ಕಟಕ್: ಹಲವು ದಿನಗಳಿಂದ ಫಾರ್ಮ್ ಕಳೆದುಕೊಂಡು ಅನುಭವಿಸಿದ್ದ ಒತ್ತಡ ಮತ್ತು ಕ್ರಿಕೆಟ್‌ನಿಂದ ತಮ್ಮ ನಿವೃತ್ತಿಯ ಕುರಿತ ಪ್ರಶ್ನೆಗಳನ್ನು ಎದುರಿಸುವ ಮುಜುಗರಗಳೆಲ್ಲವನ್ನೂ ರೋಹಿತ್ ಶರ್ಮಾ ಅವರು ಭಾನುವಾರ ರಾತ್ರಿ ಗಂಟುಕಟ್ಟಿ ಬೌಂಡರಿಯಾಚೆ ಬೀಸಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 32ನೇ ಶತಕ ದಾಖಲಿಸಿದ ಮುಂಬೈಕರ್ ಮೆರೆದಾಡಿದರು.
ಅವರ ಆಟದ ಬಲದಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದಿತು. 3 ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.
ಬಾರಾಬತಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 49.5 ಓವರ್‌ಗಳಲ್ಲಿ 304 ಗಳಿಸಿದ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (35ಕ್ಕೆ3) ನೆರವಾದರು.
ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಭಾರತಕ್ಕೆ 37 ವರ್ಷದ ರೋಹಿತ್ 90 ಎಸೆತಗಳಲ್ಲಿ 119 ರನ್ ಗಳಿಸಿ ಗೆಲುವಿನ ಕಾಣಿಕೆ ನೀಡಿದರು. ಇದೇ ತಿಂಗಳು ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ರೋಹಿತ್ ಲಯಕ್ಕೆ ಮರಳಿದ್ದು ಭಾರತದ ಪಾಳೆಯದಲ್ಲಿ ಸಂತಸ ಮೂಡಿಸಿತು.
ಅಭಿಮಾನಿಗಳ ಪಾಲಿಗೆ ಬಹುಕಾಲದ ನಂತರ ರೋಹಿತ್ ಅವರ ಬ್ಯಾಟಿಂಗ್ ಆರ್ಭಟ ನೋಡುವ ಅವಕಾಶ ಒದಗಿಬಂದಿತು. ಅವರ ಆಟದಲ್ಲಿ 7 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳು ಸಿಡಿದವು. ಅವರ ಮಿಂಚಿನ ಆಟದಿಂದಾಗಿ ತಂಡವು ಕೇವಲ 44.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಸರಣಿಯ 3ನೇ ಪಂದ್ಯವು ಬುಧವಾರ ಅಹಮದಾಬಾದಿನಲ್ಲಿ ನಡೆಯಲಿದೆ.
ರೋಹಿತ್ ಅಷ್ಟೇ ಅಲ್ಲ. ಶುಭಮನ್ ಗಿಲ್ (60; 52ಎಸೆತ, 4X9, 6X1) ಅವರ ಆಟವೂ ಸೊಗಸಾಗಿತ್ತು. ರೋಹಿತ್ ಆರ್ಭಟದಲ್ಲಿ ಗಿಲ್ ಬ್ಯಾಟಿಂಗ್ ಎದ್ದು ಕಾಣಲಿಲ್ಲ ಅಷ್ಟೇ. ಆದರೆ ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 136 ರನ್ ಸೇರಿಸಿ ಗಟ್ಟಿಮುಟ್ಟಾದ ಅಡಿಪಾಯ ಹಾಕಿದರು. ಇವರಿಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ 6ನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಯಶಸ್ವಿ ಜೈಸ್ವಾಲ್ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ಗಿಲ್ ಇನಿಂಗ್ಸ್ ಆರಂಭಿಸಿದರು.
ಗಿಲ್ ಔಟಾದ ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ (5 ರನ್) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಆದಿಲ್ ರಶೀದ್ ಹಾಕಿದ ಲೆಗ್‌ಬ್ರೇಕ್ ಎಸೆತವನ್ನು ಆಡುವ ಭರದಲ್ಲಿ ಕೊಹ್ಲಿ ಅವರು ವಿಕೆಟ್ ಹಿಂದಿದ್ದ ಫಿಲಿಪ್ ಸಾಲ್ಟ್‌ಗೆ ಕ್ಯಾಚಿತ್ತರು. ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಮಂಡಿನೋವಿನಿಂದ ವಿಶ್ರಾಂತಿ ಪಡೆದಿದ್ದರು.
ಕ್ರೀಸ್‌ಗೆ ಬಂದ ಇನ್ನೊಬ್ಬ ಮುಂಬೈಕರ್ ಶ್ರೇಯಸ್ ಅಯ್ಯರ್ (44 ರನ್) ಅವರು ರೋಹಿತ್ ಜೊತೆಗೂಡಿ 70 ರನ್ ಸೇರಿಸಿದರು. ಲಿವಿಂಗ್‌ಸ್ಟೋನ್ ಬೌಲಿಂಗ್‌ನಲ್ಲಿ ಫುಲ್ ಟಾಸ್ ಎಸೆತವನ್ನು ಹೊಡೆದ ರೋಹಿತ್ ಅವರು ರಶೀದ್ ಪಡೆದ ಆಕರ್ಷಕ ಕ್ಯಾಚ್‌ಗೆ ಔಟಾದರು. ಅದರೊಂದಿಗೆ ರೋಹಿತ್ ಅವರ ಸೊಗಸಾದ ಬ್ಯಾಟಿಂಗ್‌ಗೆ ತೆರೆ ಬಿತ್ತು. ಸುಂದರ ಫ್ಲಿಕ್, ಪುಲ್ ಮತ್ತು ಡ್ರೈವ್‌ಗಳ ಮೂಲಕ ಬೌಲರ್‌ಗಳ ಬೆವರಿಳಿಸಿದ ರೋಹಿತ್ ಆಟ ನೋಡುಗರ ಮನಕ್ಕೆ ಮುದ ನೀಡಿತು.
ನಂತರ ಶ್ರೇಯಸ್ ಕೂಡ ರನ್‌ಔಟ್ ಆದರು. ಕೆ.ಎಲ್. ರಾಹುಲ್ (10 ರನ್) ಮತ್ತು ಹಾರ್ದಿಕ್ ಪಾಂಡ್ಯ (10 ರನ್) ಕೂಡ ಅಗ್ಗಕ್ಕೆ ವಿಕೆಟ್ ಚೆಲ್ಲಿದರು. ಆದರೂ ಗೆಲುವಿನ ಅವಕಾಶ ಭಾರತಕ್ಕೆ ಹೆಚ್ಚು ಇತ್ತು. ಆದ್ದರಿಂದ ಅಕ್ಷರ್ ಪಟೆಲ್ (ಅಜೇಯ 41) ಮತ್ತು ರವೀಂದ್ರ ಜಡೇಜ (ಅಜೇಯ 11) ಅವರು ತಾಳ್ಮೆಯಿಂದ ಆಡಿದರು. ಇನಿಂಗ್ಸ್‌ನಲ್ಲಿ ಇನ್ನೂ 33 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ದ್ರಾವಿಡ್ ದಾಖಲೆ ಮೀರಿದ ರೋಹಿತ್
ರೋಹಿತ್ ಶರ್ಮಾ ಅವರು ಇಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮೀರಿನಿಂತರು.
ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 10,987 ರನ್ ಗಳಿಸಿದರು. ಇದರೊಂದಿಗೆ ದ್ರಾವಿಡ್ (10,889 ) ದಾಖಲೆ ಮೀರಿದರು. 11 ಸಾವಿರ ರನ್ ಕ್ಲಬ್ ಸೇರಲು ರೋಹಿತ್ ಅವರಿಗೆ ಇನ್ನೂ 13 ರನ್‌ಗಳು ಮಾತ್ರ ಬೇಕು.
ಕೆಟ್ಟು ಹೋದ ಫ್ಲಡ್‌ಲೈಟ್
ಭಾರತ ತಂಡದ ಬ್ಯಾಟಿಂಗ್ ನಡೆಯುವ ಹೊತ್ತಿನಲ್ಲಿ ಕ್ರೀಡಾಂಗಣದ ಫ್ಲಡ್‌ಲೈಟ್‌ಗಳಲ್ಲಿ ಸಮಸ್ಯೆ ತಲೆದೋರಿತು. ಇದರಿಂದಾಗಿ ಬೆಳಕಿನಲ್ಲಿ ವ್ಯತ್ಯಾಸ ಕಂಡುಬಂದಿತು. ಆದ್ದರಿಂದ 35 ನಿಮಿಷ ಆಟ ಸ್ಥಗಿತವಾಯಿತು. ಈ ಹಂತದಲ್ಲಿ ರೋಹಿತ್ 29 ರನ್ ಗಳಿಸಿ ಆಡುತ್ತಿದ್ದರು.
ಫ್ಲಡ್‌ಲೈಟ್‌ಗಳು ದುರಸ್ತಿಯಾದ ನಂತರ ಮತ್ತೆ ಆಟ ಆರಂಭವಾಯಿತು. ರೋಹಿತ್ ಪ್ರಜ್ವಲಿಸಿದರು.
ಇಂಗ್ಲೆಂಡ್: 304 (49.5 ಓವರ್‌ಗಳಲ್ಲಿ)
ಸಾಲ್ಟ್ ಸಿ ಜಡೇಜ ಬಿ ವರುಣ್ 26 (29ಎ, 4x2, 6x1)
ಡಕೆಟ್ ಸಿ ಪಾಂಡ್ಯ ಬಿ ಜಡೇಜ 65 (56ಎ, 4x10)
ರೂಟ್ ಸಿ ಕೊಹ್ಲಿ ಬಿ ಜಡೇಜ 69 (72ಎ, 4x6)
ಬ್ರೂಕ್ ಸಿ ಶುಭಮನ್ ಬಿ ಹರ್ಷಿತ್ 31 (52ಎ, 4x3, 6x1)
ಬಟ್ಲರ್ ಸಿ ಶುಭಮನ್ ಬಿ ಪಾಂಡ್ಯ 34 (35ಎ, 4x2)
ಲಿವಿಂಗ್‌ಸ್ಟೋನ್ ರನೌಟ್ (ಅಯ್ಯರ್/ರಾಹುಲ್) 41 (32ಎ, 4x2, 6x2)
ಓವರ್ಟನ್ ಸಿ ಶುಭಮನ್ ಬಿ ಜಡೇಜ 6 (10ಎ)
ಅಟ್ಕಿನ್ಸನ್ ಸಿ ಕೊಹ್ಲಿ ಬಿ ಶಮಿ 3 (7ಎ)
ರಶೀದ್ ರನೌಟ್ (ಜಡೇಜ/ಹರ್ಷಿತ್/ರಾಹುಲ್) 14 (5ಎ, 4x3)
ಮಾರ್ಕ್ ರನೌಟ್ (ರಾಹುಲ್) 0 (1ಎ)
ಸಖಿಬ್ ಮೊಹಮ್ಮದ್ ಔಟಾಗದೇ 0 (1ಎ)
ಇತರೆ: 15 (ಲೆಗ್‌ಬೈ 2, ನೋಬಾಲ್ 1, ವೈಡ್ 12)
ವಿಕೆಟ್ ಪತನ: 1-81 (ಫಿಲ್ ಸಾಲ್ಟ್, 10.5), 2-102 (ಬೆನ್ ಡಕೆಟ್, 15.5), 3-168 (ಹ್ಯಾರಿ ಬ್ರೂಕ್, 29.4), 4-219 (ಜೋಸ್ ಬಟ್ಲರ್, 38.4), 5-248 (ಜೋ ರೂಟ್, 42.3), 6-258 (ಜೇಮಿ ಓವರ್ಟನ್, 44.6), 7-272 (ಗಸ್ ಅಟ್ಕಿನ್ಸನ್, 47.1), 8-297 (ಅದಿಲ್ ರಶೀದ್, 48.5), 9-304 (ಲಿಯಾಮ್ ಲಿವಿಂಗ್‌ಸ್ಟೋನ್, 49.4), 10-304 (ಮಾರ್ಕ್ ವುಡ್, 49.5)
ಬೌಲಿಂಗ್: ಮೊಹಮ್ಮದ್ ಶಮಿ 7.5–0–66–1, ಹರ್ಷಿತ್ ರಾಣಾ 9–0–62–1, ಹಾರ್ದಿಕ್ ಪಾಂಡ್ಯ 7–0–53–1, ವರುಣ್ ಚಕ್ರವರ್ತಿ 10–0–54–1, ರವೀಂದ್ರ ಜಡೇಜ 10–1–35–3, ಅಕ್ಷರ್ ಪಟೇಲ್ 6–0–32–0
ಭಾರತ: 6ಕ್ಕೆ 308 (44.3 ಓವರ್‌ಗಳಲ್ಲಿ)
ರೋಹಿತ್ ಸಿ ರಶೀದ್ ಬಿ ಲಿವಿಂಗ್‌ಸ್ಟೋನ್ 119 (90ಎ, 4x12, 6x7)
ಶುಭಮನ್ ಬಿ ಓವರ್ಟನ್ 60 (52ಎ, 4x9, 6x1)
ಕೊಹ್ಲಿ ಸಿ ಸ್ಟಾಲ್ಟ್ ಬಿ ರಶೀದ್ 5 (8ಎ, 4x1)
ಶ್ರೇಯಸ್ ರನೌಟ್ (ಬಟ್ಲರ್;ರಶೀದ್) 44 (47ಎ. 4x3, 6x1)
ಅಕ್ಷರ್ ಪಟೇಲ್ ಔಟಾಗದೇ 41 (43ಎ, 4x4)
ರಾಹುಲ್ ಸಿ ಸಾಲ್ಟ್ ಬಿ ಓವರ್ಟನ್ 10 (14ಎ, 4x1)
ಪಾಂಡ್ಯ ಸಿ ಓವರ್ಟನ್ ಬಿ ಅಟ್ಕಿನ್ಸನ್ 10 (6ಎ, 4x2)
ರವೀಂದ್ರ ಜಡೇಜ ಔಟಾಗದೇ 11 (7ಎ, 4x2)
ಇತರೆ: 8 (ಲೆಗ್‌ಬೈ 1, ವೈಡ್ 7)
ವಿಕೆಟ್ ಪತನ: 1-136 (ಶುಭಮನ್ ಗಿಲ್, 16.4), 2-150 (ವಿರಾಟ್ ಕೊಹ್ಲಿ, 19.3), 3-220 (ರೋಹಿತ್ ಶರ್ಮಾ, 29.4), 4-258 (ಶ್ರೇಯಸ್ ಅಯ್ಯರ್, 36.6), 5-275 (ಕೆ.ಎಲ್.ರಾಹುಲ್, 40.4), 6-286 (ಹಾರ್ದಿಕ್ ಪಾಂಡ್ಯ, 41.6)
ಬೌಲಿಂಗ್: ಸಖಿಬ್ ಮೊಹಮ್ಮದ್ 6–0–36–0, ಗಸ್ ಅಟ್ಕಿನ್ಸನ್ 7–0–65–1, ಮಾರ್ಕ್ ವುಡ್ 8–0–57–0, ಅದಿಲ್ ರಶೀದ್ 10–0–78–1, ಜೇಮಿ ಓವರ್ಟನ್ 5–0–27–2, ಲಿಯಾಮ್ ಲಿವಿಂಗ್‌ಸ್ಟೋನ್ 7–0–29–1, ಜೋ ರೂಟ್ 1.3–0–15–0
ಪಂದ್ಯದ ಆಟಗಾರ: ರೋಹಿತ್ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.