
ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್
ನವಿ ಮುಂಬೈ: ಫೇವರಿಟ್ ಆಸ್ಟ್ರೇಲಿಯಾ ಒಡ್ಡಿದ 339 ರನ್‌ಗಳ ದೊಡ್ಡ ಮೊತ್ತವನ್ನು ಸೇರಿಗೆ ಸವ್ವಾಸೇರು ಎನ್ನುವಂತೆ ಬೆನ್ನಟ್ಟಿದ ಭಾರತ ತಂಡದವರು ಐದು ವಿಕೆಟ್‌ಗಳಿಂದ ಗೆದ್ದು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿದರು. ಆಕರ್ಷಕ ಆಟವಾಡಿದ ಜೆಮಿಮಾ ರಾಡ್ರಿಗಸ್ ಅಜೇಯ ಶತಕ (127*, 134ಎಸೆತ, 14x4) ಬಾರಿಸಿ ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 49.5 ಓವರುಗಳಲ್ಲಿ 338 ರನ್‌ಗಳ ದೊಡ್ಡ ಮೊತ್ತ ಪೇರಿಸಿತ್ತು. ಆದರೆ ಮೂರನೇ ಕ್ರಮಾಂಕದ ಆಟಗಾರ್ತಿ ಜೆಮಿಮಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (89, 88ಎಸೆತ, 4x10, 6x2) ಅವರು ಮೂರನೇ ವಿಕೆಟ್‌ಗೆ ಸೇರಿಸಿದ 167 ರನ್‌ಗಳ ಜೊತೆಯಾಟದಿಂದ ಭಾರತ ಇನ್ನೂ 9 ಎಸೆತಗಳಿರುವಂತೆ ಜಯಗಳಿಸಿ ಸಂಭ್ರಮಿಸಿತು.
ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಚೇಸ್. ಇದರೊಂದಿಗೆ ಭಾರತ ಮೂರನೇ ಬಾರಿ ಫೈನಲ್ ತಲುಪಿತು. ಈ ಹಿಂದೆ 2005 ಮತ್ತು 2017ರಲ್ಲಿ ಪ್ರಶಸ್ತಿ ಸುತ್ತು ತಲುಪಿತ್ತು. ಆತಿಥೇಯ ಭಾರತ ತಂಡವು, ಭಾನುವಾರ ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದರೊಂದಿಗೆ ಹೊಸ ಚಾಂಪಿಯನ್ ತಂಡ ಉದಯಿಸುವುದು ಖಚಿತವಾಯಿತು.
ಮಹತ್ವದ ಘಟ್ಟದಲ್ಲಿ ಎದುರಾದ ಸೋಲಿನೊಂದಿಗೆ, ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆಬಿತ್ತು.
ಆರಂಭ ಆಟಗಾರ್ತಿಯರಾದ ಶಫಾಲಿ ವರ್ಮಾ (10) ಮತ್ತು ಸ್ಮೃತಿ ಮಂದಾನ (24) ಅವರು 59 ರನ್‌ಗಳಾ ಗುವುದರೊಳಗೆ ನಿರ್ಗಮಿಸಿದ್ದರು. ಈ ವೇಳೆ ಜೆಮಿಮಾ ಜೊತೆಗೂಡಿದ ನಾಯಕಿ ಹರ್ಮನ್‌ಪ್ರೀತ್ ಅವರು ಪಂದ್ಯ ಭಾರತದ ಕೈತಪ್ಪದಂತೆ ನೋಡಿಕೊಂಡರು.
ಒಂದೆಡೆ ಜೆಮಿಮಾ ಇನಿಂಗ್ಸ್‌ಗೆ ಲಂಗರುಹಾಕಿದರೆ, ದೀಪ್ತಿ ಶರ್ಮಾ (26, 17ಎ), ರಿಚಾ ಘೋಷ್ (24, 16ಎ), ಅಮನ್ಜೋತ್ ಕೌರ್ (ಅಜೇಯ 15, 8ಎ) ಅವರು ಹಿರಿಯ ಆಟಗಾರ್ತಿಯರ ಶ್ರಮ ವ್ಯರ್ಥವಾಗದಂತೆ
ನೋಡಿಕೊಂಡರು. ಮಂದಾನ 24 ರನ್ ಗಳಿಸುವ ಹಾದಿಯಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿದರು.
ಲಿಚ್‌ಫೀಲ್ಡ್ ಶತಕ: ಇದಕ್ಕೆ ಮೊದಲು ಆರಂಭ ಆಟಗಾರ್ತಿ ಫೋಬಿ ಲಿಚ್‌ಫೀಲ್ಡ್ ಅವರ ಶತಕದ ಜೊತೆಗೆ ಅನುಭವಿಗಳಾದ ಎಲಿಸ್ ಪೆರಿ (77, 88ಎ, 4x6, 6x2) ಮತ್ತು ಆಲ್‌ರೌಂಡರ್ ಆಶ್ಲೆ ಗಾರ್ಡನರ್ (63) ಅವರ ಅರ್ಧ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡ ಸವಾಲಿನ ಮೊತ್ತ ಗಳಿಸಿತ್ತು. 22 ವರ್ಷ ವಯಸ್ಸಿನ ಲಿಚ್‌ಫೀಲ್ಡ್ ಅವರಿಗೆ ಏಕದಿನ ಪಂದ್ಯಗಳಲ್ಲಿ ಮೂರನೇ ಶತಕ. ಅವರು ಎರಡನೇ ವಿಕೆಟ್‌ಗೆ ಎಲಿಸ್ ಪೆರಿ ಜೊತೆಗೆ 155 ರನ್ ಸೇರಿಸಿ ದೊಡ್ಡ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರು.
ಕೊನೆಯ ಹಂತದಲ್ಲಿ ಎಡಗೈ ಸ್ಪಿನ್ನರ್ ಶ್ರೀಚರಣಿ ಅವರ ಬಿಗುವಾದ ಮೂರನೇ ಸ್ಪೆಲ್ (3–0–9–2) ನಿಂದಾಗಿ ಆಸ್ಟ್ರೇಲಿಯಾ ಅಬ್ಬರದ ಆಟಕ್ಕೆ ಕೊಂಚ ಕಡಿವಾಣ ಬಿತ್ತು. ಉತ್ತಮ ಲಯದಲ್ಲಿರುವ ಬೆತ್ ಮೂನಿ (24) ಮತ್ತು ಅನ್ನಾಬೆಲ್ ಸದರ್‌ಲ್ಯಾಂಡ್ (3) ಅವರ ವಿಕೆಟ್‌ಗಳನ್ನು ಚರಣಿ ಕಬಳಿಸಿದರು. ಇದರಿಂದಾಗಿ ಒಂದು ಹಂತದಲ್ಲಿ 2 ವಿಕೆಟ್‌ಗೆ 220 ರನ್ ಗಳಿಸಿದ್ದ ಆಸ್ಟ್ರೇಲಿಯಾ 265 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ವೇಗ ಕಳೆದುಕೊಂಡಿತು. ಅನುಭವಿ ಆ್ಯಶ್ಲೆ ಗಾರ್ಡನರ್ 45 ಎಸೆತಗಳಲ್ಲಿ 63 ರನ್ ಬಾರಿಸಿದ್ದರಿಂದ ತಂಡ 300ರ ಗಡಿಯನ್ನು ದಾಟಿತು.
ಭಾರತ ತಂಡದ ಗೆಲುವಿನ ರೂವಾರಿ ಜೆಮಿಮಾ ರಾಡ್ರಿಗಸ್ ಅವರು ಸಹ ಆಟಗಾರ್ತಿಯರೊಂದಿಗೆ ಸಂಭ್ರಮಿಸುವ ವೇಳೆ ಭಾವುಕರಾದರು
ಸ್ಕೋರ್ ಕಾರ್ಡ್
ಆಸ್ಟ್ರೇಲಿಯಾ: 338 (49.5 ಓವರುಗಳಲ್ಲಿ)
ಅಲಿಸಾ ಬಿ ಕ್ರಾಂತಿ ಗೌಡ್ 5 (15ಎ)
ಲಿಚ್‌ಫೀಲ್ಡ್ ಬಿ ಅಮನ್ಜೋತ್ 119 (93ಎ, 4x17, 6x3)
ಎಲಿಸ್ ಪೆರಿ ಬಿ ರಾಧಾ 77 (88ಎ, 4x6, 6x2)
ಬೆತ್ ಮೂನಿ ಸಿ ಜೆಮಿಮಾ ಬಿ ಶ್ರೀಚರಣಿ 24 (22ಎ, 4x3)
ಅನ್ನಾಬೆಲ್ ಸಿ ಮತ್ತು ಬಿ ಶ್ರೀಚರಣಿ 3 (6ಎ)
ಆ್ಯಶ್ಲೆ ಗಾರ್ಡನರ್ ರನೌಟ್ (ಗೌಡ್/ ಘೋಷ್) 63 (45ಎ, 4x4, 6x4)
ತಹ್ಲಿಯಾ ರನೌಟ್ (ಜೆಮಿಮಾ/ ಘೋಷ್) 12 (7ಎ, 4x2)
ಕಿಮ್ ಗಾರ್ತ್ ರನೌಟ್ (ಅಮನ್ಜೋತ್/ ಘೋಷ್) 17 (17ಎ)
ಅಲನಾ ಸಿ ಘೋಷ್ ಬಿ ದೀಪ್ತಿ 4 (4ಎ, 4x1)
ಸೋಫಿ ಬಿ ಶರ್ಮಾ 0 (1ಎ)
ಮೇಘನ್ ಔಟಾಗದೇ 1 (1ಎ)
ಇತರೆ: 13 (ಲೆಗ್‌ಬೈ 2, ವೈಡ್ 11)
ವಿಕೆಟ್ ಪತನ: 1–25 (ಅಲಿಸಾ ಹೀಲಿ, 5.1), 2–180 (ಫೋಬಿ ಲಿಚ್‌ಫೀಲ್ಡ್, 27.2),3–220 (ಬೆತ್ ಮೂನಿ, 33.6), 4–228 (ಅನ್ನಾಬೆಲ್ ಸದರ್‌ಲ್ಯಾಂಡ್, 35.5), 5–243 (ಎಲಿಸ್ ಪೆರಿ, 39.2), 6–265 (ತಹ್ಲಿಯಾ ಮೆಕ್‌ಗ್ರಾ, 41.4), 7–331 (ಆ್ಯಶ್ಲೆ ಗಾರ್ಡನರ್, 48.3), 8–336 (ಅಲನಾ ಕಿಂಗ್, 49.2), 9–336 (ಸೋಫಿ ಮೊಲಿನೆಕ್ಸ್, 49.4), 10–338 (ಕಿಮ್ ಗಾರ್ತ್, 49.5).
ಬೌಲಿಂಗ್: ರೇಣುಕಾ ಸಿಂಗ್ 8–0–39–0; ಕ್ರಾಂತಿ ಗೌಡ್ 6–0–58–1; ಶ್ರೀಚರಣಿ 10–0–49–2; ದೀಪ್ತಿ ಶರ್ಮಾ 9.5–0–73–2; ಅಮನ್ಜೋತ್ ಕೌರ್ 8–0–51–1; ರಾಧಾ ಯಾದವ್ 8–0–66–1
ಭಾರತ 5 ವಿಕೆಟ್‌ಗೆ 341 (48.3 ಓವರ್‌ಗಳಲ್ಲಿ
ಶಫಾಲಿ ಎಲ್‌ಬಿಡಬ್ಲ್ಯು ಬಿ ಗಾರ್ತ್ 10 (5ಎ, 4x2)
ಮಂದಾನ ಸಿ ಹೀಲಿ ಬಿ ಗಾರ್ತ್ 24 (24ಎ, 4x2, 6x1)
ಜೆಮಿಮಾ ರಾಡ್ರಿಗಸ್ ಔಟಾಗದೇ 127 (134ಎ, 4x14)
ಕೌರ್ ಸಿ ಗಾರ್ಡನರ್ ಬಿ ಸದರ್‌ಲ್ಯಾಂಡ್ 89 (88ಎ, 4x10, 6x2)
ದೀಪ್ತಿ ರನ್‌ಔಟ್ (ಗಾರ್ತ್/ಹೀಲಿ) 24 (17ಎ, 4x3)
ರಿಚಾ ಸಿ ಗಾರ್ತ್ ಬಿ ಸದರ್‌ಲ್ಯಾಂಡ್ 26 (16ಎ, 4x2, 6x2)
ಅಮನ್ಜೋತ್ ಕೌರ್ ಔಟಾಗದೇ 15 (8ಎ, 4x2)
ಇತರೆ: 26 (ಬೈ 4, ಲೆಗ್‌ಬೈ 6, ನೋಬಾಲ್ 1, ವೈಡ್ 15)
ವಿಕೆಟ್ ಪತನ: 1-13 (ಶಫಾಲಿ ವರ್ಮಾ, 1.3), 2-59 (ಸ್ಮೃತಿ ಮಂದಾನ, 9.2), 3-226 (ಹರ್ಮನ್‌ಪ್ರೀತ್ ಕೌರ್, 35.2), 4-264 (ದೀಪ್ತಿ ಶರ್ಮಾ, 40.5), 5-310 (ರಿಚಾ ಘೋಷ್, 45.6)
ಬೌಲಿಂಗ್: ಮೇಗನ್ ಶುಟ್ 6–0–40–0, ಕಿಮ್ ಗಾರ್ತ್ 7–0–46–2, ಆ್ಯಶ್ಲೆ ಗಾರ್ಡನರ್ 8–0–55–0, ಸೋಫಿ ಮೊಲಿನೆಕ್ಸ್ 6.3–0–44–0, ಅನ್ನಾಬೆಲ್ ಸದರ್‌ಲ್ಯಾಂಡ್ 10–0–69–2, ಅಲನಾ ಕಿಂಗ್ 9–0–58–0, ತಹ್ಲಿಯಾ ಮೆಕ್‌ಗ್ರಾತ್ 2–0–19–0
ಪಂದ್ಯದ ಆಟಗಾರ: ಜೆಮಿಮಾ ರಾಡ್ರಿಗಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.