ADVERTISEMENT

U19 Womens T20 World Cup: ದ.ಆಫ್ರಿಕಾ ಮಣಿಸಿದ ಭಾರತ ಸತತ 2ನೇ ಸಲ ಚಾಂಪಿಯನ್

ಭಾರತದ ಯುವಪಡೆಗೆ ಎರಡನೇ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2025, 9:03 IST
Last Updated 2 ಫೆಬ್ರುವರಿ 2025, 9:03 IST
<div class="paragraphs"><p>ಚಿತ್ರ ಕೃಪೆ: ಐಸಿಸಿ</p></div>

ಚಿತ್ರ ಕೃಪೆ: ಐಸಿಸಿ

   
ಸತತ 2ನೇ ಸಲ ವಿಶ್ವಕಪ್ ಗೆದ್ದ ಭಾರತ | ತೃಷಾ ಗೊಂಗಡಿ ಅವರಿಗೆ ಸರಣಿಶ್ರೇಷ್ಠ, ಪಂದ್ಯಶ್ರೇಷ್ಠ ಗೌರವ

ಕ್ವಾಲಾಲಂಪುರ: ಬೆಂಗಳೂರಿನ ನಿಕಿ ಪ್ರಸಾದ್ ನಾಯಕತ್ವದ ಭಾರತ ತಂಡವು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಜಯಿಸಿತು. ತಂಡವು ಸತತ ಎರಡನೇ ಬಾರಿ ಈ ಸಾಧನೆ ಮಾಡಿತು. 

ಭಾನುವಾರ ನಡೆದ ಫೈನಲ್‌ನಲ್ಲಿ  ಜಿ. ತ್ರಿಷಾ (15ಕ್ಕೆ3 ಹಾಗೂ ಔಟಾಗದೇ 44) ಆಲ್‌ರೌಂಡ್ ಆಟದ ಬಲದಿಂದ ಭಾರತ ತಂಡವು 9 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಎದುರು ಜಯಿಸಿತು. 

ADVERTISEMENT

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಕೈಲಾ ರೇನೆಕೆ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರಿಗೇ ಈ ನಿರ್ಧಾರ ತಿರುಗುಬಾಣವಾಯಿತು. ಭಾರತದ ತ್ರಿಷಾ, ಸ್ಪಿನ್ನರ್‌ಗಳಾದ ಪರುಣಿಕಾ ಸಿಸೊಡಿಯಾ (6ಕ್ಕೆ2), ಆಯುಷಿ ಶುಕ್ಲಾ (9ಕ್ಕೆ2) ಮತ್ತು ವೈಷ್ಣವಿ ಶರ್ಮಾ (23ಕ್ಕೆ2) ಅವರ ದಾಳಿಗೆ ದಕ್ಷಿಣ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 82 ರನ್‌ಗಳಿಗೆ ಕುಸಿಯಿತು. 

ಇದಕ್ಕುತ್ತರವಾಗಿ ಭಾರತ ತಂಡವು 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 84 ರನ್ ಗಳಿಸಿ ಗೆದ್ದಿತು. ತ್ರಿಷಾ 33 ಎಸೆತಗಳಲ್ಲಿ 8 ಬೌಂಡರಿ ಸಹಿತ 44 ರನ್ ಗಳಿಸಿದರು. ಸನಿಕಾ ಚಳ್ಕೆ (ಔಟಾಗದೆ 26; 22ಎ, 4X4)ತಂಡವನ್ನು ಗೆಲುವಿನ ದಡ ಸೇರಿಸಿದರು. 

ಟೂರ್ನಿಯುದ್ದಕ್ಕೂ ಅಜೇಯವಾಗುಳಿದಿದ್ದ ನಿಕಿ ಬಳಗವು ಫೈನಲ್‌ನಲ್ಲಿಯೂ  ಪಾರಮ್ಯ ಮೆರೆಯಿತು.  ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ, ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಎಲ್ಲ ವಿಭಾಗಗಳಲ್ಲಿಯೂ ಮಂಕಾಯಿತು. 

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಪರುಣಿಕಾ ಸಿಸೋಡಿಯಾ ಬೌಲಿಂಗ್‌ನಲ್ಲಿ ಸಿಮೋನ್ ಲಾರೆನ್ಸ್‌ ಕ್ಲೀನ್‌ಬೌಲ್ಡ್ ಆದರು. ನಂತರ ಅಗ್ರಕ್ರಮಾಂಕದ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ಗೆ ಹೋದರು. ಮಧ್ಯಮ ಕ್ರಮಾಂಕದಲ್ಲಿ ಮೀಕೆ ವ್ಯಾ್ನ ವೂರ್ಸ್ಟ್ (23; 18ಎ) ಮತ್ತು ಫೇ ಕೌಲಿಂಗ್ (15; 20ಎ, 6X1) ಅವರಿಬ್ಬರು ಒಂದಷ್ಟು ಪ್ರತಿರೋಧ ತೋರಿದರು.

ಆದರೆ ಭಾರತದ ಬೌಲರ್‌ಗಳ ಮೋಡಿಯ ಮುಂದೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 

ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ ತ್ರಿಷಾ (309) ಅವರ ಆರ್ಭಟಕ್ಕೆ  ಬೌಲರ್‌ಗಳ ಆಟ ನಡೆಯಲಿಲ್ಲ. ತಂಡವು ಎರಡನೇ ಬಾರಿ ಕಿರೀಟ ಧರಿಸಿತು. 

ಶಾಂತಚಿತ್ತಕ್ಕೆ ದೊರೆತ ಜಯ: ನಿಕಿ 

‘ನಾವೆಲ್ಲರೂ ಸಾಧ್ಯವಾದಷ್ಟೂ ಶಾಂತಚಿತ್ತ ಮತ್ತು ಏಕಾಗ್ರತೆಯಿಂದ ಆಡುವ ಪ್ರಯತ್ನವನ್ನು ಪ್ರತಿ ಹಂತದಲ್ಲಿಯೂ ಮಾಡಿದೆವು. ಅದು ಉತ್ತಮ ಫಲ ನೀಡಿತು’ ಎಂದು ಭಾರತ 19 ವರ್ಷದ ಮಹಿಳಾ ತಂಡದ ನಾಯಕಿ ನಿಕಿ ಪ್ರಸಾದ್ ಸಂತಸ ವ್ಯಕ್ತಪಡಿಸಿದರು.  ಭಾನುವಾರ ಫೈನಲ್ ಪಂದ್ಯದಲ್ಲಿ ಜಯಿಸಿದ ನಂತರ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.  ‘ನಾವು ಏನು ಮಾಡಬಲ್ಲೆವು ಎಂಬುದನ್ನು ಜಗತ್ತಿಗೆ ತೋರಿಸಬೇಕಿತ್ತು. ಈ ಸಾಧನೆಯಿಂದ ಅದನ್ನು ತೋರಿಸಿದ್ದೇವೆ. ಇಂತಹದೊಂದು ಅಪೂರ್ವ ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದಗಳು. ಭಾರತ ತಂಡವು ಅಗ್ರಸ್ಥಾನದಲ್ಲಿರುವಂತೆ ನೋಡಿಕೊಳ್ಳುವ ಹೊಣೆ ನಿಭಾಯಿಸಿದ್ದು ನನಗೆ ಹೆಮ್ಮೆ ಮತ್ತು ವಿಶೇಷ ಸಂಗತಿಯಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.