
ಭಾರತ ತಂಡದ ವೇಗದ ಬೌಲರ್‌ಗಳಾದ ಹಾರ್ದಿಕ್ ಪಾಂಡ್ಯ, ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಸಂಭ್ರಮ. (ಎಡ ಚಿತ್ರ) ಎರಡು ವಿಕೆಟ್ ಪಡೆದ ವರುಣ್ ಚಕ್ರವರ್ತಿ
ಪಿಟಿಐ ಚಿತ್ರಗಳು
ಧರ್ಮಶಾಲಾ: ಭಾರತ ತಂಡದ ವೇಗದ ಬೌಲರ್‌ಗಳು ಅಮೋಘವಾದ ಬೌಲಿಂಗ್ ಮಾಡಿದರು. ಅವರ ದಾಳಿಗೆ ದಕ್ಷಿಣ ಅಫ್ರಿಕಾದ ಬ್ಯಾಟರ್‌ಗಳು ತತ್ತರಿಸಿದರು. ಇದರಿಂದಾಗಿ ಆತಿಥೇಯ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಎಡಗೈ ವೇಗಿ ಅರ್ಷದೀಪ್ ಸಿಂಗ್ (13ಕ್ಕೆ2), ಹರ್ಷಿತ್ ರಾಣಾ (34ಕ್ಕೆ2) ಮತ್ತು ಹಾರ್ದಿಕ್ ಪಾಂಡ್ಯ (23ಕ್ಕೆ1) ಅವರ ದಾಳಿಗೆ ಪ್ರವಾಸಿ ತಂಡವು 117 ರನ್‌ಗಳ ಸಾಧಾರಣ ಮೊತ್ತಕ್ಕೆ ಕುಸಿಯಿತು. ಅದಕ್ಕುತ್ತರವಾಗಿ ಆತಿಥೇಯ ತಂಡವು 15.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 120 ರನ್ ಗಳಿಸಿತು. 7 ವಿಕೆಟ್‌ಗಳಿಂದ ಜಯಿಸಿದ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು.
ಆರಂಭಿಕ ಜೋಡಿ ಅಭಿಷೇಕ್ ಶರ್ಮಾ (35; 18ಎ, 4X3, 6X3) ಮತ್ತು ಶುಭಮನ್ ಗಿಲ್ (28; 28ಎ, 4X5) ಮೊದಲ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡದ ಗೆಲುವನ್ನು ಮತ್ತಷ್ಟು
ಸುಲಭಗೊಳಿಸಿದರು.
ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರವಾಸಿ ಬಳಗದ ಏಡನ್ ಮರ್ಕರಂ (61; 46 ಎಸೆತ) ಅವರು ಏಕಾಂಗಿ ಹೋರಾಟ ಮಾಡಿದರು. ಅದರಿಂದಾಗಿ ತಂಡವು ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಯಿತು. ಇಲ್ಲದಿದ್ದರೆ ಅಲ್ಪ ಮೊತ್ತಕ್ಕೆ ಕುಸಿಯುವ ಸಾಧ್ಯತೆ ಇತ್ತು. 10 ಓವರ್‌ಗಳಲ್ಲಿ 44 ರನ್‌ಗಳಿಗೇ 5 ವಿಕೆಟ್ ಕಳೆದುಕೊಂಡಿತ್ತು.
ಸರಣಿಯ ಎರಡನೇ ಪಂದ್ಯದಲ್ಲಿ ಬಹಳಷ್ಟು ದಂಡನೆಗೊಳಗಾಗಿದ್ದ ಭಾರತದ ಬೌಲರ್‌ಗಳು ಇಲ್ಲಿ ತಿರುಗೇಟು ನೀಡಿದರು. ಅದರಲ್ಲೂ ಅರ್ಷದೀಪ್ ಅವರು ತಮ್ಮ ಮೊದಲ ಓವರ್‌ನಲ್ಲಿಯೇ ರೀಜಾ ಹೆನ್ರಿಕ್ಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಖಾತೆ ತೆರೆಯುವ ಮುನ್ನವೇ ರೀಜಾ ನಿರ್ಗಮಿಸಿದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಹರ್ಷಿತ್ ರಾಣಾ ಅವರ ಚುರುಕಾದ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಎಲ್‌ಬಿ ಬಲೆಗೆ ಬಿದ್ದರು. ತಮ್ಮ ಇನ್ನೊಂದು ಓವರ್‌ನಲ್ಲಿಯೂ ಹರ್ಷಿತ್ ಅವರು ಡೆವಾಲ್ಡ್ ಬ್ರೆವಿಸ್ (2 ರನ್) ಅವರ ವಿಕೆಟ್ ಉರುಳಿಸಿದರು. ಆಗ ತಂಡದ ಮೊತ್ತವು ಕೇವಲ ಏಳು ರನ್‌ಗಳಾಗಿದ್ದವು.
ಪವರ್‌ಪ್ಲೇ ನಂತರದ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಟ್ರಿಸ್ಟನ್ ಸ್ಟಬ್ಸ್ ಔಟಾದರು. ಹಾರ್ದಿಕ್ ಅವರಿಗೆ ಟಿ20 ಕ್ರಿಕೆಟ್‌ನಲ್ಲಿ ನೂರನೇ ವಿಕೆಟ್ ಆದರು.
ಆದರೆ ಇನ್ನೊಂದು ಬದಿಯಲ್ಲಿದ್ದ ಏಡನ್ ಮರ್ಕರಂ ಮಾತ್ರ ರನ್ ಸೂರೆ ಮಾಡುವುದರಲ್ಲಿ ಮಗ್ನರಾಗಿದ್ದರು. ಅರ್ಧಶತಕ ಗಳಿಸಿದರು. ಅವರ ಆಟಕ್ಕೂ ಅರ್ಷದೀಪ್ ಅವರು ತಮ್ಮ ಎರಡನೇ ಸ್ಪೆಲ್‌ನಲ್ಲಿ ತಡೆಯೊಡ್ಡಿದರು. ಮತ್ತೊಂದು ಬದಿಯಿಂದ ಸ್ಪಿನ್ನರ್ ವರುಣ್ ಚಕ್ರವರ್ತಿ (11ಕ್ಕೆ2) ಅವರೂ ಪರಿಣಾಮಕಾರಿ ದಾಳಿ ನಡೆಸಿದರು. ಅವರಿಗೆ ಕುಲದೀಪ್ ಯಾದವ್ (12ಕ್ಕೆ2) ಕೂಡ ಕೈ ಜೋಡಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪಡೆಯು ಕುಸಿಯಿತು.
ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು.
100 ವಿಕೆಟ್
ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಿದರು. ಅದರೊಂದಿಗೆ, ಅರ್ಷದೀಪ್ ಸಿಂಗ್ (112) ಹಾಗೂ ಜಸ್‌ಪ್ರೀತ್ ಬೂಮ್ರಾ (101) ಅವರ ಸಾಲಿಗೆ ಹಾರ್ದಿಕ್ ಸೇರ್ಪಡೆಯಾದರು.
50 ವಿಕೆಟ್
ಬಲಗೈ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಿದರು. ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ (32) ಈ ಸಾಧನೆ ಮಾಡಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಕುಲದೀಪ್ ಯಾದವ್ (30) ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.