ADVERTISEMENT

IND vs ENG Stats: 56 ನಿಮಿಷಗಳ ಥ್ರಿಲ್ಲರ್; ಭಾರತಕ್ಕೆ ಸ್ಮರಣೀಯ ಗೆಲುವು

ಇತ್ತಂಡಗಳಿಂದ ಒಟ್ಟು 7,187 ರನ್, 21 ಶತಕ, 50 ಫಿಫ್ಟಿ ಪ್ಲಸ್ ಸ್ಕೋರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2025, 6:00 IST
Last Updated 5 ಆಗಸ್ಟ್ 2025, 6:00 IST
<div class="paragraphs"><p>ಟೀಮ್ ಇಂಡಿಯಾ ಆಟಗಾರರ ಸಂಭ್ರಮ</p></div>

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

   

(ಪಿಟಿಐ ಚಿತ್ರ)

ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರ ಅಂತರದ ಸಮಬಲ ಸಾಧಿಸಿದೆ.

ADVERTISEMENT

ಕೊನೆಯ ದಿನದಾಟದಲ್ಲಿ 56 ನಿಮಿಷಗಳ ಕಾಲ ರೋಚಕತೆ ಮನೆ ಮಾಡಿತ್ತು. ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ಬ್ಯಾಟರ್ ಗಸ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಭಾರತ ಸ್ಮರಣೀಯ ಗೆಲುವು ದಾಖಲಿಸಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ದಾಖಲಿಸಿದ ಅತಿ ಕಡಿಮೆ ಅಂತರದ ಜಯ ಇದಾಗಿದೆ. 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಾಂಖೆಡೆ ಮೈದಾನದಲ್ಲಿ 13 ರನ್ ಅಂತರದ ಜಯ ಗಳಿಸಿತ್ತು. ಇನ್ನು 1972ರಲ್ಲಿ ಇಂಗ್ಲೆಂಡ್ ವಿರುದ್ಧವೇ 28 ಮತ್ತು 2018ರಲ್ಲಿ ಆಸ್ಟ್ರೇಲಿಯಾ 31 ರನ್‌ಗಳ ಜಯ ಸಾಧಿಸಿತ್ತು.

ಒಂದು ಹಂತದಲ್ಲಿ ಐದು ವಿಕೆಟ್ ನಷ್ಟಕ್ಕೆ 332 ರನ್ ಗಳಿಸಿದ್ದ ಇಂಗ್ಲೆಂಡ್ ದಿಢೀರ್ ಪತನ ಕಂಡಿತ್ತಲ್ಲದೆ 367 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ಎರಡೂ ಇನಿಂಗ್ಸ್‌ಗಳಲ್ಲಿ ತಲಾ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದರು. ಈ ಪೈಕಿ ಸಿರಾಜ್ ಎರಡನೇ ಇನಿಂಗ್ಸ್‌ನಲ್ಲಿ ಐದರ ಗೊಂಚಲನ್ನು ಪಡೆದರು.

ಎಲ್ಲ ಐದು ಪಂದ್ಯಗಳನ್ನು ಆಡಿದ ಸಿರಾಜ್ ಒಟ್ಟು 23 ವಿಕೆಟ್‌ಗಳನ್ನು ಗಳಿಸಿದರು. ಆ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದರು.

ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್‌ಗಳ ಪೈಕಿ ಜಸ್‌ಪ್ರೀತ್ ಬೂಮ್ರಾ ದಾಖಲೆಯನ್ನು ಸರಿಗಟ್ಟಿದರು. 2021-22ರ ಸರಣಿಯಲ್ಲಿ ಬೂಮ್ರಾ 23 ವಿಕೆಟ್‌ಗಳನ್ನು ಗಳಿಸಿದ್ದರು.

ಮೊಹಮ್ಮದ್ ಸಿರಾಜ್ ಸಂಭ್ರಮ

ಆ್ಯಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಒಟ್ಟು 12 ಶತಕಗಳನ್ನು ಗಳಿಸಿದರು. ಇದು ಉಭಯ ಸರಣಿಯಲ್ಲಿ ತಂಡವೊಂದರ ಶ್ರೇಷ್ಠ ಸಾಧನೆಯಾಗಿದೆ. ಹಾಗೆಯೇ ಸರಣಿಯಲ್ಲಿ ಒಟ್ಟು 21 ಶತಕಗಳು ಹಾಗೂ 50 ಫಿಫ್ಟಿ ಪ್ಲಸ್ ಸ್ಕೋರ್ ದಾಖಲಾದವು.

ತಮ್ಮ ಚೊಚ್ಚಲ ನಾಯಕತ್ವದ ಸರಣಿಯಲ್ಲೇ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ನಾಯಕ ಶುಭಮನ್ ಗಿಲ್, ರನ್ ಬೇಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡರು. ಐದು ಪಂದ್ಯಗಳ ಸರಣಿಯಲ್ಲಿ 75.40ರ ಸರಾಸರಿಯಲ್ಲಿ ಒಟ್ಟು 754 ರನ್ ಗಳಿಸಿದರು. ಗಿಲ್ ಗರಿಷ್ಠ ಸ್ಕೋರ್ 269 ಆಗಿದೆ.

ಸರಣಿಯಲ್ಲಿ ಇತ್ತಂಡಗಳಿಂದ ದಾಖಲಾದ ಒಟ್ಟು ಮೊತ್ತ 7,187 ಆಗಿದೆ. ಈ ಪೈಕಿ ಭಾರತವು ಒಟ್ಟು 3,807 ರನ್ ಪೇರಿಸಿತು. ಇದು ಕೂಡ ದಾಖಲೆಯಾಗಿದೆ.

ಭಾರತದ ಪರ ಮೂವರು ಬ್ಯಾಟರ್‌ಗಳು 500ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದರು. ಶುಭಮನ್ ಗಿಲ್, ಕೆ.ಎಲ್. ರಾಹುಲ್ ಹಾಗೂ ರವೀಂದ್ರ ಜಡೇಜ 500 ರನ್‌ಗಳ ಗಡಿ ದಾಟಿದರು.

ಪಂದ್ಯ ಶ್ರೇಷ್ಠ: ಮೊಹಮ್ಮದ್ ಸಿರಾಜ್

ಸರಣಿ ಶ್ರೇಷ್ಠರು:

  • ಭಾರತ - ಶುಭಮನ್ ಗಿಲ್ (ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಆಯ್ಕೆ)

  • ಇಂಗ್ಲೆಂಡ್ - ಹ್ಯಾರಿ ಬ್ರೂಕ್ (ಭಾರತದ ಕೋಚ್ ಗೌತಮ್ ಗಂಭೀರ್ ಆಯ್ಕೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.