ADVERTISEMENT

WTC Final: ವೇಗಿಗಳದ್ದೇ ದರಬಾರು; ಕಮಿನ್ಸ್‌ ಪಡೆಗೆ ಗೆಲುವಿನ ಕನವರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2025, 20:13 IST
Last Updated 12 ಜೂನ್ 2025, 20:13 IST
<div class="paragraphs"><p>ಪ್ಯಾಟ್ ಕಮಿನ್ಸ್ ಅವರನ್ನು ಅಭಿನಂದಿಸಿದ ಸಹ ಆಟಗಾರರು &nbsp;ಎಪಿ/ಪಿಟಿಐ ಚಿತ್ರ</p></div>

ಪ್ಯಾಟ್ ಕಮಿನ್ಸ್ ಅವರನ್ನು ಅಭಿನಂದಿಸಿದ ಸಹ ಆಟಗಾರರು  ಎಪಿ/ಪಿಟಿಐ ಚಿತ್ರ

   

ಲಂಡನ್ (ಎಎಫ್‌ಪಿ): ನಾಯಕ ಪ್ಯಾಟ್ ಕಮಿನ್ಸ್ ಅವರ ಪರಿಣಾಮಕಾರಿ ದಾಳಿ ಮತ್ತು ಅಲೆಕ್ಸ್ ಕ್ಯಾರಿಯ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಮುನ್ನಡೆ
ಸಾಧಿಸಿತು. 

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ಎರಡನೇ ದಿನವಾದ ಗುರುವಾರ ಆಸ್ಟ್ರೇಲಿಯಾ ತಂಡವು 218 ರನ್‌ಗಳ ಮುನ್ನಡೆ ಸಾಧಿಸಿತು. ಕಮಿನ್ಸ್ (28ಕ್ಕೆ6) ತಮ್ಮ ಅಮೋಘ ಬೌಲಿಂಗ್ ಮೂಲಕ ಆಸ್ಟ್ರೇಲಿಯಾ ತಂಡದ ಮೇಲುಗೈಗೆ ಕಾರಣರಾದರು. ಅಲ್ಲದೇ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ವಿಕೆಟ್ ಗಳಿಸಿದ ಸಾಧನೆಯನ್ನೂ ದಾಖಲಿಸಿದರು. 

ADVERTISEMENT

ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 212 ರನ್‌ಗಳ ಮೊತ್ತಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 138 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕಮಿನ್ಸ್ ಬಳಗವು 74 ರನ್‌ಗಳ ಮುನ್ನಡೆ ಪಡೆಯಿತು. 

ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಕಗಿಸೊ ರಬಾಡ (44ಕ್ಕೆ3) ಮತ್ತು ಲುಂಗಿ ಎನ್‌ಗಿಡಿ (33ಕ್ಕೆ3) ಪೆಟ್ಟುಕೊಟ್ಟರು. ರಬಾಡ ಅವರು ಮೊದಲ ಇನಿಂಗ್ಸ್‌ನಲ್ಲಿ (51ಕ್ಕೆ5) ಐದು ವಿಕೆಟ್ ಗೊಂಚಲು ಗಳಿಸಿದ್ದರು. ಇವರಿಬ್ಬರ ದಾಳಿಯ ನಡುವೆಯೂ ಗಟ್ಟಿಯಾಗಿ ನಿಂತ ಅಲೆಕ್ಸ್ ಕ್ಯಾರಿ (43; 50ಎ) ಮತ್ತು ಅವರಿಗೆ ಉತ್ತಮ ಜೊತೆ ನೀಡಿದ ಮಿಚೆಲ್ ಸ್ಟಾರ್ಕ್‌ (ಬ್ಯಾಟಿಂಗ್ 16) ಎಂಟನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಇದರಿಂದಾಗಿ ಮುನ್ನಡೆಯೂ ಹೆಚ್ಚಿತು. 

ಕಮಿನ್ಸ್ ಮಿಂಚು: ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಕಳಪೆಯಾಗಿತ್ತು. ಒಂದು ಹಂತದಲ್ಲಿ ಕೇವಲ 12 ರನ್‌ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಕಮಿನ್ಸ್‌ ಅವರು ಕೆಳಕ್ರಮಾಂಕದ ವಿಕೆಟ್‌ಗಳನ್ನು ಗಳಿಸಿ ದರು. ಅದರೊಂದಿಗೆ ಲಾರ್ಡ್ಸ್‌ನಲ್ಲಿ ಪ್ರಥಮ ಸಲ ಮತ್ತು ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 14ನೇ ಬಾರಿ ಐದು ವಿಕೆಟ್ ಗೊಂಚಲು ಗಳಿಸಿದರು.  ಊಟದ ವಿರಾಮದ ನಂತರದ ಅವಧಿಯಲ್ಲಿ ಕಮಿನ್ಸ್‌ ಅಮೋಘ ಬೌಲಿಂಗ್ ಮಾಡಿದರು. ಅವರು ಹಾಕಿದ 17 ಎಸೆತಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. 

ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ (36 ರನ್) ಮತ್ತು ಡೇವಿಡ್ ಬೆಡಿಂಗಮ್ (45 ರನ್) ಐದನೇ ವಿಕೆಟ್ ಜೊತೆಯಾಟದಲ್ಲಿ ತುಸು ಜಿಗುಟುತನ ತೋರಿಸಿದರು. ಈ ಇನಿಂಗ್ಸ್‌ನಲ್ಲಿ ಏಕೈಕ ಸಿಕ್ಸರ್‌ ಬಾರಿಸಿದ ತೆಂಬಾ ಬವುಮಾ ಅವರೂ ಕಮಿನ್ಸ್‌ ಬೌಲಿಂಗ್‌ನಲ್ಲಿ ಔಟಾದರು.

14 ವಿಕೆಟ್ ಪತನ: ಸತತ ಎರಡನೇ ದಿನದಾಟದಲ್ಲಿಯೂ ಒಟ್ಟು 14 ವಿಕೆಟ್‌ಗಳು ಪತನವಾದವು. ಪಂದ್ಯದ ಮೊದಲ ದಿನದಾಟದಲ್ಲಿಯೂ ಇಷ್ಟೇ ವಿಕೆಟ್‌ಗಳು ಉರುಳಿದ್ದವು. ಎರಡನೇ ದಿನವೂ ವೇಗದ ಬೌಲರ್‌ಗಳ ಮೆರೆ ದಾಟ ನಡೆಯಿತು. ಎರಡು ದಿನಗಳಲ್ಲಿ ಒಟ್ಟು 28 ವಿಕೆಟ್‌ಗಳು ಪತನವಾಗಿದ್ದು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮುನ್ನಡೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.