ಬೆನ್ ಸ್ಟೋಕ್ಸ್, ರವೀಂದ್ರ ಜಡೇಜ
(ಪಿಟಿಐ ಚಿತ್ರ)
ಮ್ಯಾಂಚೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸುವಲ್ಲಿ ಯಶ ಕಂಡಿದೆ.
ಕೊನೆಯ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜ ಅಜೇಯ ಶತಕಗಳನ್ನು ಗಳಿಸುವ ಮೂಲಕ ಭಾರತಕ್ಕೆ ನೆರವಾದರು.
ಲಾರ್ಡ್ಸ್ ಪಂದ್ಯದಂತೆ ಈ ಪಂದ್ಯದಲ್ಲೂ ಅಂತಿಮ ದಿನದಾಟದಲ್ಲಿ ಹಲವಾರು ನಾಟಕೀಯ ಸನ್ನಿವೇಶಗಳು ಸೃಷ್ಟಿಯಾಗಿದ್ದವು.
ದಿನದ ಅಂತಿಮ ಅವಧಿಯಲ್ಲಿ ಸುಂದರ್ ಹಾಗೂ ಜಡೇಜ ಅವರಿಗೆ ವೈಯಕ್ತಿಕ ಮೈಲುಗಲ್ಲು ತಲುಪುದನ್ನು ನಿರಾಕರಿಸುವುದಕ್ಕಾಗಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಪಂದ್ಯ ಡ್ರಾಗೊಳಿಸುವ ಪ್ರಸ್ತಾಪವನ್ನು ಮುಂದಿರಿಸಿದರು.
ಆದರೆ ಈ ಪ್ರಸ್ತಾಪವನ್ನು ಜಡೇಜ ಹಾಗೂ ಸುಂದರ್ ನಯವಾಗಿಯೇ ನಿರಾಕರಿಸಿದರು. ಇದು ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ಆಟಗಾರರ ಆಕ್ರೋಶಕ್ಕೆ ಕಾರಣವಾಯಿತು.
ಆದರೆ ಏಕಾಗ್ರತೆಯಿಂದ ಬ್ಯಾಟಿಂಗ್ ಮುಂದುವರಿಸಿದ ಜಡೇಜ ಹಾಗೂ ಸುಂದರ್ ಆಕರ್ಷಕ ಶತಕಗಳನ್ನು ಪೂರ್ಣಗೊಳಿಸಿದರು.
ಪ್ರಸ್ತುತ ಘಟನೆಯು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪಂದ್ಯ ಮುಗಿದ ಬಳಿಕವೂ ಜಡೇಜ ಹಾಗೂ ಸುಂದರ್ ಅವರತ್ತ ಬೆನ್ ಸ್ಟೋಕ್ಸ್ ಅಸಮಾಧಾನವನ್ನು ಹೊರಹಾಕಿದರು. ಈ ಎಲ್ಲ ದೃಶ್ಯಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಆದರೆ ಸ್ಟೋಕ್ಸ್ ನಡೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರಿಂದಲೇ ಟೀಕೆಗಳು ವ್ಯಕ್ತವಾಗಿವೆ. ವಿರೋಚಿತ ಹೋರಾಟದಿಂದ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿರುವ ಜಡೇಜ ಹಾಗೂ ಸುಂದರ್ ಶತಕ ಗಳಿಸಲು ಅರ್ಹರಾಗಿದ್ದರು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಹಾಗೂ ಕೋಚ್ ಗೌತಮ್ ಗಂಭೀರ್ ಸಹ ಇದನ್ನೇ ಉಲ್ಲೇಖಿಸಿದ್ದಾರೆ.
ಒಟ್ಟಿನಲ್ಲಿ ಇಂಗ್ಲೆಂಡ್ ಹಾಗೂ ಭಾರತ ಆಟಗಾರರ ನಡುವಣ ಕಾವೇರಿದ ವಾತಾವರಣ ಐದನೇ ಹಾಗೂ ಕೊನೆಯ ಟೆಸ್ಟ್‌ನಲ್ಲೂ ಮುಂದುವರಿಯಲಿದೆ ಎಂಬುದು ಇದರಿಂದ ಸಾಬೀತಾಗಿದೆ. ಸರಣಿಯನ್ನು ಸಮಬಲಗೊಳಿಸುವ ನಿಟ್ಟಿನಲ್ಲಿ ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.