ADVERTISEMENT

ನಾಲ್ಕು ದಿನಗಳ ಟೆಸ್ಟ್‌ಗೆ ಐಸಿಸಿ ಅಸ್ತು; ಆದರೆ 5 ದಿನ ಆಡಲಿರುವ ಭಾರತ: ವರದಿ

ಪಿಟಿಐ
Published 17 ಜೂನ್ 2025, 11:22 IST
Last Updated 17 ಜೂನ್ 2025, 11:22 IST
<div class="paragraphs"><p>ಟೆಸ್ಟ್ ಕ್ರಿಕೆಟ್</p></div>

ಟೆಸ್ಟ್ ಕ್ರಿಕೆಟ್

   

(ರಾಯಿಟರ್ಸ್ ಚಿತ್ರ)

ಲಂಡನ್‌: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) 2027-29ರ ಆವೃತ್ತಿಯಲ್ಲಿ ಕೆಳ ಕ್ರಮಾಂಕದ ತಂಡಗಳ ಮಧ್ಯೆ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸನ್ನದ್ಧವಾಗಿದೆ. ಆದರೆ, ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಸಾಂಪ್ರದಾಯಿಕ ಐದು ದಿನಗಳ ಪಂದ್ಯಗಳು ಯಥಾಸ್ಥಿತಿಯಾಗಿ ಇರಲಿವೆ ಎಂದು ವರದಿಯೊಂದು ತಿಳಿಸಿದೆ.

ADVERTISEMENT

ಪಂದ್ಯವನ್ನು ಒಂದು ದಿನ ಕಡಿಮೆ ಮಾಡುವ ಕ್ರಮವು ಕ್ರಿಕೆಟ್ ಲೋಕದಲ್ಲಿ ಗಮನಾರ್ಹ ಬದಲಾವಣೆ ಎಂದೇ ವಿಶ್ಲೇಷಿಸಲಾಗುತ್ತಿದ್ದು, ರ‍್ಯಾಂಕಿಂಗ್‌ನಲ್ಲಿ ಕೆಳಗಿನ ಸ್ಥಾನದಲ್ಲಿರುವ ರಾಷ್ಟ್ರಗಳಿಗೂ ಹೆಚ್ಚು ಟೆಸ್ಟ್ ಮತ್ತು ದೀರ್ಘ ಸರಣಿಯನ್ನು ಆಡಲು ಇದರಿಂದ ನೆರವಾಗಲಿದೆ.

‘ಕಳೆದ ವಾರ ಲಾರ್ಡ್ಸ್‌ನಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್ ವೇಳೆ ನಡೆದ ಚರ್ಚೆಯ ಸಂದರ್ಭದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಅವರು 2027-29ರ ಆವೃತ್ತಿಯಲ್ಲಿ ಜಾರಿಯಾಗುವಂತೆ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ದಿ ಗಾರ್ಡಿಯನ್' ಪತ್ರಿಕೆ ವರದಿ ಮಾಡಿದೆ. 

ಈ ಮಧ್ಯೆ ಐದು ಪಂದ್ಯಗಳ ಸರಣಿಯ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಣ ‘ಆ್ಯಷಸ್’, ಭಾರತ- ಆಸ್ಟ್ರೇಲಿಯಾ ನಡುವಣ ‘ಬಾರ್ಡರ್-ಗಾವಸ್ಕರ್’ ಮತ್ತು ಭಾರತ-ಇಂಗ್ಲೆಂಡ್‌ ನಡುವಣ ಹೊಸದಾಗಿ ಹೆಸರಿಸಿರುವ ‘ಆ್ಯಂಡರ್ಸನ್-ತೆಂಡೂಲ್ಕರ್’ ಟ್ರೋಫಿಯಲ್ಲಿ ಐದು ದಿನಗಳ ಆಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

2017ರಲ್ಲಿ ಐಸಿಸಿ ಮೊದಲ ಬಾರಿ ನಾಲ್ಕು ದಿನಗಳ ಟೆಸ್ಟ್‌ಗೆ ಅನುಮತಿ ನೀಡಿತ್ತು. ಇಂಗ್ಲೆಂಡ್ ತಂಡವು 2019 ಹಾಗೂ 2023ರಲ್ಲಿ ಐರ್ಲೆಂಡ್ ವಿರುದ್ಧದ ಬಳಿಕ ಕಳೆದ ತಿಂಗಳಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಾಲ್ಕು ದಿನಗಳ ಪಂದ್ಯ ಆಡಿತ್ತು.

‘ಕೆಲ ರಾಷ್ಟ್ರಗಳು ಟೆಸ್ಟ್ ಕ್ರಿಕೆಟ್‌ಗೆ ಆತಿಥ್ಯ ವಹಿಸಲು ಉತ್ಸುಕವಾಗಿವೆ. ಆದರೆ, ಸಮಯ, ವೇಳಾಪಟ್ಟಿ ಹಾಗೂ ವೆಚ್ಚದ ದೃಷ್ಟಿಯಿಂದ ಆಯೋಜಿಸಲು ಹಿಂಜರಿಯುತ್ತಿವೆ. ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್‌ನಲ್ಲಿ ದಿನದಾಟದಲ್ಲಿ 90 ಓವರ್‌ಗಳ ಬದಲಿಗೆ ಕನಿಷ್ಠ 98 ಓವರ್‌ಗಳಿಗೆ ವರ್ಧಿಸಲಾಗುವುದು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಹಾಲಿ ಆವೃತ್ತಿ ಆರಂಭ:

2025-27ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವಂತೆಯೇ ಐದು ದಿನಗಳ ಆಟ ಮುಂದುವರಿಯಲಿವೆ. ಶ್ರೀಲಂಕಾವು ಮಂಗಳವಾರ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವುದರೊಂದಿಗೆ ಹಾಲಿ ಆವೃತ್ತಿಗೆ ಚಾಲನೆ ದೊರಕಿದೆ.

2025-27ರ ಆವೃತ್ತಿಯಲ್ಲಿ ಒಂಬತ್ತು ದೇಶಗಳು 27 ಟೆಸ್ಟ್ ಸರಣಿಗಳಲ್ಲಿ ಒಟ್ಟು 131 ಪಂದ್ಯಗಳನ್ನು ಆಡಲಿವೆ. ಆಸ್ಟ್ರೇಲಿಯಾ ಗರಿಷ್ಠ 22 ಪಂದ್ಯ, ಭಾರತ 18 ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.