ಭಾರತ ಹಾಗೂ ಪಾಕಿಸ್ತಾನ ತಂಡಗಳ ಅಭಿಮಾನಿಗಳು
–ಪಿಟಿಐ ಚಿತ್ರ
ನವದೆಹಲಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಭಾರತ ಮತ್ತು ಪಾಕ್ ಕ್ರಿಕೆಟ್ ಪಂದ್ಯ ಕುರಿತಾದ ನಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ಪೀಠವನ್ನು ಒತ್ತಾಯಿಸಿದ್ದಾರೆ.
‘ಕ್ರಿಕೆಟ್ ಪಂದ್ಯವನ್ನು ಭಾನುವಾರಕ್ಕೆ ನಿಗದಿಪಡಿಸಲಾಗಿದೆ. ನಮ್ಮ ಅರ್ಜಿಯನ್ನು ಶುಕ್ರವಾರದಂದು ತುರ್ತು ವಿಚಾರಣೆಗೆ ಪಟ್ಟಿ ಮಾಡದಿದ್ದರೆ ನಿಷ್ಪ್ರಯೋಜಕವಾಗುತ್ತದೆ’ ಎಂದು ವಕೀಲರು ತಿಳಿಸಿದ್ದಾರೆ.
‘ಏನು ಆತುರ? ಇದು ಭಾನುವಾರ ನಡೆಯಲಿರುವ ಪಂದ್ಯವಾಗಿದ್ದು, ಈಗ ನಾವು ಏನು ಮಾಡಬಹುದು?, ಪಂದ್ಯ ನಡೆಯಲಿ ಬಿಡಿ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದರಿಂದ ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಉರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯವು ಸಾಮರಸ್ಯ ಮತ್ತು ಸ್ನೇಹವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನಮ್ಮ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನದೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಆ ದೇಶದೊಂದಿಗೆ ಆಟವಾಡುವುದರಿಂದ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಭಾರತ–ಪಾಕ್ ಕ್ರಿಕೆಟ್ ಪಂದ್ಯ ನಡೆಯುವುದರಿಂದ ಭಯೋತ್ಪಾದಕರಿಂದ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಭಾವನೆಗಳಿಗೆ ನೋವುಂಟಾಗುತ್ತದೆ. ಜತೆಗೆ, ದೇಶದ ಘನತೆ ಮತ್ತು ನಾಗರಿಕರ ಭದ್ರತೆಯು ಮನರಂಜನೆಗಿಂತ ಮುಖ್ಯವಾಗಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಕ್ರಿಕೆಟ್ ಪಂದ್ಯವು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾರಕವಾಗುತ್ತದೆ. ಸಶಸ್ತ್ರ ಪಡೆಗಳ ನೈತಿಕತೆಯನ್ನು ಕುಗ್ಗಿಸುತ್ತದೆ ಎಂದೂ ಅರ್ಜಿದಾರರು ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.