ದುಬೈ: ಇಪ್ಪತ್ಮೂರು ಪಂದ್ಯಗಳಲ್ಲಿ ಜಯ..ಒಂದರಲ್ಲಿ ಸೋಲು..
ಭಾರತ ಕ್ರಿಕೆಟ್ ತಂಡವು ಕಳೆದ ಮೂರು ಐಸಿಸಿ ಟ್ರೋಫಿ ಟೂರ್ನಿಗಳಲ್ಲಿ (ಸೀಮಿತ ಓವರ್‌ಗಳ ಮಾದರಿ) ಮಾಡಿರುವ ದಾಖಲೆ ಇದು. ಇದನ್ನು ಶ್ವೇತವರ್ಣದ ಚೆಂಡಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆ ಎಂದೇ ಹೇಳಬೇಕು ಅಲ್ಲವೇ?
ಇಷ್ಟೆಲ್ಲದರಲ್ಲಿ ಆ ಒಂದು ಸೋಲು ಕ್ರಿಕೆಟ್‌ಪ್ರೇಮಿಗಳ ಹೃದಯವನ್ನು ಛಿದ್ರಗೊಳಿಸಿತ್ತು. 2023ರ ನವೆಂಬರ್‌ನಲ್ಲಿ ಅಹಮದಾಬಾದಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಅದಾಗಿತ್ತು. ಹಳೆಯ ವೈರಿ ಆಸ್ಟ್ರೇಲಿಯಾ ಎದುರಿನ ಸೋಲು ಅದು. ಆ ಭವ್ಯ ಕ್ರೀಡಾಂಗಣದಲ್ಲಿದ್ದ ಸುಮಾರು ಒಂದು ಲಕ್ಷ ಪ್ರೇಕ್ಷಕರನ್ನು ಆಸ್ಟ್ರೇಲಿಯಾ ಸ್ತಬ್ಧಗೊಳಿಸಿತ್ತು. ತಮ್ಮ ನೆಚ್ಚಿನ ಆಟಗಾರರು ಮುಖ್ಯವಾದ ದಿನ ಈ ರೀತಿ ಮಂಡಿಯೂರಿದ್ದನ್ನು ನೋಡಿದ್ದ ಅಭಿಮಾನಿಗಳ ಸಂತಸವೆಲ್ಲ ಕರಗಿ, ಹತಾಶೆಯ ಕಣ್ಣೀರಾಗಿತ್ತು. ಆದರೆ ಆ ಕಣ್ಣೀರ ಹಿಂದೆಯೇ ದೃಢಸಂಕಲ್ಪವೊಂದು ರೂಪತಳೆಯಿತು. ರೋಹಿತ್ ಶರ್ಮಾ ಬ್ಯಾಟಿಂಗ್ ಮತ್ತು ತಮ್ಮ ನಾಯಕತ್ವದ ಮೂಲಕ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವ ಗಟ್ಟಿ ನಿರ್ಧಾರ ಕೈಗೊಂಡರು.
ಇದಾಗಿ 15 ತಿಂಗಳ ಅವಧಿಯಲ್ಲಿ ಎರಡು ಐಸಿಸಿ ಟ್ರೋಫಿಗಳನ್ನು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಗೆದ್ದು ತಂದರು. ಮೊದಲನೇಯದ್ದು ಹೋದ ವರ್ಷ ಜೂನ್ ತಿಂಗಳಲ್ಲಿ ಅಮೆರಿಕದಲ್ಲಿ ಜಯಿಸಿದ್ದ ಟಿ20 ವಿಶ್ವಕಪ್. ಆ ಟೂರ್ನಿಯಲ್ಲಿ ಭಾರತ ತಂಡವು 9–0 ಗೆಲುವಿನ ಅಜೇಯ ದಾಖಲೆ ಮಾಡಿತ್ತು.
ಇನ್ನೊಂದು ದುಬೈನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳಿಂದ ಜಯಿಸಿದ ಭಾರತ ಏಕದಿನ ಮಾದರಿಯಲ್ಲಿ ಹೆಜ್ಜೆಗುರುತು ಮೂಡಿಸಿತು. ಅಹಮದಾಬಾದ್ ದುಃಖವನ್ನು ಬಹುಮಟ್ಟಿಗೆ ಮರೆಸುವತ್ತ ಹೆಜ್ಜೆ ಇಟ್ಟಿತು.
ಈ ಎಲ್ಲ ಮೂರು ಅಭಿಯಾನಗಳಲ್ಲಿಯೂ ರೋಹಿತ್ ಶರ್ಮಾ ಅವರ ಪಾತ್ರ ಢಾಳಾಗಿದೆ. ಪ್ರತಿ ಬಾರಿ ಭಾರತ ತಂಡವು ಸಂಕಷ್ಟದಲ್ಲಿದ್ದಾಗ ನಾಯಕನಾಗಿ ಅಥವಾ ಬ್ಯಾಟರ್ ಆಗಿ ರಕ್ಷಿಸಲು ಧಾವಿಸಿದವರು ರೋಹಿತ್. ನ್ಯೂಜಿಲೆಂಡ್ ಎದುರಿನ ಫೈನಲ್‌ನಲ್ಲಿ ರೋಹಿತ್ ಬ್ಯಾಟಿಂಗ್ ಮಹತ್ವದ್ದಾಯಿತು. ದಶಕಗಳ ಹಿಂದಿನ ರೋಹಿತ್ ಅವರ ಆಟ ಕಣ್ಮುಂದೆ ಬಂದಿತು. ಅವರು ಗಳಿಸಿದ 76 ರನ್‌ಗಳು ಅಭಿಮಾನಿಗಳ ಮನದಲ್ಲಿ ಬಹುಕಾಲದವರೆಗೆ ಹಸಿರಾಗಿರಲಿವೆ.
ದೀರ್ಘ ವೇಳಾಪಟ್ಟಿಯ ವಿಶ್ವಕಪ್ ಟೂರ್ನಿಗಳಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಟೂರ್ನಿಯ ಮಧ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡರು. ಇದರಿಂದಾಗಿ ಭಾರತ ತಂಡವು ಸ್ವಲ್ಪಮಟ್ಟಿಗೆ ಆಲ್‌ರೌಂಡರ್ ವಿಭಾಗದಲ್ಲಿ ಸಮಸ್ಯೆಯತ್ತ ವಾಲಿತು. ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ವೇಗಿ ಮೊಹಮ್ಮದ್ ಶಮಿ ಅವರು ಮಿಶ್ರ ಫಲಿತಾಂಶ ನೀಡಿದರು. ಟಿ20 ವಿಶ್ವಕಪ್‌ನಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ತಂಡ ಕಟ್ಟಿಕೊಳ್ಳುವ ಅವಕಾಶ ಒದಗಿತು. ಆದರೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಅಲಭ್ಯತೆ ಕಾಡಿತು. ಹೋದ ವರ್ಷ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬೂಮ್ರಾ ಸರಣಿಶ್ರೇಷ್ಠರಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೂ ಬೂಮ್ರಾ ಉತ್ತುಂಗ ಸಾಧನೆ ಮಾಡಿದ್ದರು.
ಈ ಪರಿಸ್ಥಿತಿಯಲ್ಲಿಯೂ ಭಾರತ ತಂಡವು ರೂಪುಗೊಂಡಿದ್ದು ಅಮೋಘ. ಆದರೆ ಈ ಟೂರ್ನಿಯಲ್ಲಿ ಶಮಿ ಅವರು ಮೊದಲಿನಷ್ಟು ಪರಿಣಾಮಕಾರಿಯಾಗಿ ಕಾಣಲಿಲ್ಲ. ಭಾರತವು ತನ್ನ ಇದುವರೆಗಿನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಲ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್‌ಗೆ ತಕ್ಕಂತೆ ತಂಡವನ್ನು ಕಣಕ್ಕಿಳಿಸಿದರು. ಟೂರ್ನಿಯ ಎಲ್ಲ ಐದು ಪಂದ್ಯಗಳಲ್ಲಿಯೂ ಟಾಸ್ ಸೋತ ನಿರಾಸೆಯನ್ನು ಮೀರಿ ನಿಂತಿತು. ಕೊನೆ ಕ್ಷಣದಲ್ಲಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ವರುಣ್ ಚಕ್ರವರ್ತಿ ಅವರು ಸಮರ್ಥಿಸಿಕೊಂಡರು.
ಹೈಬ್ರಿಡ್ ಮಾದರಿಯ ಕಾರಣಕ್ಕಾಗಿ ದುಬೈ ಒಂದೇ ತಾಣದಲ್ಲಿ ಭಾರತ ತಂಡವುಎಲ್ಲ ಪಂದ್ಯಗಳನ್ನು ಆಡಿತು. ಇದು ತಂಡಕ್ಕೆ ಅಜೇಯವಾಗುಳಿಯಲು ಅನುಕೂಲವಾಯಿತೆ? ಇದರಿಂದಾಗಿ ಸತತ ಎರಡನೇ ಐಸಿಸಿ ಪ್ರಶಸ್ತಿ ಗೆದ್ದಿತೇ?
ಈ ಪ್ರಶ್ನೆಗಳಿಗೆ ಹೌದು ಎನ್ನುವವರು ಕಣ್ಣು ತೆರೆಯಿರಿ ಮತ್ತು ನೈಜ ಸುವಾಸನೆಯನ್ನು ಆಸ್ವಾದಿಸಿ. ಏಕೆಂದರೆ; ‘ಭಾರತ ಶ್ರೇಷ್ಠ ತಂಡ. ಸಂದೇಹವೇ ಇಲ್ಲ’ ಎಂದು ನಾಯಕ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.