ADVERTISEMENT

ಏಕದಿನ ಕ್ರಿಕೆಟ್‌ಗೆ ವಿದಾಯ: ಸ್ವಾರ್ಥಕ್ಕಾಗಿ ಆಡಲು ಬಯಸಲ್ಲ ಎಂದ ಮ್ಯಾಕ್ಸ್‌ವೆಲ್

ಪಿಟಿಐ
Published 2 ಜೂನ್ 2025, 7:48 IST
Last Updated 2 ಜೂನ್ 2025, 7:48 IST
<div class="paragraphs"><p>ಗ್ಲೆನ್‌ ಮ್ಯಾಕ್ಸ್‌ವೆಲ್‌</p></div>

ಗ್ಲೆನ್‌ ಮ್ಯಾಕ್ಸ್‌ವೆಲ್‌

   

ಪಿಟಿಐ

ಮೆಲ್ಬರ್ನ್‌: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಏಕದಿನ ಮಾದರಿಗೆ ಸೋಮವಾರ ವಿದಾಯ ಹೇಳಿದ್ದಾರೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಅನ್ನು ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅವರು, 'ಸ್ವಾರ್ಥಕ್ಕಾಗಿ ಆಡಲು ಬಯಸುವುದಿಲ್ಲ' ಎಂದಿದ್ದಾರೆ.

ADVERTISEMENT

36 ವರ್ಷದ ಈ ಆಟಗಾರ, ಆಸ್ಟ್ರೇಲಿಯಾ ತಂಡದ ಪರ 149 ಪಂದ್ಯಗಳಲ್ಲಿ ಆಡಿದ್ದಾರೆ. 4 ಶತಕ, 23 ಅರ್ಧಶತಕ ಸಹಿತ 3,990 ರನ್‌ ಮತ್ತು 77 ವಿಕೆಟ್‌ ಗಳಿಸಿದ್ದಾರೆ.

2023ರ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಈ ಮಾದರಿಯ ಶ್ರೇಷ್ಠ ಇನಿಂಗ್ಸ್ ಆಡಿದ್ದ ಮ್ಯಾಕ್ಸ್‌ವೆಲ್‌, ಆಸ್ಟ್ರೇಲಿಯಾ 6ನೇ ವಿಶ್ವಕಪ್‌ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್‌ 7ರಂದು ನಡೆದಿದ್ದ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಗಾನ್‌ ತಂಡ, ನಿಗದಿತ 50 ಓವರ್‌ಗಳಲ್ಲಿ 291 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 91 ರನ್ ಗಳಿಸುವಷ್ಟರಲ್ಲೇ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ ಕಟ್ಟಿಕೊಂಡು ಮುರಿಯದ 8ನೇ ವಿಕೆಟ್‌ ಪಾಲುದಾರಿಕೆಯಲ್ಲಿ 202 ರನ್‌ ಕಲೆಹಾಕಿದ್ದರು. ಇದರಲ್ಲಿ ಕಮಿನ್ಸ್‌ ಗಳಿಸಿದ್ದು ಕೇವಲ 12 ರನ್.

ಒಟ್ಟು 128 ಎಸೆತಗಳನ್ನು ಎದುರಿಸಿ ಮ್ಯಾಕ್ಸಿ ಬರೋಬ್ಬರಿ 201 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರ ಆಟದ ಬಲದಿಂದ ಕಾಂಗರೂ ಪಡೆ ಇನ್ನೂ 19 ಎಸೆತ ಬಾಕಿ ಇರುವಂತೆಯೇ ಜಯ ಸಾಧಿಸಿತು.

ಗಾಯದ ಸಮಸ್ಯೆಯಿಂದ ಬಳಲುತ್ತಲೇ ಏಕದಿನ ಮಾದರಿಯಲ್ಲಿ ಚೊಚ್ಚಲ ದ್ವಿಶಕದ ಸಾಧನೆ ಮಾಡಿದ್ದ ಮ್ಯಾಕ್ಸ್‌ವೆಲ್‌, ತಮ್ಮ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದ್ದರು. ಇದು, ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಇನಿಂಗ್ಸ್‌ ಎನಿಸಿಕೊಂಡಿದೆ.

'Final Word Podcast'ನಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್‌, ಪರಿಸ್ಥಿತಿಗೆ ದೇಹವು ಸ್ಪಂದಿಸುತ್ತಿರುವ ರೀತಿ ನೋಡಿದರೆ ತಂಡಕ್ಕೆ ನಿರಾಸೆ ಮಾಡುತ್ತಿದ್ದೇನೆ ಎನಿಸಿತು ಎಂದಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ ಅವರೊಂದಿಗೆ ಚರ್ಚಿಸಿದಾಗ 2027ರ ಏಕದಿನ ವಿಶ್ವಕಪ್‌ ಯೋಜನೆ ಕುರಿತು ಹೇಳಿದರು. ಆದರೆ, ನಾನು ಆಡುತ್ತೇನೆ ಎನಿಸುತ್ತಿಲ್ಲ ಎಂಬುದಾಗಿ ತಿಳಿಸಿದೆ ಎಂದು ಹೇಳಿದ್ದಾರೆ.

'ನಾನು ಆಡಲು ಸಮರ್ಥನಿದ್ದರೆ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಯಾವಾಗಲೂ ಹೇಳುತ್ತಿದ್ದೆ. ಒಂದೆರಡು ಸರಣಿಗಳ ಸಲುವಾಗಿ ಸ್ವಾರ್ಥಕ್ಕಾಗಿ ಆಡಲು ಬಯಸುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಮ್ಯಾಕ್ಸ್‌ವೆಲ್‌ ಅವರು ಏಕದಿನ ಮಾದರಿಯಲ್ಲಿ 126ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುತ್ತಾರೆ. ಇದು, ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ ನಂತರ ಎರಡನೇ ಅತ್ಯುತ್ತಮ ಸ್ಟ್ರೈಕ್‌ರೇಟ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.