ADVERTISEMENT

IND vs SA: ಆಟಗಾರರಲ್ಲಿ ಕೋವಿಡ್ ದೃಢಪಟ್ಟರೂ ಕ್ರಿಕೆಟ್ ಸರಣಿ ಮುಂದುವರಿಕೆ

ಪಿಟಿಐ
Published 22 ಡಿಸೆಂಬರ್ 2021, 16:40 IST
Last Updated 22 ಡಿಸೆಂಬರ್ 2021, 16:40 IST
ಭಾರತ ತಂಡದ ಆಟಗಾರರ ಅಭ್ಯಾಸ  –ಎಎಫ್‌ಪಿ ಚಿತ್ರ
ಭಾರತ ತಂಡದ ಆಟಗಾರರ ಅಭ್ಯಾಸ –ಎಎಫ್‌ಪಿ ಚಿತ್ರ   

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಆಟಗಾರರು, ನೆರವು ಸಿಬ್ಬಂದಿ ಮತ್ತಿತರರಿಗೆ ಕೋವಿಡ್ ಖಚಿತವಾದರೂ ಪಂದ್ಯಗಳನ್ನು ಸ್ಥಗಿತಗೊಳಿಸದಿರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಜಂಟಿಯಾಗಿ ನಿರ್ಧರಿಸಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯಲ್ಲಿ ಮೂರು ಟೆಸ್ಟ್‌ಗಳು ನಡೆಯಲಿವೆ. ತದನಂತರ ಮೂರು ಏಕದಿನ ಪಂದ್ಯಗಳು ನಡೆಯುತ್ತವೆ. ಇದೇ 26ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ.

‘ವೈದ್ಯಕೀಯ ಶಿಷ್ಟಾಚಾರದ ಕರಾರಿಗೆ ಎರಡೂ ಮಂಡಳಿಗಳು ಒಪ್ಪಿಕೊಂಡಿವೆ. ಜೀವ ಸುರಕ್ಷಾ ವಾತಾವರಣ (ಬಯೋಬಬಲ್) ದಲ್ಲಿರುವ ಎಲ್ಲರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಬಹುತೇಕ ಎಲ್ಲರೂ ಲಸಿಕೆ ತೆಗೆದುಕೊಂಡವರಾಗಿದ್ದಾರೆ. ಆದ್ದರಿಂದ ಒಂದೊಮ್ಮೆ ಯಾರಿಗಾದರೂ ಕೋವಿಡ್ ತಗುಲಿದರೆ ಅವರನ್ನು ಪ್ರತ್ಯೇಕವಾಸಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ತಂಡವೂ ಸನ್ನದ್ಧವಾಗಿದೆ. ಆಟಗಾರರು ಉಳಿದುಕೊಂಡಿರುವ ಹೋಟೆಲ್‌ನಲ್ಲಿಯೇ ಇಂತಹ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ವೈದ್ಯಾಧಿಕಾರಿ ಶುಯಬ್ ಮಾಂಜ್ರಾ ಹೇಳಿದ್ದಾರೆ.

ADVERTISEMENT

ಪ್ರತಿದಿನವೂ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ (ಆರ್‌ಎಟಿ) ಯನ್ನು ಪ್ರತಿದಿನವೂ ನಡೆಸಲಾಗುವುದು. ಸೋಂಕಿನ ಪ್ರಕರಣಗಳು ಕಂಡುಬಂದರೆ ಆಯಾ ಆಟಗಾರ, ಸಿಬ್ಬಂದಿಯ ತಂಡದ ವೈದ್ಯರು ಮುಂದಿನ ಕ್ರಮ ಕೈಗೊಳ್ಳುತ್ತಾರೆ.

‘ಹೋಟೆಲ್ ಸಿಬ್ಬಂದಿಯು ತಂಡಗಳು ಬರುವ ಒಂದು ವಾರ ಮುನ್ನವೇ ಬಯೋಬಬಲ್‌ನಲ್ಲಿದ್ದಾರೆ. ಅವರನ್ನೂ ಪ್ರತಿದಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ. ಯಾವುದೇ ದಾರಿಯಿಂದಲೂ ಸೋಂಕು ಬಯೋಬಬಲ್ ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ’ ಎಂದು ಮಾಂಜ್ರಾ ತಿಳಿಸಿದ್ದಾರೆ.

ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕಳೆದೆರಡು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಯೋಜಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಪ್ರಚಾರ ಮತ್ತು ಜಾಹೀರಾತು ಆದಾಯದ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ಮಂಡಳಿಗೆ ಇದು ಮಹತ್ವದ ಟೂರ್ನಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಟೂರ್ನಿಗೆ ಅಡೆತಡೆಯಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸರಣಿಯ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.