ADVERTISEMENT

ENG vs IND Test: ಭಾರತ ಬ್ಯಾಟಿಂಗ್; ಹೊರಬಿದ್ದ ಕರುಣ್, ಕಾಂಬೋಜ್ ಪದಾರ್ಪಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2025, 10:25 IST
Last Updated 23 ಜುಲೈ 2025, 10:25 IST
<div class="paragraphs"><p>ಕರುಣ್‌ ನಾಯರ್‌ ಹಾಗೂ&nbsp;ಅನ್ಶುಲ್‌ ಕಾಂಬೋಜ್‌</p></div>

ಕರುಣ್‌ ನಾಯರ್‌ ಹಾಗೂ ಅನ್ಶುಲ್‌ ಕಾಂಬೋಜ್‌

   

ಚಿತ್ರ: ಪಿಟಿಐ

ಮ್ಯಾಂಚೆಸ್ಟರ್‌: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ಬೌಲಿಂಗ್ ಆಯ್ದುಕೊಂಡಿದೆ.

ADVERTISEMENT

ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಗಿದಿವೆ. ಆತಿಥೇಯ ತಂಡ 2–1 ಅಂತರದಿಂದ ಮುನ್ನಡೆ ಸಾಧಿಸಿದೆ.

ಪಂದ್ಯವನ್ನು ಗೆದ್ದರೆ, ಆಂಗ್ಲರಿಗೆ ಸರಣಿಯ ಜಯ ಖಾತ್ರಿಯಾಗಲಿದೆ. ಆದರೆ, ಆತಿಥೇಯರನ್ನು ಮಣಿಸಿ, ಸರಣಿ ಜಯದ ಕನಸನ್ನು ಜೀವಂತವಾಗಿ ಇರಿಸಿಕೊಳ್ಳುವ ಯೋಜನೆಯಲ್ಲಿ ಟೀಂ ಇಂಡಿಯಾ ಇದೆ.

ಹೀಗಾಗಿ, ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ.

ಭಾರತ ತಂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಗಾಯಾಳುಗಳಾದ ಆಕಾಶ್‌ ದೀಪ್‌, ನಿತೀಶ್‌ಕುಮಾರ್‌ ರೆಡ್ಡಿ ಹಾಗೂ ಮೊದಲ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಕರುಣ್‌ ನಾಯರ್‌ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಬದಲು ಕ್ರಮವಾಗಿ ಅನ್ಶುಲ್‌ ಕಾಂಬೋಜ್‌, ಶಾರ್ದೂಲ್ ಠಾಕೂರ್ ಮತ್ತು ಸಾಯಿ ಸುದರ್ಶನ್‌ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕಾಂಬೋಜ್‌ಗೆ ಇದು ಪದಾರ್ಪಣೆ ಪಂದ್ಯವಾಗಿದೆ.

ಇಂಗ್ಲೆಂಡ್‌ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಗಾಯಗೊಂಡಿರುವ ಸ್ಪಿನ್ನರ್‌ ಶೋಯಬ್‌ ಬಷೀರ್‌ ಬದಲು ಆಲ್‌ರೌಂಡರ್‌ ಲಿಯಾಮ್‌ ಡಾಸನ್‌ ಆಡುತ್ತಿದ್ದಾರೆ.

ಸ್ಥಾನ ಕಳೆದುಕೊಂಡ ಕರುಣ್‌
ದೀರ್ಘ ಸಮಯದ ಬಳಿಕ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಕರುಣ್‌ ನಾಯರ್‌, ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾರಾಗಿದ್ದಾರೆ. ಹೀಗಾಗಿ, ನಾಲ್ಕನೇ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಟೀಂ ಇಂಡಿಯಾ ಪರ 2016ರಲ್ಲಿ ಇಂಗ್ಲೆಂಡ್ ವಿರುದ್ಧವೇ ಪದಾರ್ಪಣೆ ಮಾಡಿದ್ದ ಕರುಣ್‌, ಮೂರನೇ ಪಂದ್ಯದಲ್ಲೇ ತ್ರಿಶತಕ ಬಾರಿಸಿ ಮಿಂಚಿದ್ದರು. ನಂತರ ಅವರ ಬ್ಯಾಟ್‌ ಸದ್ದು ಮಾಡಿರಲಿಲ್ಲ. 2017ರಲ್ಲಿ ಆಡಿದ ಮೂರು ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಕೇವಲ 54 ರನ್‌ ಗಳಿಸಿದ್ದರು. ನಂತರ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಕಳೆದ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಅಮೋಘ ಪ್ರದರ್ಶನದ ಕಾರಣಕ್ಕೆ ಈ ಬಾರಿ ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆದರೆ, ಮೊದಲ ಮೂರು ಪಂದ್ಯಗಳಲ್ಲಿ 6 ಇನಿಂಗ್ಸ್‌ಗಳಲ್ಲಿ ಅವರು ಗಳಿಸಿರುವುದು 131 ರನ್‌ ಅಷ್ಟೇ. ಒಮ್ಮೆಯೂ ಅರ್ಧಶತಕದ ಗಡಿ ದಾಟದ ಅವರು, 40 ರನ್‌ ಗಳಿಸಿರುವುದೇ ಗರಿಷ್ಠ ಮೊತ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.