ADVERTISEMENT

ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ದೇಶಕ್ಕೆ ಅವರ ಅವಶ್ಯಕತೆ ಇದೆ: ತರೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2025, 11:35 IST
Last Updated 4 ಆಗಸ್ಟ್ 2025, 11:35 IST
<div class="paragraphs"><p>ವಿರಾಟ್‌ ಕೊಹ್ಲಿ ಹಾಗೂ ಶಶಿ ತರೂರ್‌</p></div>

ವಿರಾಟ್‌ ಕೊಹ್ಲಿ ಹಾಗೂ ಶಶಿ ತರೂರ್‌

   

ಕೃಪೆ: ಪಿಟಿಐ

ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅವರ ಆಟವನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಶಶಿ ತರೂರ್‌ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಸರಣಿ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಕೊಹ್ಲಿ, ದೀರ್ಘ ಮಾದರಿಗೆ ವಿದಾಯ ಹೇಳಿದ್ದರು. ಅದಕ್ಕೂ ಮೊದಲು, ರೋಹಿತ್‌ ಶರ್ಮಾ ಅವರೂ ನಿವೃತ್ತಿ ಘೋಷಿಸಿದ್ದರು. ಹೀಗಾಗಿ, ಯುವ ನಾಯಕ ಶುಭಮನ್‌ ಗಿಲ್‌ ಅವರು ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

ಅಮೋಘ ಪ್ರದರ್ಶನ ತೋರಿರುವ ಭಾರತ, ಐದು ಪಂದ್ಯಗಳ ಸರಣಿಯನ್ನು 2–2 ಅಂತರದಲ್ಲಿ ಡ್ರಾ ಮಾಡಿಕೊಂಡಿದೆ.

ರೂಟ್–ಬ್ರೂಕ್ ಕಾಡಿದ ಹೊತ್ತಲ್ಲಿ ತರೂರ್‌ ಟ್ವೀಟ್‌
ಟೂರ್ನಿಯ ಐದನೇ ಹಾಗೂ ಅಂತಿಮ ಪಂದ್ಯವು ಕೆನ್ನಿಂಗ್ಟನ್‌ ಓವಲ್‌ನಲ್ಲಿ ಇಂದು (ಸೋಮವಾರ) ಮುಕ್ತಾಯವಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯವನ್ನು ಭಾರತ 6 ರನ್‌ಗಳ ಅಲ್ಪ ಅಂತರದಿಂದ ಗೆದ್ದುಕೊಂಡಿದೆ.

ಆದರೆ, ನಾಲ್ಕನೇ ದಿನದಾಟದ ವೇಳೆ ಭಾರತ ಸೋಲಿನ ಭೀತಿಯಲ್ಲಿತ್ತು. ಭಾರತ ನೀಡಿದ್ದ 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಆತಿಥೇಯ ತಂಡಕ್ಕೆ, 'ಟೆಸ್ಟ್‌ ಪರಿಣತ' ಬ್ಯಾಟರ್‌ಗಳಾದ ಜೋ ರೂಟ್‌ (105 ರನ್‌) ಮತ್ತು ಹ್ಯಾರಿ ಬ್ರೂಕ್‌ (111 ರನ್‌) ಆಸರೆಯಾಗಿದ್ದರು. 106 ರನ್‌ಗೆ 3 ವಿಕೆಟ್‌ ಆಗಿದ್ದಾಗ ಜೊತೆಯಾದ ಈ ಇಬ್ಬರು, 4ನೇ ವಿಕೆಟ್‌ಗೆ 195 ರನ್‌ ಕೂಡಿಸುವ ಮೂಲಕ, ಪ್ರವಾಸಿ ಪಡೆಯನ್ನು ಇನ್ನಿಲದಂತೆ ಕಾಡಿದ್ದರು. ಹಾಗೆಯೇ, ಆತಿಥೇಯ ತಂಡಕ್ಕೆ ಸುಲಭ ಜಯದ ನಿರೀಕ್ಷೆ ಹುಟ್ಟಿಸಿದ್ದರು.

ಆ ಹೊತ್ತಿನಲ್ಲಿ ಟ್ವೀಟ್‌ ಮಾಡಿರುವ ತರೂರ್‌, ವಿರಾಟ್‌ ಕೊಹ್ಲಿ ಅವರ ಅನುಪಸ್ಥಿತಿ ಕಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಲವು ಬಾರಿ ಮಿಸ್ ಮಾಡಿಕೊಂಡಿದ್ದೇನೆ. ಅದರಲ್ಲೂ, ಈ (ಅಂತಿಮ) ಟೆಸ್ಟ್‌ ಪಂದ್ಯದ ವೇಳೆ ಮಿಸ್‌ ಮಾಡಿಕೊಂಡಷ್ಟು ಯಾವಾಗಲೂ ಮಿಸ್‌ ಮಾಡಿಕೊಂಡಿರಲಿಲ್ಲ. ಅವರ ಎದೆಗಾರಿಕೆ, ಆಟದ ತೀವ್ರತೆ, ಅವರ ಸ್ಫೂರ್ತಿದಾಯಕ ಉಪಸ್ಥಿತಿ, ಅಪಾರವಾದ ಬ್ಯಾಟಿಂಗ್ ಕೌಶಲಕ್ಕೆ ಫಲಿತಾಂಶವನ್ನೇ ಬದಲಿಸಬಲ್ಲ ತಾಕತ್ತು ಇತ್ತು. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆಯಲು ತಡವಾಯಿತೇ? ವಿರಾಟ್‌, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ!' ಎಂದು ಬರೆದುಕೊಂಡಿದ್ದಾರೆ.

ಪಂದ್ಯ ಗೆದ್ದ ಭಾರತ
ರೂಟ್–ಬ್ರೂಕ್ ಕಾಡಿದರೂ ಟೀಂ ಇಂಡಿಯಾ ಬೌಲರ್‌ಗಳು ಛಲ ಬಿಡದೆ ಆಡಿದರು. ನಾಲ್ಕನೇ ದಿನದ ಕೊನೇ ಹಂತದಲ್ಲಿ ಅವರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಕೊನೇ ದಿನ ಪಂದ್ಯ ಜಯಿಸಲು ಆತಿಥೇಯರಿಗೆ 35 ರನ್‌ ಹಾಗೂ ಭಾರತಕ್ಕೆ 4 ವಿಕೆಟ್‌ಗಳ ಅವಶ್ಯಕತೆ ಇತ್ತು.

ದಿನದಾಟದ ಆರಂಭದಲ್ಲೇ ಮೇಲುಗೈ ಸಾಧಿಸಿದ ಭಾರತ, ಆಂಗ್ಲರ ಪಡೆಯನ್ನು 367 ರನ್‌ಗೆ ಆಲೌಟ್‌ ಮಾಡುವ ಮೂಲಕ ಜಯದ ನಗೆ ಬೀರಿತು. ಇದರೊಂದಿಗೆ ಸರಣಿ ಡ್ರಾ ಆಗಿದೆ.

ಲೀಡ್ಸ್‌ನಲ್ಲಿ ಮೊದಲ ಪಂದ್ಯವನ್ನು 5 ವಿಕೆಟ್‌ ಅಂತರದಿಂದ ಗೆದ್ದಿದ್ದ ಆಂಗ್ಲರು, ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ 336 ರನ್‌ ಅಂತರದಿಂದ ಮುಗ್ಗರಿಸಿದ್ದರು. ನಂತರ, ಲಾರ್ಡ್ಸ್‌ನಲ್ಲಿ ಪುನಃ ಮೇಲುಗೈ ಸಾಧಿಸಿ 22 ರನ್‌ ಅಂತರದ ಜಯ ಸಾಧಿಸಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯ ಡ್ರಾ ಆಗಿತ್ತು.

ಕೊಹ್ಲಿ ಸಾಧನೆ
2011ರಲ್ಲಿ (ವೆಸ್ಟ್‌ ಇಂಡೀಸ್‌ ವಿರುದ್ಧ) ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ವಿರಾಟ್‌ ಕೊಹ್ಲಿ, 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಅವರ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ, 31 ಅರ್ಧಶತಕಗಳು ಬಂದಿವೆ.

2014ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಕೊಹ್ಲಿ, ಈ ಮಾದರಿಯಲ್ಲಿ ಭಾರತದ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ 68 ಪಂದ್ಯಗಳಲ್ಲಿ ಭಾರತ 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋಲು ಕಂಡರೆ, ಉಳಿದ 11 ಡ್ರಾ ಆಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.