ADVERTISEMENT

ಅಯ್ಯರ್ 4ನೇ ಕ್ರಮಾಂಕದಲ್ಲಿ ಆಡಲಿ, ಭಾರತದ ಬೌಲಿಂಗ್ ಸುಧಾರಿಸಲಿ: ಅನಿಲ್ ಕುಂಬ್ಳೆ

ಭಾರತ–ವೆಸ್ಟ್‌ ಇಂಡೀಸ್‌ ಮೂರು ಪಂದ್ಯಗಳ ಏಕದಿನ ಸರಣಿ

ಏಜೆನ್ಸೀಸ್
Published 13 ಡಿಸೆಂಬರ್ 2019, 9:55 IST
Last Updated 13 ಡಿಸೆಂಬರ್ 2019, 9:55 IST
   

ಚೆನ್ನೈ:ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾರತದ ಬೌಲಿಂಗ್‌ ಸುಧಾರಣೆಯಾಗಬೇಕಿದೆ ಎಂದು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಹೇಳಿದ್ದಾರೆ. ಯಾವುದೇ ಬೌಲಿಂಗ್‌ ಅನ್ನು ಧೂಳಿಪಟ ಮಾಡುವ ಸಾಮರ್ಥ್ಯದ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ವಿಂಡೀಸ್‌ ಪಡೆಯಲ್ಲಿದ್ದಾರೆ ಎಂದೂ ಎಚ್ಚರಿಸಿದ್ದಾರೆ.

ಕ್ರೀಡಾ ವಾಹಿನಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂಬ್ಳೆ,‘ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ತಂಡದ ಬೌಲಿಂಗ್‌ ಹೇಗಿರಲಿದೆ ಎಂದು ನೋಡಬಯಸಿದ್ದೇನೆ. ಏಕೆಂದರೆ, ಇದು ಸವಾಲಿನದ್ದು. ವಿಂಡೀಸ್‌ ಬಳಗದಲ್ಲಿರುವ ಎಲ್ಲರೂ ದೊಡ್ಡ ಹೊಡೆತಗಾರರು. ಹಾಗಾಗಿ ಇದು ಒಳ್ಳೆಯದೂ ಹೌದು. ನಮ್ಮ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್‌ ಮಾಡಲು ಮುಂದಾಗಲಿ’ ಎಂದು ಹೇಳಿದ್ದಾರೆ.

ಬಹುದಿನಗಳಿಂದ ಚರ್ಚೆಯಲ್ಲಿರುವ ತಂಡದ 4ನೇ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆಯೂ ಪ್ರತಿಕ್ರಿಯಿಸಿರುವ ಕುಂಬ್ಳೆ, ಶ್ರೇಯಸ್‌ ಅಯ್ಯರ್‌ ಆ ಕ್ರಮಾಂಕದಲ್ಲಿ ಆಡುವುದು ಸೂಕ್ತ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಂಬಂಧ ಈಗಾಗಲೇ ಹಲವು ಪ್ರಯೋಗಗಳನ್ನು ಮಾಡಲಾಗಿದೆ. ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಕೆ.ಎಲ್‌. ರಾಹುಲ್‌ ಹೀಗೆ ಹಲವರನ್ನು ಆಡಿಸಲಾಗಿದೆಯಾದರೂ ಯಶಸ್ಸು ಸಾಧ್ಯವಾಗಿಲ್ಲ. ಇತ್ತೀಚಿನ ಪ್ರದರ್ಶನ ಗಮನಿಸಿದರೆಅಯ್ಯರ್‌ ಅವರನ್ನು ಆ ಕ್ರಮಾಂಕದಲ್ಲಿ ಆಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸರಣಿಯಲ್ಲಿ ಶಿಖರ್‌ ಧವನ್‌ ಆಡದಿದ್ದರೆ, ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಲಿ. ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್ ಗುಟಮಟ್ಟವನ್ನು ನೋಡಿದ್ದೇವೆ. ಅವರು ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಆದ್ದರಿಂದ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವುದನ್ನು ಬಯಸುತ್ತೇನೆ’ ಎಂದಿದ್ದಾರೆ.

ವಿಂಡೀಸ್‌ ವಿರುದ್ಧದ ಏಕದಿನ ಸರಣಿಯ ಡಿ.15ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ 18 ಮತ್ತು 22ರಂದು ವಿಶಾಖಪಟ್ಟಣ ಮತ್ತು ಕಟಕ್‌ ನಗರಗಳಲ್ಲಿ ಆಯೋಜನೆಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.