ADVERTISEMENT

Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2025, 10:37 IST
Last Updated 25 ಅಕ್ಟೋಬರ್ 2025, 10:37 IST
<div class="paragraphs"><p>ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ</p></div>

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ

   

– ಬಿಸಿಸಿಐ ಚಿತ್ರಗಳು

ಸಿಡ್ನಿ: ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಹಾಗೂ ವಿರಾಟ್ ಕೊಹ್ಲಿಯವರ ಸೊಗಸಾದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಮೊದಲ ಎರಡು ಪಂದ್ಯದಲ್ಲಿ ಸೋತಿದ್ದ ಭಾರತ ಈ ಪಂದ್ಯದಲ್ಲಿ ಶಿಸ್ತಿನ ಬೌಲಿಂಗ್ ದಾಳಿ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿತು.

ರೋ–ಕೊ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 169 ಎಸೆತಗಳಲ್ಲಿ 168 ರನ್‌ಗಳ ಜೊತೆಯಾಟ ನಡೆಸಿತು.

ಆಸ್ಟ್ರೇಲಿಯಾ ಒಡ್ಡಿದ 237 ರನ್‌ಗ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಮೊದಲ ವಿಕೆಟ್‌ಗೆ ರೋಹಿತ್ ಹಾಗೂ ಶುಭಮನ್ 69 ರನ್‌ಗಳನ್ನು ಪೇರಿಸಿದರು. ಇದರಲ್ಲಿ ಗಿಲ್ ಕೊಡುಗೆ 24.

ಇದಾದ ಬಳಿಕ ರೋಹಿತ್–ಕೊಹ್ಲಿ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಉಭಯ ಆಟಗಾರರು ಮನಮೋಹಕ ಹೊಡೆತಗಳ ಮೂಲಕ ರಂಜಿಸಿದರು. ದೀರ್ಘ ಕಾಲದ ಬಳಿಕ ಈ ಜೋಡಿಯ ಇನಿಂಗ್ಸ್ ನೋಡಿ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು. ಇವರಿಬ್ಬರ ಪೋಸ್ಟರ್ ಹಿಡಿದುಕೊಂಡು ಕುಣಿದು ಸಂಭ್ರಮಿಸಿದರು.

ರೋಹಿತ್ ಶರ್ಮಾ ಅವರ121 ರನ್‌ಗಳ ಇನಿಂಗ್ಸ್ 125 ಎಸೆತಗಳಲ್ಲಿ ಬಂತು. ಇದರಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು. 81 ಎಸೆತಗಳಲ್ಲಿ 74 ರನ್ ಗಳಿಸಿದ ಕೊಹ್ಲಿ ಇನಿಂಗ್ಸ್‌ನಲ್ಲಿ 7 ಬೌಂಡರಿಗಳಿದ್ದವು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಹರ್ಷಿತ್ ರಾಣಾ (39‌‌/4) ಬೌಲಿಂಗ್‌ ದಾಳಿಗೆ ಸಿಲುಕಿ, 46.4 ಓವರ್‌ಗಳಲ್ಲಿ 236 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್‌ಗಳಾದ ಮಿಚಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ಆಡಿದರು. ಈ ಹಂತದಲ್ಲಿ 29 ರನ್ ಗಳಿಸಿದ್ದ ಹೆಡ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ನಂತರ ಬಂದ ಮ್ಯಾಥ್ಯೂ ಶಾರ್ಟ್ (30 ), ನಾಯಕ ಮಿಚೆಲ್ ಮಾರ್ಷ್ (41) ಹಾಗೂ ರೆನ್‌ಶಾ (56) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ (24) ಹಾಗೂ ಕೂಪರ್ ಕೊನೊಲಿ (23) ರನ್‌ ಗಳಿಸಿ ತಂಡದ ಮೊತ್ತ 200ರ ಗಡಿದಾಟಲು ನೆರವಾದರು.

ಈ ಸರಣಿಯನ್ನು 2–1 ಅಂತರದಿಂದ ಆಸ್ಟ್ರೇಲಿಯಾ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.