ADVERTISEMENT

50 ರನ್ ಹಾಗೂ 4 ವಿಕೆಟ್: ಹಾರ್ದಿಕ್ ಪಾಂಡ್ಯ ವಿಶಿಷ್ಟ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2022, 10:17 IST
Last Updated 18 ಜುಲೈ 2022, 10:17 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ಮ್ಯಾಂಚೆಸ್ಟರ್: ಅಂತರರಾಷ್ಟ್ರೀಯ ಏಕದಿನ ಪಂದ್ಯವೊಂದರಲ್ಲಿ 50ಕ್ಕೂ ಹೆಚ್ಚು ರನ್ ಹಾಗೂ ನಾಲ್ಕು ವಿಕೆಟ್ ಗಳಿಸುವ ಮೂಲಕ ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಅಲ್ಲದೆ ಏಕದಿನ ಪಂದ್ಯವೊಂದರಲ್ಲೇ 50ಕ್ಕೂ ಹೆಚ್ಚು ರನ್ ಹಾಗೂ ನಾಲ್ಕಕ್ಕೂ ಹೆಚ್ಚು ವಿಕೆಟ್ ಗಳಿಸಿದ ಭಾರತದ ಐದನೇ ಆಟಗಾರ ಎನಿಸಿದ್ದಾರೆ.

ಹಾಗೆಯೇ ಎಲ್ಲ ಮೂರು ಪ್ರಕಾರದ ಆಟದಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಸಾಲಿಗೆ ಸೇರಿದ್ದಾರೆ.

1988ರಲ್ಲಿ ಭಾರತದ ಪರ ಮೊದಲ ಬಾರಿಗೆ ಮಾಜಿ ಆಟಗಾರ ಕೆ. ಶ್ರೀಕಾಂತ್, ನ್ಯೂಜಿಲೆಂಡ್ ವಿರುದ್ಧ 70 ರನ್ ಹಾಗೂ ಐದು ವಿಕೆಟ್ ಕಬಳಿಸಿದ್ದರು. 1998ರಲ್ಲಿ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾ ವಿರುದ್ಧ 141 ರನ್ ಹಾಗೂ 4 ವಿಕೆಟ್ ಗಳಿಸಿದ್ದರು.

ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದರು. 1999ರಲ್ಲಿ ಗಂಗೂಲಿ, ಶ್ರೀಲಂಕಾ ವಿರುದ್ಧ ಅಜೇಯ 130 ರನ್ ಹಾಗೂ 4 ವಿಕೆಟ್ ಗಳಿಸಿದ್ದರು. ಬಳಿಕ 2000ದಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 71 ರನ್ ಹಾಗೂ 5 ವಿಕೆಟ್ ಪಡೆದಿದ್ದರು.

2008ರಲ್ಲಿ ಯುವರಾಜ್, ಇಂಗ್ಲೆಂಡ್ ವಿರುದ್ಧ 118 ರನ್ ಹಾಗೂ ನಾಲ್ಕು ವಿಕೆಟ್ ಮತ್ತು 2011ರಲ್ಲಿ ಐರ್ಲೆಂಡ್ ವಿರುದ್ಧ ಅಜೇಯ 50 ರನ್ ಹಾಗೂ 5 ವಿಕೆಟ್ ಗಳಿಸಿದ್ದರು.

ಈಗ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಂಡ್ಯ 71 ರನ್ ಹಾಗೂ ನಾಲ್ಕು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ 50+ ರನ್ ಹಾಗೂ 4+ ವಿಕೆಟ್ ಸಾಧನೆ:
ಟೆಸ್ಟ್: 2018ರಲ್ಲಿ ಇಂಗ್ಲೆಂಡ್ ವಿರುದ್ಧ, ಅಜೇಯ 52 ರನ್ ಹಾಗೂ 5 ವಿಕೆಟ್
ಏಕದಿನ: 2022ರಲ್ಲಿ ಇಂಗ್ಲೆಂಡ್ ವಿರುದ್ಧ, 71 ರನ್ಹಾಗೂ 4 ವಿಕೆಟ್
ಟ್ವೆಂಟಿ-20: 2022ರಲ್ಲಿ ಇಂಗ್ಲೆಂಡ್ ವಿರುದ್ಧ, 51 ರನ್ ಹಾಗೂ 4 ವಿಕೆಟ್

ಹಾರ್ದಿಕ್ ಪಾಂಡ್ಯ ಅವರ ಈ ಎಲ್ಲ ಸಾಧನೆಗಳು ಇಂಗ್ಲೆಂಡ್ ವಿರುದ್ಧವೇ ದಾಖಲಾಗಿರುವುದು ಗಮನಾರ್ಹ.

ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ (125*) ಅಮೋಘ ಆಟದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.