ADVERTISEMENT

IPL 2025 | ಬೂಮ್ರಾ ಯಾರ್ಕರ್‌ಗೆ ಮುಗ್ಗರಿಸಿ ಬಿದ್ದ ಸುಂದರ್; ವಿಡಿಯೊ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮೇ 2025, 9:26 IST
Last Updated 31 ಮೇ 2025, 9:26 IST
<div class="paragraphs"><p>ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ ವೇಳೆ ಮುಗ್ಗರಿಸಿ ಬಿದ್ದ ವಾಷಿಂಗ್ಟನ್‌ ಸುಂದರ್‌</p></div>

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ ವೇಳೆ ಮುಗ್ಗರಿಸಿ ಬಿದ್ದ ವಾಷಿಂಗ್ಟನ್‌ ಸುಂದರ್‌

   

ರಾಯಿಟರ್ಸ್‌ ಚಿತ್ರಗಳು

ಮುಲ್ಲನಪುರ, ಚಂಡೀಗಢ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್‌, ಎರಡನೇ ಕ್ವಾಲಿಫೈರ್‌ಗೆ ಲಗ್ಗೆ ಇಟ್ಟಿದೆ. ಗುಜರಾತ್‌ ಟೈಟನ್ಸ್‌ ತಂಡ ಈ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ADVERTISEMENT

ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್‌ ಗಳಿಸಿತ್ತು. ಮಾಜಿ ನಾಯಕ ರೋಹಿತ್‌ ಶರ್ಮಾ, ಅಮೋಘ ಅರ್ಧಶತಕ (81 ರನ್‌) ಸಿಡಿಸುವ ಮೂಲಕ ಐದು ಬಾರಿಯ ಚಾಂಪಿಯನ್‌ ತಂಡಕ್ಕೆ ನೆರವಾದರು.

ಈ ಗುರಿ ಬೆನ್ನತ್ತಿದ ಗುಜರಾತ್‌, 20 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು. 'ಆರೆಂಜ್‌ ಕ್ಯಾಪ್‌' ರೇಸ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಾಯಿ ಸುದರ್ಶನ್‌ ದಿಟ್ಟ ಹೋರಾಟ ನಡೆಸಿ 80 ರನ್‌ ಗಳಿಸಿದರೂ, ನಿರ್ಣಾಯಕ ಹಂತದಲ್ಲಿ ವಿಕೆಟ್‌ ಒಪ್ಪಿಸಿದ್ದರಿಂದ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಮುಗ್ಗರಿಸಿದ ಸುಂದರ್‌; ಹಳಿ ತಪ್ಪಿದ ಟೈಟನ್ಸ್‌
ಬೃಹತ್‌ ಗುರಿ ಮುಂದಿಟ್ಟುಕೊಂಡು ಮೊದಲ ಓವರ್‌ನಲ್ಲೇ ನಾಯಕ ಶುಭಮನ್ ಗಿಲ್‌ (1 ರನ್‌) ವಿಕೆಟ್‌ ಕಳೆದುಕೊಂಡರೂ, ಸುದರ್ಶನ್‌ ಮತ್ತು ಕುಶಾಲ್‌ ಮೆಂಡಿಸ್‌ (20 ರನ್‌) ಅರ್ಧಶತಕದ ಜೊತೆಯಾಟದ ಮೂಲಕ ಟೈಟನ್ಸ್‌ ಪಡೆಗೆ ಚೇತರಿಕೆ ನೀಡಿದ್ದರು. ಮೆಂಡಿಸ್‌ ಔಟಾದ ನಂತರ ಬಂದ ವಾಷಿಂಗ್ಟನ್‌ ಸುಂದರ್‌ ಕೂಡ ಅಬ್ಬರದ ಬ್ಯಾಟಿಂಗ್‌ ಮೂಲಕ 'ಎಂಐ' ಪಾಳಯದಲ್ಲಿ ಭೀತಿ ಮೂಡಿಸಿದ್ದರು.

ಟೈಟನ್ಸ್‌ ಪಡೆ 13 ಓವರ್‌ಗಳ ಅಂತ್ಯಕ್ಕೆ ಕೇವಲ 2 ವಿಕೆಟ್‌ಗೆ 148 ರನ್‌ ಗಳಿಸಿತ್ತು. 80 ರನ್‌ ಜೊತೆಯಾಟವಾಡಿದ್ದ ಸುದರ್ಶನ್‌ ಹಾಗೂ ಸುಂದರ್‌ ಕ್ರೀಸ್‌ನಲ್ಲಿದ್ದರು. ಉಳಿದ ಏಳು ಓವರ್‌ಗಳಲ್ಲಿ 81 ರನ್‌ ಬೇಕಿತ್ತು. ಆದರೆ, 14ನೇ ಓವರ್‌ನಲ್ಲಿ ದಾಳಿಗೆ ಇಳಿದ ವೇಗಿ ಜಸ್‌ಪ್ರೀತ್‌ ಬೂಮ್ರಾ, ಕೇವಲ 4 ರನ್‌ ನೀಡಿ ಜೊತೆಯಾಟ ಬೇರ್ಪಡಿಸಿ ಆಘಾತ ನೀಡಿದರು.

ಈ ಓವರ್‌ನ 4ನೇ ಎಸೆತದಲ್ಲಿ ಬೂಮ್ರಾ ಹಾಕಿದ ಯಾರ್ಕರ್‌ಗೆ ಸುಂದರ್‌ ತಬ್ಬಿಬ್ಬಾದರು. ಚೆಂಡಿಗೆ ಬ್ಯಾಟ್‌ ತಾಗಿಸುವ ಭರದಲ್ಲಿ ಮುಗ್ಗರಿಸಿ ಬಿದ್ದರು. ಅಷ್ಟರಲ್ಲಿ, ಚೆಂಡು ಬೆಲ್ಸ್‌ ಎಗರಿಸಿತು. ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ವಿಕೆಟ್‌ ಪಂದ್ಯಕ್ಕೆ ತಿರುವು ನೀಡಿತು.

ಸುಂದರ್‌ ಔಟಾದ ನಂತರ ಸುದರ್ಶನ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ರಿಚರ್ಡ್‌ ಗ್ಲೀಸನ್‌ ಎಸೆತದ ಇನಿಂಗ್ಸ್‌ನ 16ನೇ ಓವರ್‌ನ 4ನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ನಂತರದ, 20 ಎಸೆತಗಳಲ್ಲಿ 59 ರನ್‌ ಬೇಕಿತ್ತು. ಆದರೆ, ಉಳಿದವರು ಗಳಿಸಿದ್ದು 38 ರನ್‌ ಮಾತ್ರ.

ಮುಂಬೈಗೆ ಪಂಜಾಬ್‌ ಸವಾಲು
ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋಲು ಕಂಡಿರುವ ಪಂಜಾಬ್‌ ಕಿಂಗ್ಸ್‌, ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಸವಾಲೊಡ್ಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ (ಜೂನ್‌ 1) ನಡೆಯುವ ಪಂದ್ಯದಲ್ಲಿ ಗೆದ್ದವರು ಫೈನಲ್‌ ಟಿಕೆಟ್‌ ಗಿಟ್ಟಿಸಲಿದ್ದಾರೆ.

ಅಂತಿಮ ಹಣಾಹಣಿಯೂ ಅಹಮದಾಬಾದ್‌ನಲ್ಲೇ ಜೂನ್‌ 3ರಂದು ನಡೆಯಲಿದೆ. ಆರ್‌ಸಿಬಿ ಈಗಾಗಲೇ ಫೈನಲ್‌ ಪ್ರವೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.