ದುಲೀಪ್ ಟ್ರೋಫಿ
ಬೆಂಗಳೂರು: ಕೇಂದ್ರ ವಲಯ ತಂಡವು 11 ವರ್ಷಗಳ ಬಳಿಕ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿತು.
ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ವಿರುದ್ಧ ಕೇಂದ್ರ ವಲಯ ಆರು ವಿಕೆಟ್ ಅಂತರದ ಜಯ ಗಳಿಸಿತು.
ಗೆಲುವಿನ 65 ರನ್‌ಗಳ ಅಲ್ಪ ಮೊತ್ತ ಪಡೆದ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯವು, ಅಂತಿಮ ದಿನದಾಟದಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ ಕೇವಲ 149 ರನ್ನಿಗೆ ಆಲೌಟ್ ಆಗಿತ್ತು. ಕೇಂದ್ರ ವಲಯದ ಪರ ಸಾರಾಂಶ್ ಜೈನ್ ಐದು ಹಾಗೂ ಕುಮಾರ್ ಕಾರ್ತಿಕೇಯ ನಾಲ್ಕು ವಿಕೆಟ್ ಗಳಿಸಿದ್ದರು.
ಯಶ್ ರಾಥೋಡ್ (194) ಹಾಗೂ ರಜತ್ ಪಾಟೀದಾರ್ (101) ಅಮೋಘ ಶತಕಗಳ ಬೆಂಬಲದಿಂದ ಕೇಂದ್ರ ವಲಯವು ಮೊದಲ ಇನಿಂಗ್ಸ್‌ನಲ್ಲಿ 511 ರನ್ ಪೇರಿಸಿತ್ತು. ಆ ಮೂಲಕ 362 ರನ್‌ಗಳ ಬೃಹತ್ ಮುನ್ನಡೆ ಗಳಿಸಿತ್ತು.
ದ್ವಿತೀಯ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ದಿಟ್ಟ ಹೋರಾಟ ನೀಡಿತ್ತಲ್ಲದೆ 426 ರನ್ ಗಳಿಸಿತ್ತು. ಅಂಕಿತ್ ಶರ್ಮಾ 99, ಆ್ಯಂಡ್ರೆ ಸಿದ್ದಾರ್ಥ್ ಅಜೇಯ 84 ಹಾಗೂ ಸ್ಮರಣ್ ರವಿಚಂದ್ರನ್ 67 ರನ್ ಗಳಿಸಿದರು.
ಕೇಂದ್ರ ವಲಯದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಯಶ್ ರಾಥೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.