ವಿಶಾಖಪಟ್ಟಣದ ಕ್ರೀಡಾಂಗಣದಲ್ಲಿ ಪಿಚ್ ಪರಿಶೀಲಿಸುತ್ತಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್
–ಪಿಟಿಐ ಚಿತ್ರ
ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ | ಅಮನ್ಜೋತ್ ಕೌರ್ ಫಿಟ್ ಆಗುವ ನಿರೀಕ್ಷೆ |ಹೋದ ಪಂದ್ಯದಲ್ಲಿ ಶತಕ ಗಳಿಸಿದ್ದ ತಾಜ್ಮಿನ್ ಬ್ರಿಟ್ಸ್
ವಿಶಾಖಪಟ್ಟಣ: ಭಾರತ ಮಹಿಳೆಯರ ಕ್ರಿಕೆಟ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳಿಗೆ ಲಯಕ್ಕೆ ಮರಳಲು ಇದು ಸಕಾಲ. ಏಕೆಂದರೆ ಹರ್ಮನ್‌ಪ್ರೀತ್ ಕೌರ್ ಬಳಗವು ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡವನ್ನು ಗುರುವಾರ ಎದುರಿಸಬೇಕಿದೆ.
ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಭಾರತ ಸದ್ಯ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಎದುರು ಜಯ ಗಳಿಸಿದ ಭಾರತ ತಂಡಕ್ಕೆ ಈಗ ಸ್ವಲ್ಪ ಕಠಿಣ ಸವಾಲು ಎದುರಾಗಲಿದೆ.
ತಾರಾ ವರ್ಚಸ್ಸಿನ ಬ್ಯಾಟರ್ ಸ್ಮೃತಿ ಮಂದಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಅವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ದಕ್ಷಿಣ ಆಫ್ರಿಕಾ ಎದುರು ಗೆಲುವಿನ ನಿರೀಕ್ಷೆ ಮಾಡಬಹುದು. ಅಲ್ಲದೇ ಮುಂದಿನ ಹಂತದಲ್ಲಿ ‘ಹಾಲಿ ಚಾಂಪಿಯನ್’ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಬಾಂಗ್ಲಾ ತಂಡಗಳನ್ನೂ ಭಾರತ ತಂಡವು ಎದುರಿಸಲು ಆತ್ಮವಿಶ್ವಾಸ ಹೆಚ್ಚಲಿದೆ.
ಲಂಕಾ ಎದುರಿನ ಪಂದ್ಯದಲ್ಲಿ ಭಾರತ ತಂಡವು 124ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಪಾಕಿಸ್ತಾನ ತಂಡದ ಎದುರು ಕೂಡ 159 ರನ್‌ಗಳಿಗೆ ಐದು ವಿಕೆಟ್‌ಗಳು ಪತನವಾಗಿದ್ದವು. ಅದರ ನಂತರದ ಹಂತದಲ್ಲಿ ದೀಪ್ತಿ ಶರ್ಮಾ, ಸ್ನೇಹ ರಾಣಾ, ರಿಚಾ ಘೋಷ್ ಹಾಗೂ ಅಮನ್ಜೋತ್ ಕೌರ್ ಅವರ ದಿಟ್ಟ ಆಟದಿಂದಾಗಿ ತಂಡವು ಹೋರಾಟದ ಮೊತ್ತ ಪೇರಿಸಲು ಸಾಧ್ಯವಾಗಿತ್ತು.
ಆದರೆ ಯೋಜನಾಬದ್ಧ ಆಟವಾಡುವ ಮತ್ತು ತಾಂತ್ರಿಕ ಕೌಶಲಗಳಲ್ಲಿ ಉತ್ತಮ ಆಟಗಾರ್ತಿಯರು ಇರುವ ದಕ್ಷಿಣ ಆಫ್ರಿಕಾ ತಂಡದ ಎದುರು ಎಚ್ಚರಿಕೆಯಿಂದ ಆಡುವ ಅಗತ್ಯ ಇದೆ. ಆದ್ದರಿಂದ ಆಗ್ರಕ್ರಮಾಂಕದ ಬ್ಯಾಟರ್‌ಗಳ ಹೊಣೆಗಾರಿಕೆ ಹೆಚ್ಚಿದೆ.
ಅಲ್ಲದೇ ಗುವಾಹಟಿ ಮತ್ತು ಕೊಲಂಬೊದಲ್ಲಿ ಆಡಿರುವ ಪಿಚ್‌ಗಳಿಗಿಂತ ಎಸಿಎ–ವಿಡಿಸಿಎ ಕ್ರೀಡಾಂಗಣದ ಅಂಗಣವು ಭಿನ್ನವಾಗಿರುವುದು ಖಚಿತ. ಆದ್ದರಿಂದ ಅದಕ್ಕೆ ತಕ್ಕಂತೆ ತಂತ್ರಗಾರಿಕೆ ರೂಪಿಸುವುದು ಅನಿವಾರ್ಯವಾಗಲಿದೆ. ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಭಾರತದ ಪರ ಅತ್ಯಧಿಕ ವಿಕೆಟ್ (6) ಪಡೆದ ಬೌಲರ್ ಆಗಿದ್ದಾರೆ. ಸ್ನೇಹ ರಾಣಾ ಮತ್ತು ಶ್ರೀ ಚರಣಿ ಕೂಡ ದೀಪ್ತಿಗೆ ಉತ್ತಮ ಬೆಂಬಲ ನೀಡಿದ್ದಾರೆ. ಮಧ್ಯಮವೇಗಿ ಕ್ರಾಂತಿ ಗೌಡ್ ಕೂಡ ಪರಿಣಾಮಕಾರಿಯಾಗಿದ್ದಾರೆ.
ಆದರೆ ಮಧ್ಯಮವೇಗ–ಆಲ್‌ರೌಂಡರ್ ಅಮನ್ಜೋತ್ ಕೌರ್ ಅವರು ಅಸ್ವಸ್ಥರಾಗಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಅದರಿಂದಾಗಿ ಕಳೆದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಮೊದಲ ಪಂದ್ಯದಲ್ಲಿ ಅವರು ಭಾರತ ತಂಡಕ್ಕೆ ಉಪಯುಕ್ತ ಆಟವಾಡಿ ಗೆಲುವಿಗೆ ಕಾರಣರಾಗಿದ್ದರು.
ದಕ್ಷಿಣ ಆಫ್ರಿಕಾದ ತಾಜ್ಮಿನ್ ಬ್ರಿಟ್ಸ್ ನ್ಯೂಜಿಲೆಂಡ್ ಎದುರು ಅಮೋಘ ಶತಕ ದಾಖಲಿಸಿದ್ದರು. ಸೂನ್ ಲೂಸ್ ಉತ್ತಮ ಲಯದಲ್ಲಿದ್ದಾರೆ. ನಾಯಕಿ ವೊಲ್ವಾರ್ಟ್ ಮತ್ತು ಅನುಭವಿ ಮರಿಜಾನೆ ಕಾಪ್ ಅವರು ಕೂಡ ಪಂದ್ಯವನ್ನು ಗೆದ್ದುಕೊಡಬಲ್ಲ ಸಮರ್ಥರು. ಅವರನ್ನು ನಿಯಂತ್ರಿಸುವುದು ಹರ್ಮನ್ ಬಳಗದ ಮುಂದೆ ಇರುವ ಪ್ರಮುಖ ಸವಾಲು.
ಜೆಮಿಮಾ ರಾಡ್ರಿಗಸ್ ಬ್ಯಾಟಿಂಗ್ ಅಭ್ಯಸ
ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಪ್ರತಿಕಾ ರಾವಲ್ ಹರ್ಲೀನ್ ಡಿಯೊಲ್ ಜೆಮಿಮಾ ರಾಡ್ರಿಗಸ್ ರಿಚಾ ಘೋಷ್ ಉಮಾ ಚೆಟ್ರಿ ರೇಣುಕಾ ಸಿಂಗ್ ಠಾಕೂರ್ ದೀಪ್ತಿ ಶರ್ಮಾ ಸ್ನೇಹ ರಾಣಾ ಶ್ರೀಚರಣಿ ರಾಧಾ ಯಾದವ್ ಅಮನ್ಜೋತ್ ಕೌರ್ ಅರುಂಧತಿ ರೆಡ್ಡಿ ಕ್ರಾಂತಿ ಗೌಡ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಟ್ (ನಾಯಕಿ) ಅಯಾಬೋಂಗಾ ಕಾಕಾ ಚೊಲೆ ಟ್ರಯನ್ ನಡೈಡ್ ಡಿ ಕ್ಲರ್ಕ್ ಮೆಝಾನೆ ಕಾಪ್ ತಾಜ್ಮಿನ್ ಬ್ರಿಟ್ಸ್ ಸಿನಲೊ ಜಾಫ್ತಾ ನಾನಕುಲುಲೆಕೊ ಮ್ಲಾಬಾ ಅನೆರಿ ಡರ್ಕೆಸನ್ ಅನೆಕ್ ಬಾಷ್ ಮಸ್ಬಾತಾ ಕ್ಲಾಸ್ ಸುನಿ ಲೂಸ್ ಕರಾಬೊ ಮೆಸೊ ತುಮಿ ಸೆಖುಖುನೆ ನೊಂಡುಮಿಸೊ ಶಾಂಗಸೆ. ಪಂದ್ಯ ಆರಂಭ: ಮಧ್ಯಾಹ್ನ 3 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.