ADVERTISEMENT

ಮೈದಾನದಲ್ಲೇ ಉರುಳಾಡಿ, ಉದ್ಧಟತನ ತೋರಿದ ಚಾಂಪಿಯನ್ನರು: ‘ಐಸಿಸಿಯಿಂದ ಗಂಭೀರ ಕ್ರಮ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:09 IST
Last Updated 10 ಫೆಬ್ರುವರಿ 2020, 12:09 IST
   

ಪೊಷೆಸ್ಟ್ರೂಮ್:ಬಾಂಗ್ಲಾದೇಶ ತಂಡದ ಆಟಗಾರರು 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಎದುರು ಗೆಲುವು ಸಾಧಿಸಿದ ಬಳಿಕ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಅನಿಲ್‌ ಪಟೇಲ್‌ ಹೇಳಿದ್ದಾರೆ.

‘ಆ ಕ್ಷಣ ಏನಾಯಿತು ಎಂಬುದು ನಿಜವಾಗಿಯೂ ಗೊತ್ತಾಗಲಿಲ್ಲ’ ಎಂದಿರುವ ಪಟೇಲ್‌, ‘ಖಂಡಿತಾ ಪ್ರತಿಯೊಬ್ಬರಿಗೂ ಗಾಬರಿಯಾಯಿತು. ಆದರೆ, ಏನಾಯಿತು ಎಂದು ಖಚಿತವಾಗಿ ನಮಗೆ ಗೊತ್ತಾಗಲಿಲ್ಲ. ಐಸಿಸಿಯ ಅಧಿಕಾರಿಗಳು ಪಂದ್ಯದ ಕೊನೆಯ ಕೆಲ ಹೊತ್ತಿನ ವಿಡಿಯೊಗಳನ್ನು ಪರಿಶೀಲಿಸಿದ ಬಳಿಕ ನಮಗೂ ವಾಸ್ತವವನ್ನು ತಿಳಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಬಾಂಗ್ಲಾ ತಂಡದ ಕೆಲವು ಆಟಗಾರರುಸಂಭ್ರಮಾಚರಣೆ ಭರದಲ್ಲಿ ಉದ್ಧಟತನದಿಂದ ವರ್ತಿಸಿದ್ದರು. ಆ ತಂಡದ ನಾಯಕ ಅಕ್ಬರ್‌ ಅಲಿ, ‘ಇದೊಂದು ದುರದೃಷ್ಟಕರ ಘಟನೆ’ ಎನ್ನುವ ಮೂಲಕಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಾಂಗ್ಲಾ ವರ್ತನೆಯನ್ನು ಖಂಡಿಸಿದ್ದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್‌, ‘ಇದು ಅಸಹ್ಯಕರ’ ಎಂದು ಕಿಡಿ ಕಾರಿದ್ದರು.

ADVERTISEMENT

ಆರಂಭದಿಂದಲೂ ಕಿರಿಕ್
ಟಾಸ್‌ ಗೆದ್ದರೂ ಭಾರತವನ್ನು ಮೊದಲು ಬ್ಯಾಟಿಂಗ್‌ಗೆಆಹ್ವಾನಿಸಿದ ಬಾಂಗ್ಲಾ ತಂಡ ಆರಂಭದಿಂದಲೂ ಆಕ್ರಮಣಕಾರಿಯಾಗಿಯೇ ಕಾಣಿಸಿಕೊಂಡಿತು. ಆ ತಂಡದ ಫೀಲ್ಡರ್‌ಗಳು ಮತ್ತು ಬೌಲರ್‌ಗಳುಸ್ಲೆಡ್ಜಿಂಗ್‌ ತಂತ್ರ ಅನುಸರಿಸಿದರು.ಅದರಲ್ಲೂ ವೇಗದ ಬೌಲರ್‌ ಶೋರಿಫುಲ್‌ ಇಸ್ಲಾಂ ಪ್ರತಿ ಎಸೆತದ ಬಳಿಕವೂ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಮಾತಿನ ಮೂಲಕ (ಸ್ಲೆಡ್ಜಿಂಗ್‌) ಕೆಣಕುತ್ತಿದ್ದರು.

ಹೀಗಾಗಿ ಕೆಲ ಕ್ರಿಕೆಟ್‌ ವಿಶ್ಲೇಷಕರು, ‘ಎದುರಾಳಿಗಳ ಮಾತಿನತ್ತ ಗಮನ ಹರಿಸಿದ್ದರಿಂದಾಗಿಯೇ ಭಾರತ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಿಲ್ಲ’ ಎಂದು ವಿಶ್ಲೇಷಿಸಿದ್ದರು.

ಪಂದ್ಯದಲ್ಲಿಭಾರತ ಅಲ್ಪಮೊತ್ತಕ್ಕೆ ಕುಸಿದಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ 88 ರನ್‌ ಗಳಿಸಿ ನೆರವಾಗಿದ್ದರು. ಅವರ ಆಟದ ಹೊರತಾಗಿಯೂ ಗರ್ಗ್‌ ಪಡೆಕೇವಲ 177 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡ 42.1 ಓವರ್‌ಗಳಲ್ಲಿ 170 ರನ್ ಗಳಿಸಿದ್ದಾಗ ಮಳೆ ಸುರಿಯಿತು.

ಹೀಗಾಗಿ ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ ಬಾಂಗ್ಲಾಗೆ 3 ವಿಕೆಟ್‌ ಜಯ ಘೋಷಿಸಲಾಯಿತು.

ಬಾಂಗ್ಲಾ ಆಟಗಾರರ ಉದ್ಧಟತನ
ಜಯ ನಿರ್ಧಾರವಾಗುತ್ತಿದ್ದಂತೆ ಮೈದಾನದತ್ತ ಓಡಿದ ಬಾಂಗ್ಲಾ ಆಟಗಾರರು, ವಿಜಯೋತ್ಸವದಲ್ಲಿ ತೊಡಗಿದರು. ಸಂಭ್ರಮಿಸುವ ಭರದಲ್ಲಿ ಕೆಲವರು ಭಾರತದ ಆಟಗಾರರತ್ತಆಕ್ರಮಣಕಾರಿಯಾಗಿ ಸನ್ನೆ‌ಗಳನ್ನು ಮಾಡಿ ಉದ್ಧಟತನ ತೋರಿದ್ದಾರೆ.ಕೆಲವರಂತೂ ಮೈದಾನದಲ್ಲಿಯೇ ಉರುಳಾಡಿರುವುದು, ಏಕಾಏಕಿ ಭಾರತದ ಆಟಗಾರರ ಬಳಿ ಬಂದು ಏರುದನಿಯಲ್ಲಿ ಮಾತನಾಡುತ್ತಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಇದರಿಂದ ಕೆರಳಿದ ಭಾರತದ ಆಟಗಾರರು ಮಾತಿನ ಚಕಮಕಿಗೆ ಇಳಿದರು.ಈ ವೇಳೆ ಉಭಯ ತಂಡದವರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.

ಭಾರತದ ನಾಯಕ ಪ್ರಿಯಂ, ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶಿಸಿದರಾದರೂ ಸಾಧ್ಯವಾಗಲಿಲ್ಲ. ಬಳಿಕ ತಂಡದ ತರಬೇತದಾರರು, ಸಹಾಯಕ ಸಿಬ್ಬಂದಿ ಹಾಗೂ ಕ್ರೀಡಾಂಗಣದ ಸಿಬ್ಬಂದಿ ಬಂದು ಉಭಯ ಆಟಗಾರರನ್ನು ದೂರ ಸರಿಸಿದರು.

ಕ್ಷಮೆ ಕೋರಿದ ರೆಫ್ರಿ
ಪಂದ್ಯ ಮುಗಿದ ಬಳಿಕ ತಮ್ಮ ಬಳಿ ಬಂದ ರೆಫ್ರಿ ಗ್ರೇಮ್‌ ಲಾಬ್ರೋಯ್‌, ಮೈದಾನದಲ್ಲಾದಪ್ರಹಸನದ ಬಗ್ಗೆ ಕ್ಷಮೆ ಕೋರಿದರು ಎಂದು ಪಟೇಲ್‌ ಹೇಳಿಕೊಂಡಿದ್ದಾರೆ.

‘ಪಂದ್ಯದ ಬಳಿಕ ರೆಫ್ರಿ ಅವರು ನನ್ನನ್ನು ಭೇಟಿ ಮಾಡಿದರು.ಘಟನೆ ಬಗ್ಗೆ ನನ್ನ ಬಳಿ ಕ್ಷಮೆ ಕೋರಿದರು. ಈ ಪಂದ್ಯದ ವೇಳೆ ಮತ್ತು ಕೊನೆಯ ಕೆಲ ಕ್ಷಣ ಏನಾಯಿತು ಎಂಬುದನ್ನು ಐಸಿಸಿ ತುಂಬಾ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು. ವಿಡಿಯೊಗಳ ಜೊತೆಗೆ ಅವರೂಘಟನೆಗೆ ಸಾಕ್ಷಿಯಾಗಲಿದ್ದಾರೆ. ನಂತರ ನಮಗೆ ಏನಾಯಿತು ಎಂಬುದನ್ನು ತಿಳಿಸಲಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.