ADVERTISEMENT

Champions Trophy: ವರುಣ್ ಸ್ಪಿನ್ ಮೋಡಿ; ಕಿವೀಸ್ ವಿರುದ್ಧ ಗೆದ್ದ ಭಾರತ ಅಜೇಯ

ಕಿವೀಸ್ ವಿರುದ್ಧ ಭಾರತಕ್ಕೆ 44 ರನ್ ಜಯ; ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2025, 16:28 IST
Last Updated 2 ಮಾರ್ಚ್ 2025, 16:28 IST
   

ದುಬೈ: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಪಿನ್ ಮೋಡಿ (42ಕ್ಕೆ 5 ವಿಕೆಟ್) ನೆರವಿನಿಂದ ಭಾರತ ತಂಡವು, ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ 'ಎ' ಗುಂಪಿನ ಕೊನೆಯ ಪಂದ್ಯದಲ್ಲಿ 44 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಆ ಮೂಲಕ 'ಎ' ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಅಲ್ಲದೆ ಮಾರ್ಚ್ 4ರಂದು ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.

ಭಾರತ ಒಡ್ಡಿದ 250 ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 45.3 ಓವರ್‌ಗಳಲ್ಲಿ 205 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ದಿಟ್ಟ ಹೋರಾಟ ನೀಡಿದ ಕೇನ್ ವಿಲಿಯಮ್ಸನ್ ಗರಿಷ್ಠ 81 ರನ್ ಗಳಿಸಿದರು.

ADVERTISEMENT

ಮತ್ತೊಂದೆಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಕ್ಷಣದಲ್ಲಿ ಗಾಯಾಳು ಜಸ್‌ಪ್ರೀತ್ ಬೂಮ್ರಾ ಸ್ಥಾನಕ್ಕೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ, ಟೂರ್ನಿಯಲ್ಲಿ ತಾವು ಆಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್‌ಗಳ ಸಾಧನೆ ಮಾಡಿದರು.

ವರುಣ್ 42 ರನ್ ತೆತ್ತು ಐದು ವಿಕೆಟ್‌ ಗಳಿಸಿದರು. ವರುಣ್‌ಗೆ ತಕ್ಕ ಸಾಥ್ ನೀಡಿದ ಕುಲದೀಪ್ ಯಾದವ್ ಎರಡು ಮತ್ತು ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ತಲಾ ಒಂದು ವಿಕೆಟ್‌ಗಳನ್ನು ಗಳಿಸಿದರು.

ಶ್ರೇಯಸ್ ಅರ್ಧಶತಕ, ಹೆನ್ರಿಗೆ 5 ವಿಕೆಟ್: ಕಿವೀಸ್‌ಗೆ 250 ರನ್ ಗುರಿ ಒಡ್ಡಿದ ಭಾರತ...

ಈ ಮೊದಲು ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕದ (79) ನೆರವಿನಿಂದ ಭಾರತ ತಂಡವು 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 249 ರನ್‌ ಪೇರಿಸಿತು.

ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 22 ತಲುಪುವರಷ್ಟರಲ್ಲಿ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (15) ಹಾಗೂ ಶುಭಮನ್ ಗಿಲ್ (2) ವಿಕೆಟ್ ನಷ್ಟವಾಯಿತು.

ತಮ್ಮ 300ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟ್ ಆದರು. ಮ್ಯಾಟ್ ಹೆನ್ರಿ ದಾಳಿಯಲ್ಲಿ ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಪಡೆದರು.

ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ತಂಡವನ್ನು ನಿಧಾನಗತಿಯಲ್ಲಿ ಮುನ್ನಡೆಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅಕ್ಷರ್ ಪಟೇಲ್ 61 ಎಸೆತಗಳಲ್ಲಿ 42 (3 ಬೌಂಡರಿ, 1 ಸಿಕ್ಸರ್) ರನ್ ಗಳಿಸಿದರು.

ಮತ್ತೊಂದೆಡೆ ಕಲಾತ್ಮಕ ಇನಿಂಗ್ಸ್ ಕಟ್ಟಿದ ಶ್ರೇಯಸ್ ಅರ್ಧಶತಕ (79) ಗಳಿಸಿದರು. 98 ಎಸೆತಗಳನ್ನು ಎದುರಿಸಿದ ಶ್ರೇಯಸ್ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ (45), ಕೆ.ಎಲ್. ರಾಹುಲ್ (23) ಹಾಗೂ ರವೀಂದ್ರ ಜಡೇಜ (16) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ (5) ಹಾಗೂ ಕುಲದೀಪ್ ಯಾದವ್ (1*) ರನ್ ಗಳಿಸಿದರು.

ಕಿವೀಸ್ ಪರ ಮ್ಯಾಟ್ ಹೆನ್ರಿ 42 ರನ್ ತೆತ್ತು ಐದು ವಿಕೆಟ್ ಗಳಿಸಿ ಮಿಂಚಿದರು. ಸಾಂಘಿಕ ದಾಳಿ ಸಂಘಟಿಸಿದ ಕಿವೀಸ್, ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟನರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗದ ಬೌಲರ್ ಹರ್ಷೀತ್ ರಾಣಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಇದರೊಂದಿಗೆ ಭಾರತ ತಂಡವು ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಇಲ್ಲಿ ಗೆದ್ದ ತಂಡವು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಹಾಗಾಗಿ ಸೆಮಿಫೈನಲ್‌ನಲ್ಲಿ ಯಾವ ತಂಡದ ವಿರುದ್ಧ ಆಡಲಿದೆ ಎಂಬುದು ಈ ಪಂದ್ಯದ ಫಲಿತಾಂಶದೊಂದಿಗೆ ನಿರ್ಧಾರವಾಗಲಿದೆ.

'ಎ' ಗುಂಪಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ಮತ್ತು 'ಬಿ' ಗುಂಪಿನಿಂದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿವೆ.

ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದರೆ ಮಾರ್ಚ್ 4ರಂದು ದುಬೈನಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಸೋತರೆ, ಅದೇ ದಿನ ದುಬೈನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಹೋರಾಡಲಿದೆ.

ಭಾರತ ತಂಡ ಇಂತಿದೆ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.

ನ್ಯೂಜಿಲೆಂಡ್ ತಂಡ ಇಂತಿದೆ:

ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ನಾಂಟನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಮ್ ಓರೂಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.