ADVERTISEMENT

ಆರಂಭಿಕನಾಗಿ ಗರಿಷ್ಠ ರನ್: ಗವಾಸ್ಕರ್ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿದ ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2025, 3:14 IST
Last Updated 2 ಆಗಸ್ಟ್ 2025, 3:14 IST
<div class="paragraphs"><p>ಕನ್ನಡಿಗ ಕೆ.ಎಲ್‌. ರಾಹುಲ್‌</p></div>

ಕನ್ನಡಿಗ ಕೆ.ಎಲ್‌. ರಾಹುಲ್‌

   

ಪಿಟಿಐ ಚಿತ್ರ

ಲಂಡನ್‌: ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ ಸರಣಿಯೊಂದರಲ್ಲಿ ಭಾರತದ ಪರ ಗರಿಷ್ಠ ರನ್‌ ಕಲೆಹಾಕಿದ ಆರಂಭಿಕ ಬ್ಯಾಟರ್‌ ಎನಿಸಿಕೊಳ್ಳುವ ಅವಕಾಶವನ್ನು ಕನ್ನಡಿಗ ಕೆ.ಎಲ್‌. ರಾಹುಲ್‌ ಕೈಚೆಲ್ಲಿದರು.

ADVERTISEMENT

ಆತಿಥೇಯರ ವಿರುದ್ಧದ ಸರಣಿಯ ಐದನೇ ಪಂದ್ಯದಲ್ಲಿ ಕೇವಲ 21 ರನ್‌ ಗಳಿಸಿದ ಅವರು, ಅಗ್ರಸ್ಥಾನಕ್ಕೇರುವ ಅವಕಾಶವನ್ನು ಕೇವಲ 10 ರನ್‌ ಕೊರತೆಯಿಂದ ಕಳೆದುಕೊಂಡರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 14 ರನ್‌ ಗಳಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಗಳಿಸಿದ್ದು 7 ರನ್‌ ಮಾತ್ರ.

ಪ್ರಸ್ತುತ ಟೂರ್ನಿಯಲ್ಲಿ ಐದೂ ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ರಾಹುಲ್, ತಲಾ ಎರಡು ಶತಕ ಮತ್ತು ಅರ್ಧಶತಕ ಸಹಿತ 532 ರನ್‌ ಕಲೆಹಾಕಿದ್ದಾರೆ.

ಬ್ಯಾಟಿಂಗ್‌ ದಿಗ್ಗಜ, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಅವರು 1979ರಲ್ಲಿ ಆರಂಭಿಕನಾಗಿ 542 ರನ್ ಕಲೆಹಾಕಿದ್ದರು. ಅದು ಇನ್ನೂ ದಾಖಲೆಯಾಗಿದೆ.

ಇಂಗ್ಲೆಂಡ್‌ನಲ್ಲಿ ಗರಿಷ್ಠ ಮೊತ್ತ ಕಲೆಹಾಕಿದ ಭಾರತದ ಆರಂಭಿಕರು

* ಸುನಿಲ್‌ ಗವಾಸ್ಕರ್‌ – 542 ರನ್ (1979)
* ಕೆ.ಎಲ್‌. ರಾಹುಲ್‌ – 532 ರನ್ (2025)
* ಮುರುಳಿ ವಿಜಯ್‌ – 402 ರನ್ (2014)
* ರೋಹಿತ್‌ ಶರ್ಮಾ – 368 ರನ್‌ (2021–22)

ಭಾರತದ ಪ್ರತಿ ಹೋರಾಟ
ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ ಗೆಲ್ಲಲು ಭಾರತ ಪ್ರತಿ ಹೋರಾಟ ನಡೆಸುತ್ತಿದೆ. 23 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಶುಭಮನ್‌ ಗಿಲ್‌ ಬಳಗ, 2 ವಿಕೆಟ್‌ಗೆ 75 ರನ್ ಗಳಿಸಿದೆ. 52 ರನ್‌ ಮುನ್ನಡೆಯೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದೆ.

ಅರ್ಧಶತಕ ಗಳಿಸಿರುವ ಯಶಸ್ವಿ ಜೈಸ್ವಾಲ್‌ (51 ರನ್‌) ಮತ್ತು 'ರಾತ್ರಿ ಕಾವಲುಗಾರ' ಆಕಾಶ್‌ ದೀಪ್‌ (4 ರನ್‌) ಕ್ರೀಸ್‌ನಲ್ಲಿದ್ದಾರೆ.

ಇನ್ನೂ ಮೂರು ದಿನಗಳ ಬಾಕಿ ಇದ್ದು, ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಆತಿಥೇಯ ತಂಡ ಸರಣಿಯಲ್ಲಿ ಈಗಾಗಲೇ 2–1 ಅಂತರದ ಮುನ್ನಡೆಯಲ್ಲಿದೆ. ಹೀಗಾಗಿ, ಈ ಪಂದ್ಯದಲ್ಲಿ ಜಯ ಇಲ್ಲವೇ ಡ್ರಾ ಸಾಧಿಸಿದರೆ, ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ. ಆದರೆ, ಭಾರತದ ಪರಿಸ್ಥಿತಿ ಹಾಗಿಲ್ಲ. ಸರಣಿ ಕಳೆದುಕೊಳ್ಳದಿರಲು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.