ADVERTISEMENT

Champions Trophy Final: IND vs NZ; ಹಿಂದಿನ ಹೋರಾಟಗಳಲ್ಲಿ ಮೇಲುಗೈ ಯಾರದ್ದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2025, 10:21 IST
Last Updated 8 ಮಾರ್ಚ್ 2025, 10:21 IST
<div class="paragraphs"><p>ನ್ಯೂಜಿಲೆಂಡ್‌ ಹಾಗೂ&nbsp;ಭಾರತ ತಂಡದ ಆಟಗಾರರು</p></div>

ನ್ಯೂಜಿಲೆಂಡ್‌ ಹಾಗೂ ಭಾರತ ತಂಡದ ಆಟಗಾರರು

   

ರಾಯಿಟರ್ಸ್‌ ಚಿತ್ರಗಳು

ದುಬೈ: ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಾಳೆ (ಮಾರ್ಚ್‌ 9) ಪಂದ್ಯ ನಡೆಯಲಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿರುವ ಈ ತಂಡಗಳು ಟ್ರೋಫಿ ಎತ್ತಿ ಹಿಡಿಯಲು ತುದಿಗಾಲಲ್ಲಿ ನಿಂತಿವೆ.

ADVERTISEMENT

ಈ ಟೂರ್ನಿಯಲ್ಲಿ 5ನೇ ಬಾರಿ ಫೈನಲ್‌ ತಲುಪಿರುವ ಭಾರತ ಗೆದ್ದರೆ ಇದು ಮೂರನೇ ಪ್ರಶಸ್ತಿಯಾಗಲಿದೆ. 3ನೇ ಬಾರಿ ಅಂತಿಮ ಹಂತ ತಲುಪಿರುವ ನ್ಯೂಜಿಲೆಂಡ್‌ ಗೆದ್ದರೆ, ಎರಡನೇ ಟ್ರೋಫಿ ಇದಾಗಲಿದೆ.

ಫೈನಲ್‌ ಹಾದಿ
ಟೂರ್ನಿಯ ಆರಂಭಿಕ ಹಂತದಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಈ ತಂಡಗಳು ಈಗಾಗಲೇ ಒಂದು ಸಲ ಸೆಣಸಾಟ ನಡೆಸಿವೆ. ಇದೇ ಕ್ರೀಡಾಂಗಣದಲ್ಲಿ ಮಾರ್ಚ್‌ 2ರಂದು ನಡೆದ ಪಂದ್ಯದಲ್ಲಿ ಭಾರತ 44 ರನ್‌ ಅಂತರದ ಜಯ ಸಾಧಿಸಿದೆ.

ರೋಹಿತ್‌ ಶರ್ಮಾ ನಾಯಕತ್ವದ ಭಾರತ ಗುಂಪು ಹಂತದಲ್ಲಿ ನ್ಯೂಜಿಲೆಂಡ್‌ಗೆ ಸೋಲುಣಿಸುವ ಮುನ್ನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನು ಮಣಿಸಿತ್ತು. ಹೀಗಾಗಿ, 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ ತಲುಪಿತ್ತು.

ಇತ್ತ ಮಿಚೇಲ್‌ ಸ್ಯಾಂಟನರ್‌ ಬಳಗ, ಟೀ ಇಂಡಿಯಾ ಎದುರು ಪರಾಭವಗೊಂಡಿರುವುದನ್ನು ಬಿಟ್ಟರೆ, ಉಳಿದ ತಂಡಗಳ ವಿರುದ್ಧ ಪರಾಕ್ರಮ ತೋರಿದೆ. ಗುಂಪು ಹಂತದಲ್ಲಿ ಕ್ರಮವಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಸೋಲಿಸಿ, ಎರಡನೇ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿತ್ತು.

ಉಪಾಂತ್ಯದ ಹೋರಾಟದಲ್ಲಿ ರೋಹಿತ್‌ ಪಡೆ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದರೆ, ಸ್ಯಾಂಟನರ್‌ ಬಳಗ ದಕ್ಷಿಣ ಆಫ್ರಿಕಾ ಎದುರು 50 ರನ್‌ ಅಂತರದಿಂದ ಗೆದ್ದು ಅಂತಿಮ ಹಂತ ತಲುಪಿದೆ.

ಮುಖಾಮುಖಿ ಅಂಕಿ–ಅಂಶ
ಏಕದಿನ ಮಾದರಿಯಲ್ಲಿ ಉಭಯ ತಂಡಗಳು ಈವರೆಗೆ 119 ಸಲ ಮುಖಾಮುಖಿಯಾಗಿವೆ. ಈ ಪೈಕಿ, ಭಾರತ 61ರಲ್ಲಿ ಗೆದ್ದಿದ್ದರೆ, ನ್ಯೂಜಿಲೆಂಡ್‌ 50 ಸಲ ಜಯ ಸಾಧಿಸಿದೆ. 1 ಪಂದ್ಯ ಟೈ ಆಗಿದ್ದು, 7 ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿವೆ.

ಯುಎಇ ಅಂಗಳದಲ್ಲಿ ಆರು ಬಾರಿ ಸೆಣಸಾಟ ನಡೆಸಿದ್ದು, ಈ ಪೈಕಿ ಭಾರತ ಐದು ಸಲ ಜಯ ಗಳಿಸಿದೆ.

ಈ ತಂಡಗಳು ಇತ್ತೀಚಿನ ದಿನಗಳಲ್ಲಿ ಮುಖಾಮುಖಿಯಾದಾಗ ಭಾರತವೇ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ 2022ರಿಂದ ಒಮ್ಮೆಯೂ ಕಿವೀಸ್‌ ಎದುರು ಸೋತಿಲ್ಲ ಎಂಬುದು ವಿಶೇಷ.

ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ಮೇಲ್ನೋಟಕ್ಕೆ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ. ಆದರೆ, ಯಾವುದೇ ಹಂತದಲ್ಲಿ ಪುಟಿದೇಳಬಲ್ಲ ಸಾಮರ್ಥ್ಯವನ್ನು ನ್ಯೂಜಿಲೆಂಡ್‌ ಹೊಂದಿದೆ. ಹಾಗಾಗಿ, ಜಿದ್ದಾಜಿದ್ದಿನ ಸೆಣಸಾಟವನ್ನು ನಿರೀಕ್ಷಿಸಬಹುದಾಗಿದೆ.

ಚಾಂಪಿಯನ್ಸ್‌ ಟ್ರೋಫಿ ಫೈನಲ್‌
'ಮೆನ್‌ ಇನ್‌ ಬ್ಲೂ' ಹಾಗೂ 'ಬ್ಲ್ಯಾಕ್‌ ಕ್ಯಾಪ್ಸ್‌' ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಸಲ. ಈ ಹಿಂದೆ 2000ನೇ ಇಸವಿಯಲ್ಲಿ ಭಾರತವನ್ನು 4 ವಿಕೆಟ್‌ಗಳಿಂದ ಮಣಿಸಿದ್ದ ಕಿವೀಸ್‌, ಮೊದಲ ಸಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

ಅದೇ ಫಲಿತಾಂಶವನ್ನು ಪುನರಾವರ್ತಿಸುವ ಬಯಕೆ ಸ್ಯಾಂಟನರ್‌ ಬಳಗದ್ದು. ಆದರೆ, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ರೋಹಿತ್ ಪಡೆ.

ಪ್ರಮುಖ ಆಟಗಾರರ ಸಾಧನೆ
ಎರಡೂ ತಂಡಗಳ ಮುಖಾಮುಖಿ ಹೋರಾಟದ ವೇಳೆ ಗರಿಷ್ಠ ರನ್‌ ಗಳಿಸಿದ ದಾಖಲೆ ಇರುವುದು ಭಾರತದ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿ. ಅವರು 42 ಪಂದ್ಯಗಳಲ್ಲಿ 5 ಶತಕ ಹಾಗೂ 8 ಅರ್ಧಶತಕ ಸಹಿತ 1,750 ರನ್ ಗಳಿಸಿದ್ದಾರೆ.

ಸದ್ಯ ಭಾರತ ತಂಡದಲ್ಲಿ ಆಡುತ್ತಿರುವ 'ಸೂಪರ್ ಸ್ಟಾರ್‌' ವಿರಾಟ್‌ ಕೊಹ್ಲಿ, ನಂತರದ ಸ್ಥಾನದಲ್ಲಿದ್ದಾರೆ. ಆಡಿರುವ 35 ಪಂದ್ಯಗಳಲ್ಲಿ 5 ಶತಕ ಮತ್ತು 10 ಅರ್ಧಶತಕ ಸಹಿತ 1,656 ರನ್‌ ಅವರ ಬ್ಯಾಟ್‌ನಿಂದ ಬಂದಿವೆ. ಮೊದಲ ಸ್ಥಾನಕ್ಕೇರಲು ಕೊಹ್ಲಿಗೆ 94 ರನ್‌ ಬೇಕಿದೆ.

35 ಪಂದ್ಯಗಳಲ್ಲಿ 1,385 ರನ್‌ ಗಳಿಸಿರುವ ನ್ಯೂಜಿಲೆಂಡ್‌ನ ರಾಸ್‌ ಟೇಲರ್‌ ಮೂರನೇ ಸ್ಥಾನದಲ್ಲಿದ್ದಾರೆ.

ವಿಕೆಟ್‌ ಗಳಿಕೆಯಲ್ಲಿ ಭಾರತದ ಜಾವಗಲ್‌ ಶ್ರೀನಾಥ್‌ ಮುಂಚೂಣಿಯಲ್ಲಿದ್ದಾರೆ. 30 ಪಂದ್ಯಗಳಲ್ಲಿ ಅವರು 51 ವಿಕೆಟ್‌ ಕಬಳಿಸಿದ್ದಾರೆ. ಕಿವೀಸ್‌ ಪಡೆಯ ಟಿಮ್‌ ಸೌಥಿ (25 ಪಂದ್ಯ, 38 ವಿಕೆಟ್‌) ನಂತರದ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.