವಕಪ್‌ ಎತ್ತಿ ಹಿಡಿಯುತ್ತಿದ್ದಂತೆ ಆ ಮಾದರಿಗೆ ವಿದಾಯ ಘೋಷಣೆ ಮಾಡಿದ್ದರು. ಇದೀಗ, ಟೆಸ್ಟ್‌ನಿಂದಲೂ ಹೊರನಡೆದಿದ್ದಾರೆ. ಮೇ ತಿಂಗಳಲ್ಲೇ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

2011ರಲ್ಲಿ (ವೆಸ್ಟ್‌ ಇಂಡೀಸ್‌ ವಿರುದ್ಧ) ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಅವರು, 7 ದ್ವಿಶತಕ, 30 ಶತಕ, 31 ಅರ್ಧಶತಕ ಬಾರಿಸಿದ್ದಾರೆ.

2014ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಕೊಹ್ಲಿ, ಈ ಮಾದರಿಯಲ್ಲಿ ಭಾರತದ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ 68 ಪಂದ್ಯಗಳಲ್ಲಿ ಭಾರತ 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋಲು ಕಂಡರೆ, ಉಳಿದ 11 ಡ್ರಾ ಆಗಿದ್ದವು.

ಎಂಜೆಲೊ ಮ್ಯಾಥ್ಯೂಸ್‌
ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ಗೆ ಉತ್ತಮ ಕಾಣಿಕೆ ನೀಡಿದ್ದ ಮ್ಯಾಥ್ಯೂಸ್‌ ಕೂಡ ಮೇ ಮಾಸದಲ್ಲೇ ಟೆಸ್ಟ್ ಕ್ಯಾಪ್‌ ಕೆಳಗಿಟ್ಟರು.

ದೀರ್ಘ ಮಾದರಿಯಲ್ಲಿ 119 ಪಂದ್ಯಗಳಲ್ಲಿ ಆಡಿರುವ ಮ್ಯಾಥ್ಯೂಸ್‌, 1 ದ್ವಿಶತಕ, 16 ಶತಕ ಮತ್ತು 45 ಅರ್ಧಶತಕ ಸಹಿತ 8,214 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 33 ವಿಕೆಟ್‌ಗಳನ್ನೂ ಕಬಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.