ADVERTISEMENT

IND vs ZIM: ಶುಭಮನ್ ಗಿಲ್ ಚೊಚ್ಚಲ ಶತಕ; ಜಿಂಬಾಬ್ವೆ ಗೆಲುವಿಗೆ 290 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2022, 11:35 IST
Last Updated 22 ಆಗಸ್ಟ್ 2022, 11:35 IST
ಶುಭಮನ್ ಗಿಲ್
ಶುಭಮನ್ ಗಿಲ್   

ಹರಾರೆ: ಯುವ ಭರವಸೆಯ ಬ್ಯಾಟರ್ ಶುಭಮನ್ ಗಿಲ್ ಚೊಚ್ಚಲ ಶತಕದ (130) ನೆರವಿನಿಂದ ಟೀಮ್ ಇಂಡಿಯಾ, ಇಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.

ಈಗಾಗಲೇ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಕೆ.ಎಲ್. ರಾಹುಲ್ ಪಡೆ, ಈ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್‌ಗೈಯುವ ಇರಾದೆಯಲ್ಲಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ಮೊದಲ ವಿಕೆಟ್‌ಗೆ ಶಿಖರ್ ಧವನ್ ಜೊತೆಗೆ 63 ರನ್‌ಗಳ ಜೊತೆಯಾಟ ಕಟ್ಟಿದರು.

ರಾಹುಲ್ 30 ಹಾಗೂ ಧವನ್ 40 ರನ್ ಗಳಿಸಿ ಔಟ್ ಆದರು.

ಬಳಿಕ ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದರು. 97 ಎಸೆತಗಳನ್ನು ಎದುರಿಸಿದ ಗಿಲ್ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಇದನ್ನೂ ಓದಿ:

ಗಿಲ್‌ಗೆ ಉತ್ತಮ ಸಾಥ್ ನೀಡಿದ ಇಶಾನ್ ಕಿಶನ್ ಅರ್ಧಶತಕ (50 ರನ್, 61 ಎಸೆತ, 6 ಬೌಂಡರಿ) ಗಳಿಸಿದರು. ಇನ್ನುಳಿದಂತೆ ಸಂಜು ಸ್ಯಾಮ್ಸನ್ 15, ಶಾರ್ದೂಲ್ ಠಾಕೂರ್ 9, ದೀಪಕ್ ಹೂಡಾ 1 ರನ್ ಗಳಿಸಿದರು.

ಜಿಂಬಾಬ್ವೆ ಪರ 54 ರನ್ ತೆತ್ತು ಐದು ವಿಕೆಟ್ ಕಬಳಿಸಿದ ಬ್ರಾಡ್ ಇವಾನ್ಸ್ ಪ್ರಭಾವಿ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.