ವಿಕೆಟ್ ಪಡೆದ ಸಂಭ್ರಮದಲ್ಲಿ ಜಸ್‌ಪ್ರೀತ್ ಬೂಮ್ರಾ
ಚಿತ್ರ: ರಾಯಿಟರ್ಸ್
ಲಾರ್ಡ್ಸ್: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 387 ರನ್ ಗಳಿಸಿ ಆಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 251 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ವೇಗಿ ಜಸ್‌ಪ್ರೀತ್ ಬೂಮ್ರಾ, ಎರಡನೇ ದಿನ ಆರಂಭದಲ್ಲೇ ಆಘಾತ ನೀಡಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಶತಕ ಸಿಡಿಸಿದ ಜೋ ರೂಟ್, ನಾಯಕ ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಅವರನ್ನು ಬೆನ್ನುಬೆನ್ನಿಗೆ ಔಟ್ ಮಾಡಿದ ಬೂಮ್ರಾ, ಶುಭಮನ್ ಗಿಲ್ ಬಳಗಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ರಕ್ಷಣಾತ್ಮಕವಾಗಿ ಆಡುತ್ತಿದ್ದ ರೂಟ್ (104 ರನ್) ಹಾಗೂ ಸ್ಟೋಕ್ಸ್ (44 ರನ್) ಕ್ಲೀನ್ ಬೌಲ್ಡ್ ಆದರೆ ವೋಕ್ಸ್ ಎಲ್‌ಬಿ ಬಲೆಗೆ ಬಿದ್ದರು.
ಸ್ಮಿತ್ – ಕೇರ್ಸ್ ಆಸರೆ
ಬೂಮ್ರಾ ದಾಳಿಯಿಂದ ಕಂಗೆಟ್ಟ ಆತಿಥೇಯರಿಗೆ ಜೆಮೀ ಸ್ಮಿತ್ ಮತ್ತು ಬ್ರೇಯ್ಡನ್ ಕೇರ್ಸ್ ಆಸರೆಯಾದರು. ತಂಡದ ಮೊತ್ತ 7 ವಿಕೆಟ್‌ಗೆ 271 ರನ್ ಆಗಿದ್ದಾಗ ಜೊತೆಯಾದ ಇವರಿಬ್ಬರು, 84 ರನ್ ಕೂಡಿಸಿದರು.
ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಸ್ಮಿತ್, 56 ಎಸೆತಗಳಲ್ಲಿ 51 ರನ್ ಗಳಿಸಿದರು. ಅವರು, ಔಟಾದ ನಂತರ ಬೀಸಾಟಕ್ಕೆ ಒತ್ತು ನೀಡಿದ ಕೇರ್ಸ್ ತಂಡದ ಮೊತ್ತ 380ರ ಗಡಿ ದಾಟಲು ಕಾರಣರಾದರು.
83 ಎಸೆತಗಳಲ್ಲಿ 56 ರನ್ ಗಳಿಸಿದ್ದ ಅವರನ್ನು ಮೊಹಮ್ಮದ್ ಸಿರಾಜ್ ಬೌಲ್ಡ್ ಮಾಡುವುದರೊಂದಿಗೆ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಬಿದ್ದಿತು. ಕೇರ್ಸ್‌ಗೆ ಇದು ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಅರ್ಧಶತಕ.
ಭಾರತ ಪರ ಜಸ್‌ಪ್ರಿತ್ ಬೂಮ್ರಾ 5 ವಿಕೆಟ್ ಗೊಂಚಲು ಸಾಧನೆ ಮಾಡಿದರು. ಸಿರಾಜ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜ ಒಂದು ವಿಕೆಟ್ ಕಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.