ಅಭಿಷೇಕ್ ಶರ್ಮಾ
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಿ ನಲ್ವತ್ತೊಂದು ವರ್ಷಗಳು ಮತ್ತು ಹದಿನೇಳನೇ ಆವೃತ್ತಿ...
ಆದರೆ ಇದೇ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯು ಒಂದು ರೀತಿಯಲ್ಲಿ ಉಭಯ ತಂಡಗಳ ನಡುವಣ ‘ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿ’ಯಂತೆ ಬಿಂಬಿತವಾಗಿದೆ. ಏಷ್ಯಾ ಖಂಡದ ಈ ‘ಬದ್ಧ ಪ್ರತಿಸ್ಪರ್ಧಿ’ ತಂಡಗಳು ಸತತ ಮೂರನೇ ಭಾನುವಾರ ಹಣಾಹಣಿ ನಡೆಸಲಿವೆ.
ಏನೇ ಆಗಲಿ, ಈ ಬಾರಿಯ ಏಷ್ಯಾ ಕಪ್ ಟಿ20 ಟೂರ್ನಿಯು ನೆನಪಿನಲ್ಲಿ ಉಳಿಯುವಂತಿದೆ. ಏಪ್ರಿಲ್ 22ರ ಘಟನೆಯು ಕೇಂದ್ರಬಿಂದು ವಾದ ಟೂರ್ನಿ ಇದು. ಕಳೆದೆರಡೂ ಪಂದ್ಯಗಳಲ್ಲಿ ಭಾರತದ ಆಟಗಾರರು ಪಾಕಿಸ್ತಾನ ತಂಡದವರ ಹಸ್ತಲಾಘವ ಮಾಡಲಿಲ್ಲ ಮತ್ತು ಪರಸ್ಪರ ಅಭಿನಂದಿಸಲೂ ಇಲ್ಲ. ಪಾಕ್ ಆಟಗಾರರೂ ಬಿರುನುಡಿಗಳನ್ನು ಪ್ರಯೋಗಿಸಿದರು. ಪ್ರಚೋದನಾಕಾರಿ ಸಂಜ್ಞೆಗಳನ್ನು ಪ್ರದರ್ಶಿಸಿದರು. ಅಲ್ಲದೇ ಒಂದು ಹಂತದಲ್ಲಿ ಪಂದ್ಯ ಬಹಿಷ್ಕರಿಸುವ ಬೆದರಿಕೆಯನ್ನೂ ಒಡ್ಡಿದ್ದರು.
ಪಂದ್ಯ ರೆಫರಿ (ಆ್ಯಂಡಿ ಪೈಕ್ರಾಫ್ಟ್) ಅವರ ಕಾರ್ಯವೈಖರಿಯ ಕುರಿತು ವಿಚಾರಣೆ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ತಂಡದ ಸಾಹಿಬ್‌ಝಾದಾ ಫರ್ಹಾನ್ ಮತ್ತು ಶಾಹೀನ್ ಶಾ ಆಫ್ರಿದಿ ಅವರು ಕೂಡ ಕೆಲವು ನಿಯಮ ಉಲ್ಲಂಘನೆಗಳ ಕಾರಣ ಅಧಿಕಾರಿಗಳ ಮುಂದೆ ಹಾಜ ರಾದರು. ಕ್ರಿಕೆಟ್ ಹಿನ್ನೆಲೆಗೆ ಸರಿಯಿತು. ಚರ್ಚಾಸ್ಪದ ಸಂಗತಿಗಳು ಮುನ್ನೆಲೆಗೆ ಬಂದವು. ದುಬೈ ಅಂತರ ರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಆಘಾ ಅವರು ಭಾನುವಾರ ಟಾಸ್ ಮಾಡಲು ಬಂದಾಗ ಕೋಟ್ಯಂತರ ಕಣ್ಣುಗಳ ಕೌತುಕದ ನೋಟಗಳು ಇರುವುದು ಖಚಿತ.
ಟೂರ್ನಿಯುದ್ದಕ್ಕೂ ಎಲ್ಲ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಶುಕ್ರವಾರ ತಡರಾತ್ರಿ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ಎದುರು ‘ಸೂಪರ್ ಓವರ್’ನಲ್ಲಿ ಜಯಿಸಿತ್ತು. ಲಂಕಾದ ಪಥುಮ್ ನಿಸಾಂಕಾ ಮತ್ತು ಕುಸಾಲ ಪೆರೆರಾ ಅವರು ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಈ ಪಂದ್ಯದಲ್ಲಿ ಆಡಿದ್ದ ವೇಗದ ಜೋಡಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರು ಜೊತೆಗೂಡಿ 100 ರನ್
(8 ಓವರ್‌ಗಳಲ್ಲಿ) ಬಿಟ್ಟು ಕೊಟ್ಟಿದ್ದರು. ಲಂಕಾ ಬೆನ್ನಟ್ಟಿದ್ದ 202 ರನ್‌ಗಳ ಗುರಿಯ ಅರ್ಧದಷ್ಟು ರನ್‌ಗಳು ಈ ಓವರ್‌ಗಳಲ್ಲಿಯೇ ಲಭಿಸಿದ್ದವು. ಜಸ್‌ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಅಷ್ಟೇನೂ ಉದಾರಿಯಾಗಿರಲಿಲ್ಲ. ಆದರೆ ಮೊದಲ ಓವರ್ ಬೌಲಿಂಗ್ ಮಾಡಿದ ನಂತರ ಹಾರ್ದಿಕ್ ಅವರು ಮೈದಾನದಿಂದ ಹೊರನಡೆದಿದ್ದರು. ಅಭಿಷೇಕ್ ಶರ್ಮಾ ಕೂಡ ಹತ್ತನೇ ಓವರ್ ಸಂದರ್ಭದಲ್ಲಿ ಮೈದಾನ ತೊರೆದಿದ್ದರು. ಆದ್ದರಿಂದ ಅವರ ಫಿಟ್‌ನೆಸ್ ಕುರಿತ ಆತಂಕವನ್ನು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ದೂರ ಮಾಡಿದ್ದಾರೆ. ಅವರಿಬ್ಬರೂ ಸ್ನಾಯ ಸೆಳೆತದಿಂದ ಚೇತರಿಸಿಕೊಂಡಿದ್ದಾರೆ.
ಈಚೆಗೆ ಬಾಂಗ್ಲಾದೇಶ ಎದುರಿನ ಪಂದ್ಯವು ಪಾಕ್ ತಂಡಕ್ಕೆ ಸೆಮಿಫೈನಲ್ ಆಗಿತ್ತು. ಅದರ 11ನೇ ಓವರ್‌ನಲ್ಲಿ 49 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಪಾಕ್ ನಂತರ ಪುಟಿದೆದ್ದು ಜಯಿಸಿತ್ತು. ಆದರೆ ಜೇಕರ್ ಅಲಿ ನಾಯಕತ್ವದ ಬಾಂಗ್ಲಾ ಬಳಗವು ತೋರಿದ ಔದಾರ್ಯವನ್ನು ಪಾಕ್ ತಂಡವು ಫೈನಲ್‌ನಲ್ಲಿ ಭಾರತದಿಂದ ನಿರೀಕ್ಷಿಸುವಂತಿಲ್ಲ.
ಭಾರತ ತಂಡ ಈ ಟೂರ್ನಿಯಲ್ಲಿ 6–0 ಗೆಲುವಿನ ಮುನ್ನಡೆ ಹೊಂದಿದೆ. ಅಭಿಷೇಕ್ ಸ್ಫೋಟಕ ಶೈಲಿ ಬ್ಯಾಟಿಂಗ್‌ನಿಂದಾಗಿ ತಂಡವು ಪವರ್ ಪ್ಲೇ ಹಂತಗಳಲ್ಲಿ ರನ್ ಸೂರೆ ಮಾಡಿದೆ. ಎಡಗೈ ಬ್ಯಾಟರ್ ಅಭಿಷೇಕ್ ಒಟ್ಟು 309 ರನ್ ಗಳಿಸಿದ್ದಾರೆ. ಅದರಲ್ಲಿ ಮೂರು ಭರ್ಜರಿ ಅರ್ಧಶತಕಗಳು ಸೇರಿವೆ. ಅವರ ಆರಂಭಿಕ ಜೊತೆಗಾರ ಮತ್ತು ಉಪನಾಯಕ ಶುಭಮನ್ ಗಿಲ್ ಹಾಗೂ ನಾಯಕ ಸೂರ್ಯ ಅವರೂ ಲಯಕ್ಕೆ ಮರಳಬೇಕಿದೆ.
ಈ ಟೂರ್ನಿಯಲ್ಲಿ ಇದುವರೆಗೆ ಅಭಿಷೇಕ್ ಮತ್ತು ಶಾಹೀನ್ ಶಾ ಆಫ್ರಿದಿ ಅವರ ಜಿದ್ದಾಜಿದ್ದಿಯು ಬಹಳಷ್ಟು ಗಮನ ಸೆಳೆದಿದೆ. ಅಭಿಷೇಕ್ ಅವರು ಆಫ್ರಿದಿಯನ್ನು ಎದುರಿಸುವ ರೀತಿಯು ಭಾರತದ ಇನಿಂಗ್ಸ್‌ಗೆ ಮುನ್ನುಡಿ ಬರೆಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದ ಈ ಪಂದ್ಯದಲ್ಲಿಯೂ ಅವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದೆ.
ಈ ಎಲ್ಲ ಬೆಳವಣಿಗೆಗಳಾಚೆ ಪಾಕಿಸ್ತಾನ ತಂಡದ ಮುಂದೆ ಸುವರ್ಣಾವಕಾಶವೂ ಇದೆ. ಕಳೆದೆರಡು ವಾರಗಳಲ್ಲಿ ಅನುಭವಿಸಿದ ಹತಾಶೆಗಳಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಫೈನಲ್‌ನಲ್ಲಿದೆ. ಟೂರ್ನಿಯ ಕಳೆದೆರಡೂ ಹಣಾಹಣಿ ಗಳಲ್ಲಿ ಭಾರತವು ಪಾಕ್ ವಿರುದ್ಧ ಮೇಲುಗೈ ಸಾಧಿಸಿದೆ. ಇದೀಗ ‘ಹ್ಯಾಟ್ರಿಕ್’ ಜಯದೊಂದಿಗೆ ಟ್ರೋಫಿಗೆ ಮುತ್ತಿಡಲು ಕಾತರಿಸಿದೆ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸೋನಿ ಸ್ಪೋರ್ಟ್ಸ್
ನಾನು 2007ರಿಂದ ಕ್ರಿಕೆಟ್ ಆಡುತ್ತಿದ್ದೇನೆ. ಆಗಲೂ ಭಾರತ–ಪಾಕ್ ನಡುವಣ ಸಂಬಂಧ ಚೆನ್ನಾಗಿರಲಿಲ್ಲ. ಆದರೆ ಯಾವತ್ತೂ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡದಿರುವುದನ್ನು ನೋಡಿರಲಿಲ್ಲಸಲ್ಮಾನ್ ಆಘಾ, ಪಾಕಿಸ್ತಾನ ತಂಡದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.