ADVERTISEMENT

ICC Womens World Cup: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2022, 6:57 IST
Last Updated 16 ಮಾರ್ಚ್ 2022, 6:57 IST
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು   

ಮೌಂಟ್ ಮೌಂಗನೂಯಿ: ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.

ನ್ಯೂಜಿಲೆಂಡ್‌ನ ಬೇ ಓವಲ್‌ನಲ್ಲಿನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಿಥಾಲಿ ರಾಜ್ ಬಳಗವು 36.2 ಓವರ್‌ಗಳಲ್ಲಿ 134 ರನ್ನಿಗೆ ಆಲೌಟ್ ಆಯಿತು. ಬಳಿಕ ಇಂಗ್ಲೆಂಡ್ 31.2 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಈ ಸೋಲಿನೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲು ಅನುಭವಿಸಿರುವ ಭಾರತ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ADVERTISEMENT

ಇನ್ನೊಂದೆಡೆ ಹ್ಯಾಟ್ರಿಕ್ ಸೋಲಿನ ಬಳಿಕ ಇಂಗ್ಲೆಂಡ್ ತಂಡವು ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

ಬ್ಯಾಟರ್‌ಗಳ ವೈಫಲ್ಯ ಭಾರತದ ಹಿನ್ನಡೆಗೆ ಕಾರಣವಾಯಿತು. ಸ್ಮೃತಿ ಮಂದಾನ 35, ರಿಚಾ ಘೋಷ್ 33, ಜೂಲನ್ ಗೋಸ್ವಾಮಿ 20 ಹಾಗೂ ಹರ್ಮನ್‌ಪ್ರೀತ್ ಕೌರ್ 14 ರನ್ ಗಳಿಸಿದರು.

ನಾಯಕಿ ಮಿಥಾಲಿ ರಾಜ್ (1), ದೀಪ್ತಿ ಶರ್ಮಾ (0) ಹಾಗೂ ಸ್ನೇಹಾ ರಾಣಾ (0) ಪ್ರಭಾವಿ ಎನಿಸಿಕೊಳ್ಳಲು ವಿಫಲರಾದರು.

ಇಂಗ್ಲೆಂಡ್ ಪರ ಚಾರ್ಲಟ್ ಡೀನ್ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಬಳಿಕ ನಾಯಕಿ ಹೀದರ್ ನೈಟ್ ಆಕರ್ಷಕ ಅರ್ಧಶತಕ (53*) ಹಾಗೂ ನತಾಲಿ ಸೀವರ್ (45) ತಂಡದ ಗೆಲುವಿನಲ್ಲಿ ಮಹತ್ವ ಪಾತ್ರ ವಹಿಸಿದರು.

ಈ ನಡುವೆ ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್ ಗಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.