ADVERTISEMENT

ಟೆಸ್ಟ್ ಕ್ರಿಕೆಟ್: ಸಚಿನ್ ದಾಖಲೆ ಮುರಿಯಲು ರೂಟ್‌ಗೆ ಬೇಕು ಇನ್ನೊಂದು ಅರ್ಧಶತಕ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2025, 13:10 IST
Last Updated 25 ಜುಲೈ 2025, 13:10 IST
<div class="paragraphs"><p>ಜೋ ರೂಟ್‌ ಹಾಗೂ ಸಚಿನ್‌ ತೆಂಡೂಲ್ಕರ್‌</p></div>

ಜೋ ರೂಟ್‌ ಹಾಗೂ ಸಚಿನ್‌ ತೆಂಡೂಲ್ಕರ್‌

   

ಕೃಪೆ: ಪಿಟಿಐ

ಮ್ಯಾಂಚೆಸ್ಟರ್‌: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿರುವ ಇಂಗ್ಲೆಂಡ್‌ನ ಜೋ ರೂಟ್‌, ಈ ಮಾದರಿಯಲ್ಲಿ ಹೆಚ್ಚು ಫಿಫ್ಟಿ ಗಳಿಸಿದ ಎರಡನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ADVERTISEMENT

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 358 ರನ್‌ ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಆತಿಥೇಯ ತಂಡ, ಮೂರನೇ ದಿನ ಊಟದ ವಿರಾಮದ ಹೊತ್ತಿಗೆ 74 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 332 ರನ್‌ ಗಳಿಸಿದೆ.

70 ರನ್ ಗಳಿಸಿರುವ ಓಲಿ ಪೋಪ್‌ ಮತ್ತು 63 ರನ್‌ ಗಳಿಸಿರುವ ಜೋ ರೂಟ್‌ ಕ್ರೀಸ್‌ನಲ್ಲಿದ್ದಾರೆ. ಭಾರತದ ಲೆಕ್ಕ ಚುಕ್ತಾ ಮಾಡಲು ಕೇವಲ 26 ರನ್‌ ಬೇಕಿದೆ.

ಸಚಿನ್‌ ದಾಖಲೆ ಸನಿಹ
ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್‌ಗೆ ಇದು 67ನೇ ಅರ್ಧಶತಕ.

'ಫಿಫ್ಟಿ' ಗಳಿಕೆಯಲ್ಲಿ ದಿಗ್ಗಜ ಸಚಿನ್‌ ತೆಂಡೂಲ್ಕರ್ ಅವರಷ್ಟೇ ರೂಟ್‌ಗಿಂತ ಮುಂದಿದ್ದಾರೆ. ಅವರು 67 ಬಾರಿ ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿ, ಇನ್ನೊಂದು ಸಲ 50 ರನ್‌ ಬಾರಿಸಿದರೆ ಸಚಿನ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ ರೂಟ್‌.

ವೆಸ್ಟ್ ಇಂಡೀಸ್‌ನ ಶಿವನಾರಾಯಣ್‌ ಚಂದ್ರಪಾಲ್‌ 66 ಬಾರಿ ಈ ಸಾಧನೆ ಮಾಡಿದ್ದಾರೆ. ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌ (63), ಭಾರತದ ರಾಹುಲ್‌ ದ್ರಾವಿಡ್‌ (63), ಆಸಿಸ್‌ ಮಾಜಿ ನಾಯಕ ರಿಕಿ ಪಾಂಟಿಂಗ್ (62) ಇದ್ದಾರೆ.

ಒಟ್ಟಾರೆ ಹೆಚ್ಚು ಬಾರಿ 50ಕ್ಕಿಂತ ಅಧಿಕ ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲೂ ರೂಟ್‌ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್‌ 119 ಬಾರಿ (51 ಶತಕ, 68 ಅರ್ಧಶತಕ) ಹಾಗೂ ರೂಟ್‌ 104 ಸಲ (37 ಶತಕ, 67 ಅರ್ಧಶತಕ) ಈ ಸಾಧನೆ ಮಾಡಿದ್ದಾರೆ. ತಲಾ 103 ಸಲ ಇಷ್ಟು ರನ್‌ ಗಳಿಸಿರುವ ರಿಕಿ ಪಾಂಟಿಂಗ್‌ ಮತ್ತು ಜಾಕ್‌ ಕಾಲಿಸ್‌ ನಂತರದ ಸ್ಥಾನಗಳಲ್ಲಿ ಇದ್ದಾರೆ. ದ್ರಾವಿಡ್‌ 99 ಬಾರಿ ಅರ್ಧಶತಕ ಗಡಿ ದಾಟಿದ್ದಾರೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ಸಾವಿರ ರನ್‌
ಅಮೋಘ ಅರ್ಧಶತಕದೊಂದಿಗೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಸಾವಿರ ರನ್‌ ಕಲೆಹಾಕಿದ ಏಕೈಕ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ ರೂಟ್‌.

2,217 ರನ್‌ ಕಲೆಹಾಕುವ ಮೂಲಕ 'ಕ್ರಿಕೆಟ್‌ ಕಾಶಿ' ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿರುವ ರೂಟ್, ಎರಡು ಕ್ರೀಡಾಂಗಣಗಳಲ್ಲಿ ಸಾವಿರಕ್ಕಿಂತ ಅಧಿಕ ರನ್‌ ಗಳಿಸಿದ ಇಂಗ್ಲೆಂಡ್‌ನ ಮೂರನೇ ಬ್ಯಾಟರ್‌ ಆಗಿದ್ದಾರೆ. ಮಾಜಿ ಆಟಗಾರರಾದ ಗ್ರಾಹಂ ಗೂಚ್‌ ಮತ್ತು ಆಲಿಸ್ಟರ್‌ ಕುಕ್‌ ಅವರು ಲಾರ್ಡ್ಸ್‌ ಮತ್ತು ದಿ ಓವಲ್‌ನಲ್ಲಿ ಈ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.